ಮೈಸೂರು : ಎಸ್ಎಸ್ಎಲ್ಸಿ, ಪಿಯುಸಿ ಪಾಸಾದರೆ ಸಾಕು ಯುವಕರು ಸರ್ಕಾರಿ ಕೆಲಸ ಬಯಸುತ್ತಾರೆ. ಇಲ್ಲವೇ ಖಾಸಗಿ ಕಂಪನಿಗಳ ಕಡೆಗೆ ಮುಖ ಮಾಡುತ್ತಾರೆ. ಆದರೆ, ಸಾಂಸ್ಕೃತಿಕ ನಗರಿಯಲ್ಲೋರ್ವ ಬಿ.ಎ ಪದವೀಧರೆಯಾದ ಯುವತಿ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ.
ಇದ್ದುದರಲ್ಲೇ ಖುಷಿ; ಮಹಿಳೆಯರು ಪುರುಷರಿಗಿಂತ ಕಡಿಮೆ ಇಲ್ಲ, ಪುರುಷನಷ್ಟೇ ಸರಿಸಮಾನವಾಗಿ ಕೆಲಸ ಮಾಡಿಕೊಂಡು ಸಾಧನೆಯ ಮೆಟ್ಟಿಲನ್ನು ಹತ್ತುತ್ತಿದ್ದಾರೆ. ಲಾರಿ, ಬಸ್, ಟ್ರೈನ್, ವಿಮಾನಗಳನ್ನು ಓಡಿಸಿ ಮಹಿಳೆಯರು ಸಾಧನೆ ಮಾಡಿದ್ದಾರೆ. ಮೈಸೂರು ಜಿಲ್ಲೆ ನಂಜನಗೂಡು ನಗರದಲ್ಲಿ ಐಶ್ವರ್ಯ ಎಂಬ ಯುವತಿ ಪದವಿಯನ್ನು ಮುಗಿಸಿ, ಆಟೋ ರಿಕ್ಷಾ ಓಡಿಸುತ್ತಿದ್ದಾರೆ. ಪದವಿ ಓದಿ ಉತ್ತಮ ಕೆಲಸ ಬಯಸುವ ಯುವಜನರ ನಡುವೆ, ಇರುವ ಉದ್ಯೋಗದಲ್ಲಿಯೇ ಇವರು ಖುಷಿ ಪಡುತ್ತಿದ್ದಾರೆ.
ನಂಜನಗೂಡಿನ ಮೊದಲ ಆಟೋ ಚಾಲಕಿ; ಐಶ್ವರ್ಯ ಅವರಿಗೆ ವಾಹನ ಚಾಲನೆ ಮಾಡುವುದು ಎಂದರೆ ಬಹಳ ಇಷ್ಟ. ಪದವಿಯನ್ನು ಮುಗಿಸಿದ ತಕ್ಷಣ ಮೊದಲು ಆಯ್ಕೆ ಮಾಡಿಕೊಂಡಿದ್ದು ಆಟೋ ರಿಕ್ಷಾ ಚಾಲನೆ. ನಂಜನಗೂಡು ನಗರದಲ್ಲಿ ಆಟೋ ರಿಕ್ಷಾ ಚಾಲನೆ ಮಾಡುತ್ತಿರುವುದರಲ್ಲಿ ಇವರೇ ಮೊದಲ ಮಹಿಳೆ.
ತಂದೆ ಸಹ ಆಟೋರಿಕ್ಷಾ ಚಾಲಕರಾಗಿದ್ದಾರೆ. ಮಗಳು ಐಶ್ವರ್ಯ 11 ವರ್ಷ ಇದ್ದಾಗಲೇ ಆಟೋ ರಿಕ್ಷಾ ಓಡಿಸುವ ತರಬೇತಿ ಪಡೆದುಕೊಂಡಿದ್ದರು. ಪದವಿ ಮುಗಿಸಿ, ವರ್ಷದಿಂದ ಆಟೋ ಚಾಲನೆ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ನಂಜನಗೂಡು ನಗರದಲ್ಲಿ ಐಶ್ವರ್ಯ ಆಟೋ ಎಂದರೆ ಜನರಿಗೆ ಚಿರಪರಿಚಿತ. ಆಟೋ ಚಾಲನೆಯಿಂದಾಗಿ ಪ್ರತಿದಿನ ಸಾವಿರ ರೂಪಾಯಿಗಳಷ್ಟು ಸಂಪಾದನೆ ಮಾಡಿ ಜೀವನ ಸಾಗಿಸುತ್ತಿದ್ದಾರೆ.
ಐಶ್ವರ್ಯ ಮೂಲತಃ ಹುಲ್ಲಹಳ್ಳಿ ಗ್ರಾಮದವರಾಗಿದ್ದು, ನಂಜನಗೂಡು ನಗರದಲ್ಲಿ ವಾಸವಾಗಿದ್ದಾರೆ. ಪದವಿ ಸಿಕ್ಕಿದ ಕೂಡಲೇ ಸರ್ಕಾರಿ, ಉತ್ತಮ ಸಂಬಳ ಸಿಗುವ ಖಾಸಗಿ ಕಂಪನಿಗಳತ್ತ ಮುಖಮಾಡುವ ಯುವಜನರ ನಡುವೆ, ಕೆಲಸ ಯಾವುದಾದರೇನು? ಜೀವನ ಸಾಗಿಸಲು ವೃತ್ತಿ ಸಾಕು ಎಂದು ತೋರಿಸಿದ್ದಾರೆ.
ಈ ಕುರಿತು ಆಟೋ ಚಾಲಕಿ ಐಶ್ವರ್ಯ ಮಾತನಾಡಿ, 'ನಂಜನಗೂಡಿನಲ್ಲಿ ಯಾರೊಬ್ಬರು ಆಟೋ ಚಾಲಕರಿರಲಿಲ್ಲ, ನಾನೇ ಮೊದಲ ಮಹಿಳೆ. ಹಾಗಾಗಿ ಆಟೋ ಓಡಿಸಿದೆ. ದಿನವೂ 1 ಸಾವಿರದವರೆಗೆ ಸಂಪಾದನೆ ಆಗುತ್ತೆ. ನಾನು 10, 11 ನೇ ವಯಸ್ಸಿನಲ್ಲಿಯೇ ತಂದೆಯಿಂದ ಟ್ರೈನಿಂಗ್ ತೆಗೆದುಕೊಂಡೆ. ಬಸ್, ಲಾರಿ, ಟೆಂಪೋ ಎಲ್ಲ ವಾಹನಗಳನ್ನು ಓಡಿಸುತ್ತೇನೆ. ಮುಂದಿನ ದಿನಗಳಲ್ಲಿ ರೈಲ್ವೆ ಇಲಾಖೆಗೆ ಅರ್ಜಿ ಹಾಕಬೇಕು ಎಂದುಕೊಂಡಿದ್ದೇನೆ' ಎಂದು ತಮ್ಮ ಭವಿಷ್ಯದ ಗುರಿಯನ್ನು ವಿವರಿಸಿದರು.
ಇದನ್ನೂ ಓದಿ : ಗಂಡ ಆಟೋ ಡ್ರೈವರ್, ಹೆಂಡತಿ ಪಿಎಚ್ಡಿ ಪದವೀಧರೆ; ಓದಿನ ಉತ್ಸಾಹಕ್ಕೆ ಕುಟುಂಬದ ಬೆಂಬಲ