Ajwain Leaves Health Benefits: ಕರ್ನಾಟಕ ರಾಜ್ಯದಲ್ಲಿ ಚಳಿಯ ಅಬ್ಬರ ಜೋರಾಗಿ ಶುರುವಾಗಿರುವುದರಿಂದ ಬಹುತೇಕ ಜನರಿಗೆ ನೆಗಡಿ, ಕೆಮ್ಮು, ಜ್ವರದಿಂದ ಬಳಲುತ್ತಿದ್ದಾರೆ. ಪ್ರಮುಖವಾಗಿ ಮಕ್ಕಳು ಹಾಗೂ ಹಿರಿಯರು ಶೀತ ಹಾಗೂ ಕಫದ ತೊಂದರೆಯಿಂದ ಅನುಭವಿಸುತ್ತಿದ್ದಾರೆ. ಇದರಿಂದ ಎದೆಯಲ್ಲಿ ಕಟ್ಟಿಕೊಂಡಿರುವ ಕಫವನ್ನು ದೂರ ಮಾಡಲು ಆಯುರ್ವೇದ ತಜ್ಞರು ಅಜವಾನ ಎಲೆಯಿಂದ ಸಿದ್ಧಪಡಿಸಲಾಗುವ ಮನೆ ಮದ್ದನ್ನು ತಿಳಿಸಿದ್ದಾರೆ. ಇದನ್ನು ಮನೆಯಲ್ಲಿ ಲಭಿಸುವ ವಸ್ತುಗಳಿಂದ ಸರಳವಾಗಿ ಈ ಕಷಾಯವನ್ನು ತಯಾರಿಸಬಹುದು. ಹಾಗಾದ್ರೆ, ಅಜವಾನ ಎಲೆಯಿಂದ ಕಷಾಯ ಮಾಡುವುದು ಹೇಗೆ? ಈ ಕಷಾಯ ಯಾವ ಪ್ರಮಾಣದಲ್ಲಿ ಸೇವಿಸಬೇಕು ಎಂಬುದನ್ನು ತಿಳಿಯೋಣ.
ಈ ಕಷಾಯಕ್ಕೆ ಅಗತ್ಯವಿರುವ ಸಾಮಗ್ರಿಗಳೇನು?:
- ಅಜವಾನ ಎಲೆಗಳು - 4
- ಬೆಳ್ಳುಳ್ಳಿ - 1
- ಲವಂಗ - 2
- ಏಲಕ್ಕಿ - 1
- ಕಾಳುಮೆಣಸು - 10
- ಜೀರಿಗೆ - 1/2 ಟೀಸ್ಪೂನ್
- ಶುಂಠಿ - ಸಣ್ಣ ತುಂಡು
- ಜೇನುತುಪ್ಪ - 1/4 ಟೀಸ್ಪೂನ್
- ನೀರು - ಅಗತ್ಯಕ್ಕೆ ತಕ್ಕಷ್ಟು
ಕಷಾಯ ಸಿದ್ಧಪಡಿಸುವುದು ಹೇಗೆ?:
- ಮೊದಲು ಅಜವಾನ ಎಲೆಗಳು ಸ್ವಚ್ಛವಾಗಿ ತೊಳೆದುಕೊಳ್ಳಬೇಕಾಗುತ್ತದೆ. ಮಿಕ್ಸರ್ ಜಾರ್‌ನಲ್ಲಿ ಅಜವಾನ ಎಲೆಗಳು, ಬೆಳ್ಳುಳ್ಳಿ, ಲವಂಗ, ಏಲಕ್ಕಿ, ಕಾಳುಮೆಣಸು, ಜೀರಿಗೆ, ಶುಂಠಿ, ಜೇನುತುಪ್ಪ ಸೇರಿಸಿ ಎಲ್ಲ ಪದಾರ್ಥಗಳನ್ನು ನೀರು ಹಾಕದೇ ರುಬ್ಬಿಕೊಳ್ಳಿ.
