ಬೆಳಗಾವಿ: "ಈಗಾಗಲೇ ಜಿಲ್ಲೆಯ ನಾಯಕರ ಜೊತೆಗೆ ಚರ್ಚೆಯಾಗಿರುವುದನ್ನು ಗಮನಿಸಿದರೆ, ಯಾವುದೇ ಅಡ್ಡಿ ಆತಂಕವಿಲ್ಲದೇ ಬೆಳಗಾವಿ ಮತ್ತು ಚಿಕ್ಕೋಡಿಯಲ್ಲಿ ನಮ್ಮ ಅಭ್ಯರ್ಥಿಗಳು ದೊಡ್ಡ ಅಂತರದಲ್ಲಿ ಗೆಲ್ಲುವ ವಿಶ್ವಾಸವಿದೆ" ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಬೆಳಗಾವಿಯಲ್ಲಿ ಮಂಗಳವಾರ ಮಾಧ್ಯಮಗಳ ಜತೆಗೆ ಮಾತನಾಡಿದ ಅವರು, "ಎಲ್ಲಿ ಹೋದರೂ ಮೋದಿಯವರ ಹೆಸರು ಕೇಳುತ್ತಿದ್ದೇವೆ. ಚಿಕ್ಕೋಡಿ, ಬೆಳಗಾವಿ ಸೇರಿದಂತೆ 28 ಕ್ಷೇತ್ರಗಳನ್ನು ನಾವು ಗೆಲ್ಲುತ್ತೇವೆ. ಈಗ ಜಿಲ್ಲೆಯ ಪ್ರಮುಖ ನಾಯಕರೊಂದಿಗೆ ಮಾತುಕತೆ ಮಾಡುತ್ತಿದ್ದೇನೆ. ಈಗಾಗಲೇ ರಾಜ್ಯದ ಉದ್ದಗಲಕ್ಕೂ ಪ್ರಚಾರ ಆರಂಭಿಸಿದ್ದು, ಒಂದು ಬಾರಿ ಬೆಳಗಾವಿಗೆ ಮೋದಿ ಅವರ ಬರಬೇಕು ಎನ್ನುವ ಅಪೇಕ್ಷೆ ಜಿಲ್ಲೆಯ ನಾಯಕರದ್ದು. ಆ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಿ ಮೋದಿ ಅವರನ್ನು ಬೆಳಗಾವಿಗೆ ಕರೆಸಲಾಗುವುದು" ಎಂದರು.
ಜಿಲ್ಲೆಯಲ್ಲಿರುವ ಬಣ ರಾಜಕೀಯ ಸರಿ ಹೋಯಿತೇ ಎಂಬ ಮಾಧ್ಯಮದವರ ಪ್ರಶ್ನೆಗೆ, "ಯಾವುದೇ ಗೊಂದಲ ಇಲ್ಲ. ಆ ರೀತಿ ಕಲ್ಪನೆಯನ್ನೂ ಮಾಡಿಕೊಳ್ಳುವುದು ಬೇಡ. ಯಾವುದೇ ರೀತಿ ಒಡಕಿನ ಒಂದು ಶಬ್ದವನ್ನೂ ಯಾರೂ ಮಾತಾಡಿಲ್ಲ. ನಾವೆಲ್ಲಾ ಒಟ್ಟಾಗಿ, ಒಂದಾಗಿ ಚುನಾವಣೆ ಮಾಡುತ್ತೇವೆ. ಎರಡು ದಿನ ಸಮಯ ಕೊಟ್ಟು ಪ್ರತೀ ವಿಧಾನಸಭೆ ಕ್ಷೇತ್ರಕ್ಕೆ ನಾನು ಮತ್ತು ನಮ್ಮ ಮುಖಂಡರು ಬರುತ್ತೇವೆ" ಎಂದು ತಿಳಿಸಿದರು.
"ಬೆಳಗಾವಿಯಲ್ಲಿ ಬುಧವಾರ ಕಾರ್ಯಕರ್ತರ ಸಭೆ ಇರುವ ಹಿನ್ನೆಲೆಯಲ್ಲಿ ಇಲ್ಲಿಗೆ ಬಂದಿದ್ದೇನೆ. ಅಸಮಾಧಾನ ಗುಲಗಂಜಿಯಷ್ಟೂ ಇಲ್ಲ. ಹಾಗೆಯೇ ಜಗದೀಶ್ ಶೆಟ್ಟರ್ ಹೊರಗಿನವರು ಎಂಬ ಭಾವನೆ ಯಾರಲ್ಲೂ ಇಲ್ಲ. ಶೆಟ್ಟರ್ ಅವರಂಥ ದೊಡ್ಡ ನಾಯಕ ಬೇಕು ಎಂಬ ಕಾರಣಕ್ಕೆ ನಾವೇ ಅವರನ್ನು ಮರಳಿ ಪಕ್ಷಕ್ಕೆ ಕರೆದುಕೊಂಡು ಬಂದಿದ್ದೇವೆ. ಅತ್ಯಂತ ಖುಷಿಯಿಂದಲೇ ಬೆಳಗಾವಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ" ಎಂದರು.
