ಮೈಸೂರು : ಚಾಲನೆ ಮಾಡುತ್ತಿದ್ದಾಗಲೇ ಬಿರುಗಾಳಿ ಮಳೆಗೆ ಆಟೋ ಮೇಲೆ ಬೃಹತ್ ಆಕಾರದ ಮರವೊಂದು ಬಿದ್ದು, ಆಟೋ ಸಂಪೂರ್ಣ ನಜ್ಜುಗುಜ್ಜಾದರೂ ಪವಾಡದ ರೀತಿ ಡ್ರೈವರ್ ಬಚಾವ್ ಆಗಿರುವ ಘಟನೆ ನಗರದ ಕೆ. ಆರ್ ಪೊಲೀಸ್ ಠಾಣೆಯ ಸಮೀಪದಲ್ಲೇ ಬುಧವಾರ ರಾತ್ರಿ ನಡೆದಿದೆ. ಘಟನೆಯ ಬಗ್ಗೆ ಆಟೋ ಡ್ರೈವರ್ ಅನಿಲ್ ಕುಮಾರ್ ಜೊತೆಗಿನ ಈಟಿವಿ ಭಾರತ್ ನಡೆಸಿದ ಸಂದರ್ಶನ ಇಲ್ಲಿದೆ.
ಘಟನೆಯ ಬಗ್ಗೆ ಆಟೋ ಡ್ರೈವರ್ ಅನಿಲ್ ಕುಮಾರ್ ಮಾಹಿತಿ : ರಾತ್ರಿ ಮನೆಗೆ ಹೋಗುವ ಸಂದರ್ಭದಲ್ಲಿ ಎದುರುಗಡೆ ಮರ ಬೀಳುತ್ತೆ ಎಂದು ಆಟೋ ಸ್ಲೋ ಮಾಡಿದೆ. ಆದರೆ ಹಿಂದಗಡೆ ಒಂದು ದೊಡ್ಡ ಮರ ನಮ್ಮ ಆಟೋ ಮೇಲೆ ಬಿತ್ತು. ಮರ ಬಿದ್ದ ಸಂದರ್ಭದಲ್ಲಿ ನಾನು ಆಟೋದಲ್ಲೇ ಇದ್ದೆ. ಆಮೇಲೆ ನಿಧಾನವಾಗಿ ಆಟೋದಿಂದ ಹೊರಗಡೆ ಬಂದೆ. ಆಟೋ ಸಂಪೂರ್ಣ ಜಖಂ ಆಗಿತ್ತು. ನನ್ನ ದುಡಿಮೆ ಇರುವುದೇ ಈ ಆಟೋದಿಂದ. ಇವಾಗ ಇದು ಸಂಪೂರ್ಣ ಡ್ಯಾಮೇಜ್ ಆಗಿದೆ. ಇವಾಗ ಕಾರ್ಪೋರೇಶನ್ನಿಂದ ಸಂಬಂಧಪಟ್ಟವರು ನಮಗೆ ಏನಾದ್ರೂ ಸಹಾಯ ಮಾಡಿಕೊಡಬೇಕು ಎಂದರು.
ಆ ಸಮಯದಲ್ಲಿ ಜೀವ ಉಳಿದಿದ್ದೇ ಹೆಚ್ಚು. ಮರ ಏಕಾಏಕಿ ನಮ್ಮ ಆಟೋ ಮೇಲೆ ಬಿದ್ದಾಗ ಏನು ಮಾಡಬೇಕು ಎಂದು ಗೊತ್ತಾಗಲಿಲ್ಲ. ಅಂತದ್ರಲ್ಲಿ ನಾನು ಸುಧಾರಿಸಿಕೊಂಡೆ. ಆಗ ಅಕ್ಕ ಪಕ್ಕದವರೆಲ್ಲ ಬಂದು ಸಹಾಯ ಮಾಡಿದರು. ಘಟನೆ ನಡೆದಾಗ ರಾತ್ರಿ 8.30 ಆಗಿತ್ತು. ಆಗ ಗಾಳಿಯೂ ಇತ್ತು. ಬಾರಿ ಗಾಳಿಯಿಂದ ಯಾವ ಕಡೆಯಿಂದ ಏನು ಬೀಳುತ್ತದೆ ಎಂದು ಗೊತ್ತಾಗುವುದಿಲ್ಲ ಎಂದರು.
ಒಣಗಿದ ಮರವನ್ನ ತೆರವುಗೊಳಿಸಿ : ರಾತ್ರಿ ಬಿದ್ದ ಮಳೆಗೆ ತೊಂದರೆ ಆಗಿದೆ. ಆಟೋ ಫುಲ್ ಜಖಂ ಆಗೋಗಿದೆ. ಅವನ ದುಡಿಮೆ ಇದ್ದಿದ್ದೇ ಈ ಆಟೋದಿಂದ. ಸಾಲ ಸೂಲ ಮಾಡಿಕೊಂಡು ಆಟೋ ಓಡಿಸ್ಕೊಂಡು ಜೀವನ ನಡಿಸ್ತಾ ಇದ್ದ. ಈ ರೀತಿ ಆಗಿರುವುದರಿಂದ ಕಾರ್ಪೋರೇಶನ್ ಅವರಾಗಲಿ ಅಥವಾ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳಾಗಲಿ ಇವರಿಗೆ ಸಹಾಯ ಮಾಡಬೇಕು ಎಂದು ಕೇಳಿಕೊಳ್ಳುತ್ತೇವೆ ಎಂದು ಆಟೋ ಡ್ರೈವರ್ ಸಹೋದರ ರಾಜೇಶ್ ಹೇಳಿದರು.
ಕಾರ್ಪೋರೇಶನ್ ಅವರಿಗೆ ಹೇಳುವುದು ಇಷ್ಟೇ. ಒಣಗಿದ ಮರಗಳು, ಕೊಂಬೆಗಳು, ವಿದ್ಯುತ್ ತಂತಿ ಮೇಲೆ ಬೀಳುವ ಕೊಂಬೆಗಳನ್ನು ದಯವಿಟ್ಟು ತೆರವುಗೊಳಿಸಿ. ಜನರ ಜೀವದ ಜೊತೆ ಆಟ ಆಡಬೇಡಿ. ಒಣಗಿರುವ ಮರವನ್ನು ತೆರವುಗೊಳಿಸಿ ಎಂದರು.
ಇದನ್ನೂ ಓದಿ : ಗಾಳಿಸಹಿತ ಮಳೆಗೆ ಕಾರ್ ಮೇಲೆ ಬಿತ್ತು ಮರ: ಮಂಡ್ಯದಲ್ಲಿ ಯುವಕ ದುರ್ಮರಣ - Tree Crashes On Car