- ಬಳಿಕ ಮಿಶ್ರಣದೊಳಗೆ ಅರ್ಧ ಗ್ಲಾಸ್ ನೀರನ್ನು ಸುರಿದು, ಮತ್ತೊಮ್ಮೆ ಚೆನ್ನಾಗಿ ರುಬ್ಬಿಕೊಳ್ಳಿ.
- ಈಗ ಒಲೆಯ ಮೇಲೆ ಪಾತ್ರೆ ಇಟ್ಟು ನಾವು ಈ ಮೊದಲೇ ರುಬ್ಬಿಕೊಂಡಿರುವ ಮಿಶ್ರಣವನ್ನು ಅದರೊಳಗೆ ಹಾಕಬೇಕು. ಅದಕ್ಕೆ 1 ಲೋಟ ನೀರು ಹಾಕಿ ಕುದಿಸಿಕೊಳ್ಳಿ. ಕಷಾಯವು ಕುದಿಯುತ್ತಿರುವಾಗ, ಮಿಶ್ರಣಕ್ಕೆ ಸ್ವಲ್ಪ ಅರಿಶಿನ ಸೇರಿಸಿ ಹಾಗೂ ಮೂರು ನಿಮಿಷಗಳ ಕಾಲ ಕುದಿಸಿದ ನಂತರ ಸ್ಟವ್ ಆಫ್ ಮಾಡಿ.
- ಇದಾದ ನಂತರ ಪಾತ್ರೆಯನ್ನು ಮುಚ್ಚಿ ಹಾಗೂ ಅದನ್ನು ಐದು ನಿಮಿಷಗಳ ಕಾಲ ಕುದಿಸಬೇಕಾಗುತ್ತದೆ. ಬಳಿಕ ಘಮಘಮಿಸು ಕಷಾಯ ಸಿದ್ಧವಾಗುತ್ತದೆ.
ಕಷಾಯ ಸೇವಿಸುವುದು ಹೇಗೆ?:
- ರಾತ್ರಿ ಊಟವಾದ 1 ಗಂಟೆಯ ಬಳಿಕ ಅರ್ಧ ಗ್ಲಾಸ್ ಕಷಾಯಕ್ಕೆ ಜೇನುತುಪ್ಪ ಸೇರಿಸಿ ಕುಡಿಯಬೇಕಾಗುತ್ತದೆ. ಕಷಾಯ ಕುಡಿದ ನಂತರ ಏನನ್ನೂ ಸೇವಿಸಬಾರದು.
- ಕಷಾಯ ಖಾರವಾಗಿರುವುದರಿಂದ ಮಕ್ಕಳಿಗೆ ಕೊಡುವಾಗ 1 ಟೀಸ್ಪೂನ್ ನೀರಿಗೆ 1 ಟೀಸ್ಪೂನ್ ಕಷಾಯ ಹಾಕಿ ಕುಡಿಸಬೇಕಾಗುತ್ತದೆ.
- ವಯಸ್ಕರು ಅರ್ಧ ಗ್ಲಾಸ್ಗಿಂತಲೂ ಕಡಿಮೆ ಕಷಾಯ ಕುಡಿಯಬೇಕಾಗುತ್ತದೆ ಎಂದು ಆಯುರ್ವೇದ ತಜ್ಞರು ಸಲಹೆ ನೀಡುತ್ತಾರೆ.
ಗಿಡಮೂಲಿಕೆಗಳ ಪ್ರಯೋಜನಗಳೇನು?:
- ಅಜವಾನ ಎಲೆಗಳು: ಅಜವಾನ ಎಲೆಗಳು ಪರಿಮಳಯುಕ್ತ ಮೂಲಿಕೆ ಆಗಿದೆ. ಶೀತ, ಕೆಮ್ಮು, ತಲೆನೋವು ಇತ್ಯಾದಿ ಸಮಸ್ಯೆಗಳನ್ನು ಪರಿಹರಿಸುವ ಗುಣಗಳನ್ನು ಹೊಂದಿದೆ. ಮಕ್ಕಳಲ್ಲಿ ಶೀತ, ಕಫಕ್ಕೆ ತುಂಬಾ ಒಳ್ಳೆಯದು. ಅಜವಾನ ಎಲೆಗಳ ಕಷಾಯ ಮಾಡಿ ತಿಂಗಳಿಗೊಮ್ಮೆ ಕುಡಿದರೆ ಕೆಲವು ಆರೋಗ್ಯದ ಸಮಸ್ಯೆಗಳು ಬರುವುದಿಲ್ಲ.
