ಚಂಢೀಗಡ: ಹರಿಯಾಣದಲ್ಲಿ ಐದು ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದ, ರಾಷ್ಟ್ರೀಯ ಲೋಕ ದಳ ವರಿಷ್ಠ ನಾಯಕ ಓಂ ಪ್ರಕಾಶ್ ಚೌಟಾಲಾ ಗುರುಗ್ರಾಮದ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ತಕ್ಷಣಕ್ಕೆ ಅವರನ್ನು ಮೆಧಾಂತ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಪ್ರಯೋಜನವಾಗಿಲ್ಲ. ಅವರಿಗೆ 89 ವರ್ಷ ವಯಸ್ಸಾಗಿತ್ತು.
ಮಾಜಿ ಪ್ರಧಾನಿ ದೇವಿ ಲಾಲ್ ಅವರ ಮಗ ಓಂ ಪ್ರಕಾಶ್ ಚೌಟಾಲಾ ಅವರು. 1935ರ ಜನವರಿ 1ರಂದು ಚೌಟಲಾ ಗ್ರಾಮದಲ್ಲಿ ಜನಿಸಿದ್ದರು. 1989ರ ಡಿಸೆಂಬರ್ 2ರಂದು ಮೊದಲ ಬಾರಿಗೆ ಸಿಎಂ ಪದವಿಗೇರಿದರು.
ಚೌಟಾಲಾ ಅವರು ದೀರ್ಘಾವಧಿ ಅನಾರೋಗ್ಯಕ್ಕೆ ಒಳಗಾಗಿದ್ದರು. ಎಲ್ಲಾ ಪ್ರಯತ್ನಗಳ ಹೊರತಾಗಿ ಇಂದು ಅವರ ಆರೋಗ್ಯವೂ ಕ್ಷೀಣಿಸಿದ್ದು, ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಪಕ್ಷದ ಕಾರ್ಯಕರ್ತರು ತಿಳಿಸಿದ್ದಾರೆ.
ಗಣ್ಯರಿಂದ ಕಂಬನಿ, ಸಂತಾಪ ಸೂಚನೆ: ಚೌಟಾಲಾ ಸಾವಿಗೆ ಹರಿಯಾಣ ಸಿಎಂ ನಯಾಬ್ ಸೈನಿ ಕೂಡ ಸಂತಾಪ ವ್ಯಕ್ತಪಡಿಸಿದ್ದಾರೆ. ಐಎನ್ಎಲ್ಡಿ ವರಿಷ್ಠ ಮತ್ತು ಮಾಜಿ ಸಿಎಂ ಓಂ ಪ್ರಕಾಶ್ ಚೌಟಾಲಾ ಅವರ ಸಾವು ದುಃಖ ತಂದಿದೆ. ಅವರು ತಮ್ಮ ಜೀವನ ಪೂರ್ತಿ ರಾಜ್ಯ ಮತ್ತು ಸಮಾಜಕ್ಕಾಗಿ ಹೋರಾಡಿದರು. ಅವರ ಸಾವು ಹರಿಯಾಣ ಮತ್ತು ದೇಶಕ್ಕೆ ದೊಡ್ಡ ನಷ್ಟ. ಶ್ರೀರಾಮ ಅವರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಅವರ ಕುಟುಂಬಕ್ಕೆ ಬಲ ನೀಡಲಿ ಎಂದಿದ್ದಾರೆ.
ಮಾಜಿ ಸಿಎಂ ಭೂಪೇಂದ್ರ ಹೂಡಾ ಕೂಡ ಅವರಿಗೆ ಅಂತಿಮ ಗೌರವ ಸಲ್ಲಿಸಿದ್ದು, ಅವರು ರಾಜ್ಯದ ಶಾಸಕರು ಮತ್ತು ಸಿಎಂ ಆಗಿ ಕಾರ್ಯ ನಿರ್ವಹಿಸಿದರು. ಅವರ ನಷ್ಟವನ್ನು ಸರಿದೂಗಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ಕೂಡ ಹರಿಯಾಣ ಅಭಿವೃದ್ಧಿಯಲ್ಲಿ ಚೌಟಲಾ ಅವರ ಪಾತ್ರ ಪ್ರಮುಖವಾಗಿದೆ ಎಂದು ನೆನೆದು ಸಂತಾಪ ಸೂಚಿಸಿದ್ದಾರೆ. ರಾಜ್ಯವೂ ಸದಾ ನೆನಪಿನಲ್ಲಿಡುವಂತೆ ಪ್ರಮುಖ ಕೆಲಸವನ್ನು ಅವರು ಮಾಡಿದ್ದಾರೆ. ಅವರ ಕುಟುಂಬಕ್ಕೆ ನನ್ನ ಸಂತಾಪ. ಓಂ ಶಾಂತಿ ಎಂದಿದ್ದಾರೆ.
ತಂದೆಯಂತೆಯೇ ರಾಜಕೀಯ ಜೀವನ ಆರಂಭಿಸಿದ ಚೌಟಾಲಾ ಅವರು, ಏಳು ಬಾರಿ ಶಾಸಕರು ಮತ್ತು ಐದು ಬಾರಿ ಸಿಎಂ ಆಗಿದ್ದರೂ, ಒಂದು ಬಾರಿ ಮಾತ್ರವೇ ಸಿಎಂ ಆಗಿ ಪೂರ್ಣಾವಧಿ ಅಧಿಕಾರ ನಡೆಸಿದ್ದರು ಎಂಬುದು ಗಮನಾರ್ಹ.
ಇದನ್ನೂ ಓದಿ: ಜೈಸಲ್ಮೇರ್ನಲ್ಲಿ ನಾಳೆ ಜಿಎಸ್ಟಿ ಕೌನ್ಸಿಲ್ ಸಭೆ: ಯಾವೆಲ್ಲ ವಸ್ತುಗಳ ಬೆಲೆ ಏರುತ್ತೆ, ಇನ್ಯಾವುದು ಇಳಿಯುತ್ತೆ?