ಮಂಗಳೂರು (ದಕ್ಷಿಣ ಕನ್ನಡ) : ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರದ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆಯುವ ಉಪ ಚುನಾವಣೆ ಇಂದು ಮತದಾನ ನಡೆಯುತ್ತಿದ್ದು, ವಿಧಾನಸಭಾ ಸ್ಪೀಕರ್, ಸಂಸದ, ಶಾಸಕ, ಮನಪಾ ಸದಸ್ಯರು ತಮ್ಮ ಹಕ್ಕು ಚಲಾಯಿಸಿದರು.
ಮಂಗಳೂರು ಮಹಾನಗರ ಪಾಲಿಕೆಯಲ್ಲಿರುವ ಮತದಾನ ಕೇಂದ್ರದಲ್ಲಿ ಸಂಸದ ಬ್ರಿಜೇಶ್ ಚೌಟ, ಶಾಸಕ ಭರತ್ ಶೆಟ್ಟಿ, ಮನಪಾ ಮೇಯರ್ ಮನೋಜ್, ಮನಪಾ ಸದಸ್ಯರು ಮತದಾನ ಮಾಡಿದರು. ಉಳ್ಳಾಲ ನಗರಸಭೆಯಲ್ಲಿ ವಿಧಾನ ಸಭಾ ಸ್ಪೀಕರ್ ಯು. ಟಿ ಖಾದರ್ ಮತಚಲಾಯಿಸಿದರು. ಇಂದು ತನ್ನ ಮದುವೆಯ ನಡುವೆಯು ಕೊಕ್ಕಡ ಗ್ರಾಮ ಪಂಚಾಯತ್ ಸದಸ್ಯ ಶರತ್ ಕೊಕ್ಕಡ ಗ್ರಾಮ ಪಂಚಾಯತ್ನಲ್ಲಿ ಮುಂಜಾನೆ ಮತ ಚಲಾಯಿಸಿದರು.
ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆಯುವ ಉಪಚುನಾವಣೆಯಲ್ಲಿ ಒಟ್ಟು 6032 ಮತದಾರರಿದ್ದಾರೆ.
ಈ ಕ್ಷೇತ್ರದಲ್ಲಿ ವಿಧಾನಪರಿಷತ್ ಸದಸ್ಯರಾಗಿದ್ದ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಇದೀಗ ಉಡುಪಿ - ಚಿಕ್ಕಮಗಳೂರು ಕ್ಷೇತ್ರದ ಸಂಸದರಾಗಿದ್ದಾರೆ. ಈ ಹಿನ್ನೆಲೆ ಅವರಿಂದ ತೆರವಾಗಿರುವ ಸ್ಥಾನಕ್ಕೆ ಈ ಚುನಾವಣೆ ನಡೆಯುತ್ತಿದೆ. ಈ ಬಾರಿ ನಡೆಯುವ ಚುನಾವಣೆಗೆ ನಾಲ್ಕು ಮಂದಿ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಬಿಜೆಪಿಯಿಂದ ಕಿಶೋರ್ ಬಿ. ಆರ್, ಕಾಂಗ್ರೆಸ್ ನಿಂದ ರಾಜು ಪೂಜಾರಿ, ಎಸ್ಡಿಪಿಐನಿಂದ ಅನ್ವರ್ ಸಾದತ್ ಎಸ್ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ದಿನಕರ ಉಳ್ಳಾಲ ಸ್ಪರ್ಧಿಸುತ್ತಿದ್ದಾರೆ.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ವ್ಯಾಪ್ತಿ ಒಳಗೊಂಡಿರುವ ಈ ಕ್ಷೇತ್ರದಲ್ಲಿ ಒಟ್ಟು 392 ಮತಗಟ್ಟೆಗಳಿದ್ದು, 6,032 ಮತದಾರರಿದ್ದಾರೆ. ಉಭಯ ಜಿಲ್ಲೆಗಳು ಗ್ರಾಮ ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರು ಹಾಗೂ ಶಾಸಕರು ಮತ್ತು ಸಂಸದರು ಈ ಕ್ಷೇತ್ರದ ಮತದಾರರಾಗಿರುತ್ತಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 223 ಗ್ರಾಮ ಪಂಚಾಯತ್‍ಗಳ 3,263 ಸದಸ್ಯರು, ಮಂಗಳೂರು ಮಹಾನಗರ ಪಾಲಿಕೆಯಲ್ಲಿ 65, ಎರಡು ನಗರ ಸಭೆಗಳಲ್ಲಿ 64, 3 ಪುರಸಭೆಗಳಲ್ಲಿ 74 ಹಾಗೂ 5 ನಗರ ಪಂಚಾಯತ್ನಲ್ಲಿ 86 ಮಂದಿ ಮತ ಚಲಾಯಿಸಲು ಅರ್ಹರಾಗಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ 153 ಗ್ರಾಮ ಪಂಚಾಯತ್ಗಳಲ್ಲಿ 2,355 ಸದಸ್ಯರು, ಉಡುಪಿ ನಗರ ಸಭೆಯಲ್ಲಿ 36, 3 ಪುರಸಭೆಯಲ್ಲಿ 72 ಹಾಗೂ ಒಂದು ನಗರ ಪಂಚಾಯತ್ನಲ್ಲಿ 17 ಮಂದಿ ಮತ ಚಲಾಯಿಸಲು ಅರ್ಹರಾಗಿರುತ್ತಾರೆ.
