ಬೆಂಗಳೂರು: ರಸ್ತೆ ಸಿಗ್ನಲ್‌ನಲ್ಲಿ ವಿನಾಕಾರಣ ಕಾರಿನ ಎಕ್ಸಲರೇಟರ್ ಹೆಚ್ಚಿಸಿ ಸೌಂಡ್ ಮಾಡಿದ್ದನ್ನು ಪ್ರಶ್ನಿಸಿದ ಐಪಿಎಸ್ ಅಧಿಕಾರಿಯ ಪುತ್ರನಿಗೆ ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆ ಮಾಡಿರುವ ಘಟನೆ ನಡೆದಿದೆ. ತಮ್ಮ ಮೇಲೆ ಹಲ್ಲೆ ನಡೆದಿರುವ ಕುರಿತು ಹಿರಿಯ ಐಪಿಎಸ್ ಅಧಿಕಾರಿ ರಮೇಶ್ ಬಾನೋತ್ ಅವರ ಪುತ್ರ ಶ್ರೀಸಾಯಿ ಪ್ರೀತಂ ಬಾನೋತ್ ಅವರು ಅಮೃತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸೆಪ್ಟೆಂಬರ್ 16ರಂದು ಕೆಲಸ ಮುಗಿಸಿದ್ದ ಶ್ರೀಸಾಯಿ ಪ್ರೀತಂ ಬಾನೋತ್ ಎಂ.ಜಿ.ರಸ್ತೆಯಿಂದ ಹೆಬ್ಬಾಳ ಮಾರ್ಗವಾಗಿ ತಮ್ಮ ಕಾರಿನಲ್ಲಿ ಹೊರಟಿದ್ದರು. ಈ ವೇಳೆ ಬ್ಯಾಟರಾಯನಪುರ ಸಿಗ್ನಲ್ ಬಳಿ ಕಾರಿನ ಚಾಲಕನೊಬ್ಬ ಎಕ್ಸಲರೇಟರ್ ರೈಸ್ ಮಾಡುತ್ತಾ ಶಬ್ಬವುಂಟು ಮಾಡುತ್ತಿದ್ದ. ಯಾಕೆ ವಿನಾಕಾರಣ ಎಕ್ಸಲರೇಟರ್ ಬಳಸುತ್ತಿದ್ದೀಯಾ ಎಂದು ಶ್ರೀಸಾಯಿ ಅವರು ಪ್ರಶ್ನಿಸಿ ಮುಂದೆ ಸಾಗಿದ್ದರು. ಆದರೆ ಹಿಂಬಾಲಿಸಿಕೊಂಡು ಬಂದಿದ್ದ ಆರೋಪಿ, ಸ್ವಲ್ಪ ದೂರದಲ್ಲೇ ಶ್ರೀಸಾಯಿ ಅವರ ಕಾರನ್ನ ಅಡ್ಡಗಟ್ಟಿದ್ದ. ಬಳಿಕ ಆರೋಪಿ ಕಾರು ಚಾಲಕ ಹಾಗೂ ಆತನ ಸ್ನೇಹಿತ ಅವಾಚ್ಯವಾಗಿ ನಿಂದಿಸಿ, ಸಾಯಿ ಪ್ರೀತಂ ಅವರ ಮುಖ ಹಾಗೂ ರಟ್ಟೆಗೆ ಹೊಡೆದು ಹಲ್ಲೆ ಮಾಡಿದ್ದಾರೆ. ಬಳಿಕ ಕಾರಿನ ಮಿರರ್ ಒಡೆದು ಎಸ್ಕೇಪ್ ಆಗಿದ್ದಾರೆ ಎಂದು ದೂರು ದಾಖಲಾಗಿದೆ.
ಘಟನೆ ಸಂಬಂಧ ಸಾಯಿ ಪ್ರೀತಂ ಬಾನೋತ್ ಅವರು ನೀಡಿರುವ ದೂರಿನ ಮೇರೆಗೆ ಅಮೃತಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳಿಗಾಗಿ ಹುಡುಕಾಟ ಮುಂದುವರೆಸಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಪ್ರಕರಣ: ಅಶ್ಲೀಲ ಪೆನ್ಡ್ರೈವ್ ಹಂಚಿಕೆ ಅತ್ಯಂತ ಪಾಪದ ಕೃತ್ಯ - ಹೈಕೋರ್ಟ್ - Hassan Pen Drive