ಚಂಡೀಗಢ: ಐದು ಬಾರಿ ಹರಿಯಾಣ ಮುಖ್ಯಮಂತ್ರಿಯಾಗಿದ್ದ ಹಾಗೂ ಭಾರತೀಯ ರಾಷ್ಟ್ರೀಯ ಲೋಕದಳ (ಐಎನ್ಎಲ್ಡಿ) ಮುಖ್ಯಸ್ಥ ಓಂ ಪ್ರಕಾಶ್ ಚೌಟಾಲಾ (89) ಶುಕ್ರವಾರ ಗುರುಗ್ರಾಮದ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು. ಓಂ ಪ್ರಕಾಶ್ ಚೌಟಾಲಾ ಮಕ್ಕಳಾದ ಅಭಯ್ ಸಿಂಗ್ ಚೌಟಾಲಾ ಮತ್ತು ಅಜಯ್ ಸಿಂಗ್ ಚೌಟಾಲಾ ಅವರನ್ನು ಅಗಲಿದ್ದಾರೆ. ಓಂ ಪ್ರಕಾಶ್ ಚೌಟಾಲಾ ಅವರು ಮಾಜಿ ಉಪ ಪ್ರಧಾನಿ ದೇವಿ ಲಾಲ್ ಅವರ ಪುತ್ರರಾಗಿದ್ದಾರೆ.
ಚೌಟಾಲಾ ಅವರು ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ಮಧ್ಯಾಹ್ನ 12 ಗಂಟೆ ಸುಮಾರಿಗೆ ಕೊನೆಯುಸಿರೆಳೆದರು. ಅವರಿಗೆ ಉಸಿರಾಟದ ತೊಂದರೆ ಇತ್ತು ಮತ್ತು ಕಳೆದ ಮೂರು-ನಾಲ್ಕು ವರ್ಷಗಳಿಂದ ಮೇದಾಂತದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶುಕ್ರವಾರ ಆರೋಗ್ಯವು ಇದ್ದಕ್ಕಿದ್ದಂತೆ ಹದಗೆಟ್ಟಾಗ ಅವರನ್ನು ಮೇದಾಂತದ ತುರ್ತು ವಾರ್ಡ್ಗೆ ದಾಖಲಿಸಲಾಗಿತ್ತು. ಆದರೆ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ.
ಓಂ ಪ್ರಕಾಶ್ ಚೌಟಾಲಾ ಅವರು ಜನವರಿ 1, 1935 ರಂದು ಸಿರ್ಸಾದ ಚೌಟಾಲಾ ಗ್ರಾಮದಲ್ಲಿ ಜನಿಸಿದರು ಮತ್ತು ಡಿಸೆಂಬರ್ 2, 1989 ರಂದು ಮೊದಲ ಬಾರಿಗೆ ಮುಖ್ಯಮಂತ್ರಿಯಾದರು.
ಶಿಕ್ಷಕರ ನೇಮಕಾತಿ ಹಗರದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಚೌಟಾಲಾ: ಶಿಕ್ಷಕರ ನೇಮಕಾತಿ ಹಗರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾದ ನಂತರ ಚೌಟಾಲಾ ಮತ್ತು ಅವರ ಪುತ್ರ ಅಜಯ್ ಚೌಟಾಲಾ ಅವರಿಗೆ 2013 ರಲ್ಲಿ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ವಿಶೇಷ ಸಿಬಿಐ ನ್ಯಾಯಾಧೀಶ ವಿನೋದ್ ಕುಮಾರ್ ಅವರು 78 ವರ್ಷದ ಚೌಟಾಲಾ ಮತ್ತು ಅವರ 51 ವರ್ಷದ ಮಗನಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದರು. 2000ನೇ ಇಸವಿಯಲ್ಲಿ ರಾಜ್ಯದಲ್ಲಿ 3,206 ಶಿಕ್ಷಕರನ್ನು ಅಕ್ರಮವಾಗಿ ನೇಮಕ ಮಾಡಿದ ಆರೋಪದಲ್ಲಿ ತಂದೆ ಮತ್ತು ಮಗ ಹಾಗೂ ಇತರ 53 ಮಂದಿ ತಪ್ಪಿತಸ್ಥರು ಎಂದು 2013ರ ಜನವರಿ 16ರಂದು ನ್ಯಾಯಾಲಯ ತೀರ್ಪು ನೀಡಿತ್ತು.
10 ವರ್ಷಗಳ ಪೈಕಿ ಒಂಬತ್ತೂವರೆ ವರ್ಷ ಜೈಲು ಶಿಕ್ಷೆ ಪೂರೈಸಿದವರಿಗೆ ಆರು ತಿಂಗಳ ವಿಶೇಷ ವಿನಾಯಿತಿ ನೀಡುವ ಆದೇಶವನ್ನು ದೆಹಲಿ ಸರ್ಕಾರ 2021 ರಲ್ಲಿ ಅಂಗೀಕರಿಸಿದ ನಂತರ ಚುಟಾಲಾ ಅವರನ್ನು ಅವಧಿಪೂರ್ವ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು. ಚೌಟಾಲಾ ಅದಾಗಲೇ ಒಂಬತ್ತು ವರ್ಷ ಒಂಬತ್ತು ತಿಂಗಳು ಶಿಕ್ಷೆಯನ್ನು ಅನುಭವಿಸಿದ್ದರಿಂದ ಬಿಡುಗಡೆಗೆ ಅರ್ಹರಾಗಿದ್ದರು.
ಚೌಟಾಲಾ ಅವರ ಮಗ ಅಭಯ್ ಸಿಂಗ್ ಚೌಟಾಲಾ ಅವರು ಎಲ್ಲೆನಾಬಾದ್ ಕ್ಷೇತ್ರದ ಮಾಜಿ ಶಾಸಕರಾಗಿದ್ದಾರೆ ಮತ್ತು ಅಕ್ಟೋಬರ್ 2014 ರಿಂದ ಮಾರ್ಚ್ 2019 ರವರೆಗೆ ಹರಿಯಾಣ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು. ಚೌಟಾಲಾ ಅವರ ಮೊಮ್ಮಗ ದುಶ್ಯಂತ್ ಚೌಟಾಲಾ ಹರಿಯಾಣದ ಹಿಂದಿನ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದರು.