ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ, ಜಾಮೀನಿನ ಮೇಲೆ ಬಿಡುಗಡೆಯಾದ ಮಾಜಿ ಸಚಿವ ಬಿ.ನಾಗೇಂದ್ರ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದರು.
ಕಾವೇರಿ ನಿವಾಸದಲ್ಲಿ ಸಿಎಂರನ್ನು ಭೇಟಿಯಾದ ಬಿ.ನಾಗೇಂದ್ರ, ಕೆಲ ಹೊತ್ತು ಚರ್ಚೆ ನಡೆಸಿದರು. ಈ ವೇಳೆ, ಸಚಿವ ಜಮೀರ್ ಅಹಮ್ಮದ್ ಖಾನ್ ಉಪಸ್ಥಿತರಿದ್ದರು. ಪ್ರಕರಣ ಸಂಬಂಧ ಇ.ಡಿ ತನಿಖೆ, ಒತ್ತಡ ಆರೋಪ ಬಗ್ಗೆ ಚರ್ಚಿಸಿದ್ದಾರೆ. ತಮ್ಮನ್ನು ಇಡಿ ಬಂಧನದಲ್ಲಿಟ್ಟು ವಿಚಾರಣೆಗೆ ಒಳಪಡಿಸಿದ್ದಾಗ ನಡೆದ ಬೆಳವಣಿಗೆಗಳ ಬಗ್ಗೆ ಸಿಎಂ ಬಳಿ ವಿವರಣೆ ನೀಡಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ ಸಿಎಂ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಹೆಸರು ಹೇಳಬೇಕು ಎಂದು ಒತ್ತಡ ಹೇರುತ್ತಿರುವ ಬಗ್ಗೆಯೂ ನಾಗೇಂದ್ರ ವಿಷಯ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.
ಇದೇ ವೇಳೆ, ಉಪಚುನಾವಣೆ ವಿಚಾರವನ್ನೂ ಚರ್ಚಿಸಲಾಗಿದೆ. ಸಂಡೂರು ಉಪಚುನಾವಣೆಯಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣವನ್ನು ಮುಂದಿಟ್ಟು ಬಿಜೆಪಿ ಪ್ರಚಾರ ನಡೆಸಲು ಮುಂದಾಗಿದ್ದು, ಅದಕ್ಕೆ ಪ್ರತ್ಯುತ್ತರ ನೀಡುವ ಬಗ್ಗೆ ಚರ್ಚಿಸಲಾಗಿದೆ. ಸಂಡೂರು ಉಪಸಮರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿ ಕೊಡುವ ವಿಶ್ವಾಸ ವ್ಯಕ್ತಪಡಿಸಿದರು ಎನ್ನಲಾಗುತ್ತಿದೆ.
ಇದಕ್ಕೂ ಮುನ್ನ, ನಾಗೇಂದ್ರ ಸಚಿವ ಜಮೀರ್ ಅಹಮದ್ ಖಾನ್ ಅವರನ್ನು ಭೇಟಿಯಾಗಿ ಕುಶಲೋಪರಿ ವಿಚಾರಿಸಿದರು. ಬಳಿಕ ಮಾತನಾಡಿದ ನಾಗೇಂದ್ರ, ''ಕಳೆದ ಮೂರು ತಿಂಗಳಿಂದ ದುಷ್ಟ ರಾಜಕೀಯ ಮಾಡಿಕೊಂಡು ಬಿಜೆಪಿಯವರು ಬರುತ್ತಿದ್ದಾರೆ. ಬಿಜೆಪಿ ಇ.ಡಿ.ಯನ್ನು ಕೈಗೊಂಬೆ ಮಾಡಿಕೊಂಡಿದೆ. ಎಲ್ಲಿ ಬಿಜೆಪಿಯೇತರ ಸರ್ಕಾರ ಇರುತ್ತದೋ, ಆ ಸರ್ಕಾರವನ್ನು ತೆಗೆಯುವ ಪ್ರಯತ್ನ ಮಾಡುತ್ತಿದ್ದಾರೆ'' ಎಂದು ದೂರಿದ್ದರು.
ಇದೇ ವೇಳೆ ಮಾತನಾಡಿದ ಸಚಿವ ಜಮೀರ್ ಅಹಮದ್ ಖಾನ್, ''ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ವರ್ಗಾವಣೆ ಪ್ರಕರಣವನ್ನು ಎಸ್ಐಟಿ ತನಿಖೆಗೆ ಕೊಡಲಾಗಿತ್ತು. ಎಲ್ಲಾ ಹಣವನ್ನೂ ಎಸ್ಐಟಿ ರಿಕವರಿ ಮಾಡಿದೆ. ಇ.ಡಿ.ಯವರು ಚಾರ್ಜ್ಶೀಟ್ ಹಾಕಿದ್ದಾರೆ'' ಎಂದರು. ಬೈ-ಎಲೆಕ್ಷನ್ಗೆ ನಾಗೇಂದ್ರ ಕರೆದುಕೊಂಡು ಹೋಗ್ತಿರಾ ಎಂಬ ಪ್ರಶ್ನೆಗೆ, ''ಅವರೇ ಎಲೆಕ್ಷನ್ ಮಾಡಬೇಕು. ಟೈಗರ್ ಈಸ್ ಬ್ಯಾಕ್, ಅವರ ನೇತೃತ್ವದಲ್ಲಿ ಚುನಾವಣೆಯಾಗುತ್ತದೆ'' ಎಂದು ಜಮೀರ್ ಪ್ರತಿಕ್ರಿಯಿಸಿದರು.
ಇದನ್ನೂ ಓದಿ: ವಾಲ್ಮೀಕಿ ಹಗರಣದಲ್ಲಿ ನನ್ನ ಪಾತ್ರವಿಲ್ಲ, ಇದು ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಷಡ್ಯಂತ್ರ: ಮಾಜಿ ಸಚಿವ ನಾಗೇಂದ್ರ