ದಾವಣಗೆರೆ: ನಿಮ್ಮ ಪ್ರಧಾನಿ ಅಭ್ಯರ್ಥಿ ಹೆಸರು ಹೇಳಿ ನೋಡೋಣ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾಂಗ್ರೆಸ್‌ಗೆ ಸವಾಲು ಹಾಕಿದರು.
ನಗರದ ಜಿಎಂಐಟಿ ಗೆಸ್ಟ್ ಹೌಸ್ನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಹೊಂದಾಣಿಕೆಯಾಗಿದೆ. ಇದಕ್ಕೆ ಎಲ್ಲೆಡೆ ಬೆಂಬಲ ಸಿಗುತ್ತಿದೆ. ನಾವು 28 ಕ್ಷೇತ್ರಗಳನ್ನು ಗೆಲ್ಲುತ್ತೇವೆ. ದಾವಣಗೆರೆ ಅಭ್ಯರ್ಥಿ ಕೂಡ ಬಹಳ ದೊಡ್ಡ ಅಂತರದಲ್ಲಿ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾಮಪತ್ರ ಸಲ್ಲಿಕೆ ವೇಳೆ ಮತ್ತೊಮ್ಮೆ ಬರಲು ಪ್ರಯತ್ನಿಸುತ್ತೇನೆ. ಮೋದಿ ಮತ್ತೊಮ್ಮೆ ಗೆದ್ದು ಪ್ರಧಾನಿ ಆಗಲಿದ್ದಾರೆ. ಮುಂದೆ ಕೂಡ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ಹಾಲು ಜೇನಿನಂತಿರುತ್ತದೆ. ಪ್ರಧಾನಿ ಮೋದಿ ಮತ್ತು ದೇವೇಗೌಡರ ಸಹಮತದಿಂದ ನಾವು ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ಮುಂದೆಯೂ ಉತ್ತಮ ಬಾಂಧವ್ಯ ಮುಂದುವರೆಸುತ್ತೇವೆ ಎಂದರು.
ಗ್ಯಾರಂಟಿ ಎಫೆಕ್ಟ್ ಇಲ್ಲ: ಕಾಂಗ್ರೆಸ್ ಸರ್ಕಾರದ ಯಾವ ಗ್ಯಾರಂಟಿಯೂ ಚುನಾವಣೆ ಮೇಲೆ ಪರಿಣಾಮ ಬೀರಲ್ಲ. ಮೋದಿ ಮುಂದೆ ಗ್ಯಾರಂಟಿ ನಗಣ್ಯ. ಜೆಡಿಎಸ್-ಬಿಜೆಪಿ ಒಟ್ಟಾಗಿ ಮೈಸೂರಿನಲ್ಲಿ ಯಶಸ್ವಿ ಸಮಾವೇಶ ಮಾಡಿದ್ದೇವೆ. ರಾಜ್ಯದಲ್ಲಿ ಎಲ್ಲೆಡೆ ಒಳ್ಳೆಯ ಸ್ವಾಗತ ಸಿಗುತ್ತಿದೆ. ಕಾಂಗ್ರೆಸ್ ಎಸ್ಸಿ, ಎಸ್ಟಿ ವಿರೋಧಿ ಧೋರಣೆ ಹೊಂದಿದೆ. ಬಾಬಾ ಸಾಹೇಬ್ ಅಂಬೇಡ್ಕರ್ರಿಗೆ ಕಾಂಗ್ರೆಸ್ ಭಾರತರತ್ನ ಕೊಡಲಿಲ್ಲ. ಇಂದಿರಾಗಾಂಧಿ ಕುಟುಂಬದ ಎಲ್ಲರಿಗೂ ಕೊಟ್ಟಿದೆ. ಅಂಬೇಡ್ಕರ್ ನಿಧನರಾದಾಗ ದೆಹಲಿಯಲ್ಲಿ ಆರಡಿ ಮೂರಡಿ ಜಾಗ ಕೊಡಲಿಲ್ಲ. ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಸ್ಮಾರಕಕ್ಕೆ ಜಾಗ ಕೊಟ್ಟಿದ್ದಾರೆ.
ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದು ಸರೀನಾ? ಅಂಬೇಡ್ಕರ್ ಅವರಿಗೆ ಮೋದಿ ಸರ್ಕಾರ ಹೆಚ್ಚಿನ ಗೌರವ ಕೊಟ್ಟಿದೆ. ಅವರ ಹುಟ್ಟಿದ ಊರನ್ನೂ ಅಭಿವೃದ್ದಿಪಡಿಸಿದೆ. ಬೌದ್ದ ಧರ್ಮ ಸೇರಿದ ಜಾಗವನ್ನು ದೀಕ್ಷಾ ಭೂಮಿಯಾಗಿ ಅಭಿವೃದ್ದಿಪಡಿಸಿದೆ. ಲಂಡನ್ನಲ್ಲಿ ಅಂಬೇಡ್ಕರ್ ಓದಿದ ಸ್ಥಳವನ್ನು ಹಾಸ್ಟೆಲ್ ಆಗಿ ಮಾಡಿದೆ. ಮುಂಬೈನಲ್ಲಿರುವ ಸಮಾಧಿಯನ್ನು ಅಭಿವೃದ್ದಿಪಡಿಸಿದೆ. ಸಚಿವರಾಗಿ ಕೆಲಸ ಮಾಡಿದ ಮನೆಯನ್ನು ಮ್ಯೂಸಿಯಂ ಮಾಡಿದೆ. ಆದರೆ ಕಾಂಗ್ರೆಸ್ ಅವರಿಗೆ ಹೆಜ್ಜೆ ಹೆಜ್ಜೆಗೂ ಅಪಮಾನ ಮಾಡಿದೆ. ಎರಡು ಭಾರಿ ಸೋಲಿಸುವ ಪ್ರಯತ್ನ ಮಾಡಿದೆ. ಎಸ್ಸಿಗೆ ಮೀಸಲಿಟ್ಟ 11 ಸಾವಿರ ಕೋಟಿ ಹಣ ಬೇರೆಡೆ ವರ್ಗಾಯಿಸಲಾಗಿದೆ ಎಂದು ಆರೋಪಿಸಿದರು.