ಈ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯ 234 ಮತಗಟ್ಟೆಯಲ್ಲಿ 3,552 ( ಪುರುಷರು- 1,710-ಮಹಿಳೆಯರು - 1,842 ) ಮತದಾರರು ಹಾಗೂ ಉಡುಪಿ ಜಿಲ್ಲೆಯ 158 ಮತಗಟ್ಟೆಯಲ್ಲಿ 2,480 (ಪುರುಷರು - 1,195 , ಮಹಿಳೆಯರು - 1,285 ) ಮತದಾರರಾಗಿರುತ್ತಾರೆ. ಒಟ್ಟಾರೆಯಾಗಿ ಎರಡು ಜಿಲ್ಲೆಗಳ 392 ಮತಗಟ್ಟೆಗಳಲ್ಲಿ 6,032 ಮತದಾರರು ಮತಚಲಾಯಿಸಲಿದ್ದಾರೆ.
ತಾಲೂಕುವಾರು ಬೆಳ್ತಂಗಡಿ ತಾಲೂಕಿನಲ್ಲಿ ಅತ್ಯಧಿಕ 49 ಮತಗಟ್ಟೆಗಳಿವೆ. ಬಂಟ್ವಾಳ ತಾಲೂಕಿನಲ್ಲಿ ಅತ್ಯಧಿಕ 793 ಮತದಾರರಿದ್ದಾರೆ. ಹೆಬ್ರಿ ತಾಲೂಕಿನಲ್ಲಿ ಅತಿ ಕಡಿಮೆ 9 ಮತಗಟ್ಟೆಗಳು ಹಾಗೂ 122 ಮತದಾರರಿದ್ದಾರೆ.
ಅತಿ ಕಡಿಮೆ ಮತದಾರರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಡಪ್ಪಾಡಿ ಪಂಚಾಯತ್ ಹಾಗೂ ಕೊಣಾಜೆ ಪಂಚಾಯತ್ ಮತಗಟ್ಟೆಗಳಲ್ಲಿ (ತಲಾ 5 ಮತದಾರರು) ಹಾಗೂ ಉಡುಪಿ ಜಿಲ್ಲೆಯ ಹಳ್ಳಿಹೊಳೆ ಮತ್ತು ಎಡಮೊಗೆ ಗ್ರಾಮ ಪಂಚಾಯತ್ ಮತಗಟ್ಟೆಗಳಲ್ಲಿ (ತಲಾ 6 ಮತದಾರರು) ಇದ್ದಾರೆ.
ಅಕ್ಟೋಬರ್ 24 ರಂದು ಮತ ಎಣಿಕೆ : ಅತ್ಯಧಿಕ ಮತದಾರರು ಮಂಗಳೂರು ಮಹಾನಗರ ಪಾಲಿಕೆಯ ಮತಗಟ್ಟೆಯಲ್ಲಿ (65) ಹಾಗೂ ಉಡುಪಿ ಜಿಲ್ಲೆಯ ಶಿರೂರು ಗ್ರಾಮ ಪಂಚಾಯತ್ನಲ್ಲಿ (44) ಮತ ಚಲಾಯಿಸಲಿದ್ದಾರೆ. ಚುನಾವಣೆ ನಡೆಸಲು 392 ಮತಗಟ್ಟೆಗಳಿಗೆ ತಲಾ 470 ಮತಗಟ್ಟೆ ಅಧಿಕಾರಿ, ಸಹಾಯಕ ಮತಗಟ್ಟೆ ಅಧಿಕಾರಿ, ಮೈಕ್ರೋ ಆಬ್ಸರ್ವರ್ಗಳನ್ನು ನೇಮಿಸಲಾಗಿದೆ. ಮತ ಎಣಿಕೆ ಮಂಗಳೂರು ಸಂತ ಅಲೋಷಿಯಸ್ ಪದವಿಪೂರ್ವ ಕಾಲೇಜಿನಲ್ಲಿ ಅಕ್ಟೋಬರ್ 24 ರಂದು ನಡೆಯಲಿದೆ.
ಇದನ್ನೂ ಓದಿ : ಬೊಂಬೆನಗರಿಗೆ ಮತ್ತೊಂದು ಬೈ ಎಲೆಕ್ಷನ್: ಅಂದು ಗೆಲುವಿಗಾಗಿ ಪೈಪೋಟಿ, ಈಗ ಟಿಕೆಟ್ ಕಗ್ಗಂಟು!