ಮೈಸೂರು: ಮಾರಕಾಸ್ತ್ರಗಳನ್ನು ಹಿಡಿದುಕೊಂಡು ನಗರದಲ್ಲಿ ಅಡ್ಡಾಡುತ್ತಿದ್ದ ರೌಡಿ ಶೀಟರ್ ಮೇಲೆ ನಿಗಾ ಇರಿಸಿದ್ದ ಪೊಲೀಸರು ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಆರೋಪಿ ಬಳಿ ಇದ್ದ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ರೌಡಿ ಶೀಟರ್ ಜಾವೇದ್ ಖಾನ್ ಅಲಿಯಾಸ್ ಸೈನೈಡ್ ಜಾವೇದ್ ಬಂಧಿತ ಆರೋಪಿ.
ಕೆಲವು ದಿನಗಳ ಹಿಂದೆ ಆರೋಪಿಯ ಚಲನವಲನಗಳನ್ನು ಗಮನಿಸಿದ್ದ ಸಿಸಿಬಿ ತಂಡ ನಿಖರ ಮಾಹಿತಿಯನ್ನು ಆಧರಿಸಿ ಎಸಿಪಿ ಸಂದೇಶ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಗೌಸಿಯಾನಗರದ ಬಳಿ ಬಂಧಿಸಿದ್ದಾರೆ.
ಹಲವು ಪ್ರಕರಣಗಳಲ್ಲಿ ಭಾಗಿಯಾದ ಆರೋಪಿ: ಬಂಧಿತ ಜಾವೇದ್ ಖಾನ್ ಈ ಹಿಂದೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಬೆಂಗಳೂರು ಮತ್ತು ಮೈಸೂರು ನಗರಗಳಲ್ಲಿ ಕ್ರಿಮಿನಲ್ ಪ್ರಕರಣಗಳು, ಕೊಲೆ ಪ್ರಕರಣವೊಂದರಲ್ಲಿ ಸಹ ಭಾಗಿಯಾಗಿದ್ದ. 2019ರಲ್ಲಿ ಅಕ್ರಮವಾಗಿ ಪಿಸ್ತೂಲ್ ಮಾರಾಟ ಮಾಡುತ್ತಿದ್ದ ಜಾಲದೊಂದಿಗೆ ಶಾಮಿಲಾಗಿ ಸಿಕ್ಕಿಬಿದ್ದಿದ್ದ. ಈ ವೇಳೆ ಆತನ ಬಳಿ ಇದ್ದ ಒಂದು ರಿವಾಲ್ವರ್ ಸೇರಿದಂತೆ 8 ಜೀವಂತ ಗುಂಡುಗಳನ್ನು ವಶಪಡಿಸಿಕೊಂಡು ಬಂಧಿಸಲಾಗಿತ್ತು.
ಕೃತ್ಯಕ್ಕೆ ಸಂಚು ನಡೆಸುತ್ತಿದ್ದ ಜಾವೇದ್: ಇದೀಗ ಮತ್ತೊಮ್ಮೆ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಮತ್ತೊಂದು ಕೃತ್ಯಕ್ಕೆ ಸಂಚು ನಡೆಸುತ್ತಿದ್ದ ಎಂಬ ವಿಷಯ ತಿಳಿದು ಬಂದಿದೆ. ಸದ್ಯ ಆತನ ಬಳಿ ಇದ್ದ ವಿವಿಧ ನಮೂನೆಯ 5 ಡ್ರ್ಯಾಗರ್ಗಳು, ನಂಬರ್ ಪ್ಲೇಟ್ ಇಲ್ಲದ ಸುಜುಕಿ ಆಕ್ಸಿಸ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: ಶಿರಸಿ: ಸೀರೆ ವಿಚಾರಕ್ಕೆ ಬಟ್ಟೆ ಅಂಗಡಿ ಕೆಲಸದವರ ಮೇಲೆ ಹಲ್ಲೆ, ಪ್ರಕರಣ ದಾಖಲು