ಉತ್ತರ ಕರ್ನಾಟಕ ಭಾಗದ ಏಕಮಾತ್ರ ಮಹಿಳಾ ಪ್ರತಿನಿಧಿಯಾಗಿದ್ದ ಮಂಗಲಾ ಅಂಗಡಿ ಅವರಿಗೆ ಟಿಕೆಟ್ ತಪ್ಪಿಸಿದ್ದು ಬಿಜೆಪಿ ಹಿನ್ನಡೆಯಲ್ಲವೇ ಎಂಬ ಪ್ರಶ್ನೆಗೆ, "ಮಹಿಳೆಯರನ್ನು ನಿರ್ಲಕ್ಷ್ಯ ಮಾಡಿಲ್ಲ. ಅವರ ಅನಿಸಿಕೆ ಪಡೆದೇ ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ಅವರನ್ನು ನಿಲ್ಲಿಸಿದ್ದೇವೆ. ಮಹಿಳೆಯರು ಬಿಜೆಪಿ ಪರವಾಗಿದ್ದಾರೆ. ರಾಜ್ಯದಲ್ಲಿ ಮಹಿಳಾ ನಾಯಕಿಯರು ಹಾಗೂ ಮಹಿಳಾ ಕಾರ್ಯಕರ್ತರು ಬಿಜೆಪಿ ಮೇಲೆ ನಂಬಿಕೆ ಇಟ್ಟಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಟಿಕೆಟ್‌ಗಳನ್ನು ಕೊಟ್ಟಿದ್ದೇವೆ" ಎಂದು ಸಮರ್ಥಿಸಿಕೊಂಡರು.
ದಾವಣಗೆರೆ ಭಿನ್ನಮತ ತಾತ್ಕಾಲಿಕವಾಗಿ ಶಮನ: "ರಾಜ್ಯ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಎಲ್ಲರ ಭಾವನೆಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಲಾಗಿದೆ. ಅಂತಿಮವಾಗಿ ಯಾರನ್ನು ಲೋಕಸಭಾ ಚುನಾವಣೆ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದೇವೋ ಅವರ ಗೆಲುವಿಗೆ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ರನ್ನು ಈ ಚುನಾವಣೆಯ ನೇತೃತ್ವ ವಹಿಸಿಕೊಳ್ಳಬೇಕೆಂದು ಒಪ್ಪಿಸಲಾಗಿದೆ. ಎಲ್ಲಾ ರೀತಿಯಲ್ಲೂ ಚರ್ಚೆಯಾಗಿ ಒಂದಾಗಿ ಹೋಗಲು ತಿಳಿಸಲಾಗಿದೆ. ಇಲ್ಲಿ ಯಾವುದೇ ಒಡಕಿಲ್ಲ, ಯಾವುದೇ ಷರತ್ತುಗಳನ್ನೂ ಅತೃಪ್ತರು ಹಾಕಿಲ್ಲ. ಸರ್ವಾನುಮತದಿಂದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂಬ ನಿರ್ಧಾರವಾಗಿದೆ" ಎಂದು ಬಿಎಸ್ವೈ ತಿಳಿಸಿದ್ದಾರೆ.
ರಾಧಾ ಮೋಹನ್ ದಾಸ್ ಹೇಳಿಕೆ: "ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಗಾಯಿತ್ರಿ ಸಿದ್ದೇಶ್ವರ್ ಅವರಿಗೆ ಟಿಕೆಟ್ ಕೊಡಲಾಗಿದೆ. ಈ ಕುರಿತು ಯಡಿಯೂರಪ್ಪ ನೇತೃತ್ವದಲ್ಲಿ ದಾವಣಗೆರೆಯ ಎಲ್ಲಾ ಮಾಜಿ ಹಾಲಿ ಜನಪ್ರತಿನಿಧಿಗಳು ಸಂಘಟನೆಯ ವರಿಷ್ಠರು ಸೇರಿ ಸಾಮೂಹಿಕ ನಿರ್ಣಾಯಕ ತೆಗೆದುಕೊಳ್ಳಲಾಗಿದೆ" ಎಂದು ರಾಧಾ ಮೋಹನ್ ದಾಸ್ ತಿಳಿಸಿದರು.
ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ಹೇಳಿದ್ದೇನು?: "ಬಗೆಹರಿಯುವಂಥದ್ದು ಯಾವುದೂ ಏನೂ ಆಗಿಲ್ಲ. ಸಣ್ಣಪುಟ್ಟ ದೋಷಗಳಿದ್ದವು, ಅದನ್ನು ಸರಿಪಡಿಸಿದ್ದೇವೆ. ದಾವಣಗೆರೆ ಕ್ಷೇತ್ರದ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ, ಸಂಧಾನ ಏನೂ ಇಲ್ಲ. ಒಬ್ಬರಿಗೊಬ್ಬರು ಮಾತನಾಡಿದ್ದೇವೆ, ಎಲ್ಲವೂ ಸರಿ ಹೋಗಿದೆ" ಎಂದು ತಿಳಿಸಿದರು.
ಇದನ್ನೂ ಓದಿ: ಜನರ ಒತ್ತಾಯದ ಮೇರೆಗೆ ಮಂಡ್ಯದಿಂದ ಹೆಚ್.ಡಿ ಕುಮಾರಸ್ವಾಮಿ ಸ್ಪರ್ಧೆ: ಹೆಚ್.ಡಿ ದೇವೇಗೌಡ - HD Devegowda