ಮಂಗಳೂರು: ಯುವ ಉರಗಪ್ರೇಮಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ತೇಜಸ್ ಬನ್ನೂರು 25ಕ್ಕೂ ಮಿಕ್ಕಿದ ಹೆಬ್ಬಾವಿನ ಮರಿಗಳನ್ನು ರಕ್ಷಿಸಿ ಜಿಲ್ಲೆಯ ಬೇರೆ ಬೇರೆ ಅರಣ್ಯಗಳಿಗೆ ಬಿಟ್ಟು ಬಂದಿದ್ದಾರೆ.
ಉರಗಪ್ರೇಮಿ ತೇಜಸ್, ಕಳೆದ ಐದಾರು ವರ್ಷಗಳಿಂದ ಸಂಕಷ್ಟದಲ್ಲಿರುವ ಉರಗ ಸಂತಾನವನ್ನು ರಕ್ಷಿಸಿ, ಅವುಗಳನ್ನು ಮತ್ತೆ ಪ್ರಕೃತಿಗೆ ಬಿಡುವ ಕಾರ್ಯವನ್ನು ಮಾಡುತ್ತಿದ್ದಾರೆ. ಈವರೆಗೆ ಸುಮಾರು 100ಕ್ಕೂ ಹೆಚ್ಚಿನ ಹೆಬ್ಬಾವಿನ ಮರಿಗಳನ್ನು ಕಾಡಿಗೆ ಬಿಟ್ಟು ಹೆಬ್ಬಾವುಗಳ ಸಂತತಿಯನ್ನು ರಕ್ಷಿಸಿದ್ದಾರೆ.
ಹೆಚ್ಚಾಗಿ ಮರದ ಪೊಟರೆಯೊಳಗೆ, ಬಿದ್ದ ತೆಂಗಿನ ಮರದ ಟೊಳ್ಳಾದ ಭಾಗದಲ್ಲಿ ಹೆಬ್ಬಾವುಗಳು ಮೊಟ್ಟೆಗಳನ್ನು ಇಡುತ್ತವೆ. ಸುಮಾರು ಅರವತ್ತು ದಿನಗಳ ಕಾಲ ಹೆಬ್ಬಾವುಗಳು ಮರಿಗಳಿಗೆ ಕಾವನ್ನು ನೀಡುತ್ತವೆ. ಹಾವುಗಳಲ್ಲಿ ಹೆಬ್ಬಾವು ಮತ್ತು ಕಾಳಿಂಗ ಸರ್ಪ ಮಾತ್ರ ತಮ್ಮ ಮೊಟ್ಟೆಗಳಿಗೆ ಕಾವು ನೀಡುವ ಮೂಲಕ ಮರಿಗಳನ್ನು ಹೊರ ತರುತ್ತವೆ. ಮಾನವ ಅಥವಾ ಇತರ ಪ್ರಾಣಿಗಳಿಂದ ತೊಂದರೆಯಾದಾಗ ಮಾತ್ರ ಹೆಬ್ಬಾವು ಮತ್ತು ಕಾಳಿಂಗ ಸರ್ಪ ತಮ್ಮ ಮೊಟ್ಟೆಗಳನ್ನು ಬಿಟ್ಟು ಬೇರೆಡೆ ಸಾಗುತ್ತವೆ. ಹೀಗೆ ಸಾಗಿದ ಸಂದರ್ಭದಲ್ಲಿ ಮೊಟ್ಟೆಗಳು ಕಾವಿಲ್ಲದೇ ಹಾಳಾಗುವ ಸಾಧ್ಯತೆಗಳು ಇರುತ್ತದೆ.
ಹೀಗೆ ಹಾವುಗಳಿಲ್ಲದೇ ಅನಾಥವಾಗಿರುವ ಮೊಟ್ಟೆಗಳನ್ನು ತೇಜಸ್ ಅವರು ಅರಣ್ಯ ಇಲಾಖೆಯ ಅನುಮತಿಯೊಂದಿಗೆ ತಮ್ಮ ಮನೆಗೆ ಕೊಂಡೊಯ್ದು ಅವುಗಳಿಗೆ ಕೃತಕ ಕಾವು ನೀಡುವ ವ್ಯವಸ್ಥೆ ಮಾಡುತ್ತಾರೆ. ಇದೇ ರೀತಿ ಈ ಬಾರಿ ಬಂಟ್ವಾಳ ತಾಲೂಕಿನ ಅನಂತಾಡಿಯಲ್ಲಿ ಸಂಗ್ರಹಿಸಿದ 12 ಮತ್ತು ವಿಟ್ಲದ ಕನ್ಯಾನ ಉಕ್ಕುಡದಲ್ಲಿ ಸಂಗ್ರಹಿಸಿದ 13 ಮೊಟ್ಟೆಗಳಿಗೆ ಕೃತಕ ಕಾವು ನೀಡಿ ಮರಿ ಮಾಡುವ ಮೂಲಕ ಜಿಲ್ಲೆಯ ವಿವಿಧ ಕಾಡುಗಳಿಗೆ ಬಿಟ್ಟಿದ್ದಾರೆ.
ಈ ಬಗ್ಗೆ ಈಟಿವಿ ಭಾರತ ಜೊತೆಗೆ ಮಾತನಾಡಿದ ಸ್ನೇಕ್ ತೇಜಸ್, "ನನಗೆ 35 ದಿನಗಳ ಹಿಂದೆ ಅನಂತಾಡಿಯಲ್ಲಿ 12 ಮೊಟ್ಟೆ, ಉಕ್ಕುಡದಲ್ಲಿ 24 ದಿನಗಳ ಹಿಂದೆ 13 ಮೊಟ್ಟೆಗಳು ಸಿಕ್ಕಿದ್ದವು. ಇದಕ್ಕೆ ಕೃತಕ ಕಾವು ನೀಡಿ ಮರಿ ಮಾಡಿಸಲಾಯಿತು. ಉಕ್ಕುಡದಲ್ಲಿ ರಸ್ತೆ ಬದಿಯಲ್ಲಿ ಇತ್ತು. ಇದು ಮರಿ ಆಗಿದ್ದರೂ ರಸ್ತೆಗೆ ಬಂದು ಸಾಯುವ ಅಪಾಯ ಇತ್ತು. ಮರಿಯಾದ ನಂತರ ಈ ಮೊಟ್ಟೆಗಳು ಸಿಕ್ಕಿದ ಪ್ರದೇಶದಲ್ಲಿರುವ ಅರಣ್ಯಗಳಿಗೆ ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಬಿಡಲಾಗಿದೆ" ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಅಬ್ಬಬ್ಬಾ! ಬಾತ್ರೂಮ್ನಲ್ಲಿ 35 ಹಾವಿನ ಮರಿಗಳು ಪ್ರತ್ಯಕ್ಷ- ವಿಡಿಯೋ ನೋಡಿ - Snakes Crawl Out Of Bathroom