- ಲವಂಗದ ಪುಡಿ: ಲವಂಗದಲ್ಲಿರುವ ಯುಜೆನಾಲ್ ಎಂಬ ಸಂಯುಕ್ತವು ಆ್ಯಂಟಿಬ್ಯಾಕ್ಟೀರಿಯಾ ಗುಣ ಹೊಂದಿದ್ದು, ಇದು ಗಂಟಲಿನಲ್ಲಿ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ ಜೊತೆಗೆ ಸೋಂಕನ್ನು ಕಡಿಮೆ ಮಾಡುವ ಶಕ್ತಿ ಇದೆ. ಇದು ಗಂಟಲಿನಲ್ಲಿ ಊತ, ಉರಿಯೂತ ಕಡಿಮೆ ಮಾಡಲು ಸಹಕಾರಿಯಾಗಿದೆ ಎಂದು ತಜ್ಞರು ತಿಳಿಸುತ್ತಾರೆ.
- ಕಾಳುಮೆಣಸು: ಇದರಲ್ಲಿರುವ ಪೈಪರಿನ್ ಸಂಯುಕ್ತವು ಉರಿಯೂತದ ಗುಣಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಗಂಟಲಿನ ಊತ, ಉರಿಯೂತ ಸಮಸ್ಯೆ ಪರಿಹರಿಸುತ್ತದೆ. ಇದರಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣವು ಬ್ಯಾಕ್ಟೀರಿಯಾವನ್ನು ನಾಶಪಡಿಸುವ ಜೊತೆಗೆ ಸೋಂಕುಗಳನ್ನು ಕಡಿಮೆ ಮಾಡುತ್ತದೆ ಎಂದು ಆಯುರ್ವೇದ ತಜ್ಞರು ವಿವರಿಸುತ್ತಾರೆ.
- ಜೇನುತುಪ್ಪ: ಜೇನುತುಪ್ಪವು ರೋಗನಿರೋಧಕ ಶಕ್ತಿ ಬಲಪಡಿಸಲು ತುಂಬಾ ಉಪಯುಕ್ತವಾಗಿದೆ. ಸಡಿಲವಾದ ಕೋಶಗಳು, ಹಾನಿಕಾರಕ ಬ್ಯಾಕ್ಟೀರಿಯಾ ತಡೆಗಟ್ಟಲು ಹೆಚ್ಚಿನ ಗುಣಗಳನ್ನು ಹೊಂದಿದೆ. ಜೇನುತುಪ್ಪದಲ್ಲಿರುವ ಕಬ್ಬಿಣ, ಕ್ಯಾಲ್ಸಿಯಂ, ಸೋಡಿಯಂ, ರಂಜಕ, ಸಲ್ಫರ್, ಪೊಟ್ಯಾಸಿಯಮ್‌ನಂತಹ ಖನಿಜ ಲವಣಗಳು, ವಿಟಮಿನ್ ಸಿ, ವಿಟಮಿನ್ ಬಿ, ಪ್ರೋಟೀನ್‌ಗಳಂತಹ ಜೀವಸತ್ವಗಳು ಇವೆ. ಗಾಢ ಬಣ್ಣದ ಜೇನುತುಪ್ಪವು ಹೆಚ್ಚು ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ ಎಂದು ತಜ್ಞರು ಹೇಳುತ್ತಾರೆ.
- ಶುಂಠಿ: ಜೀವಸತ್ವಗಳು, ಖನಿಜಗಳಿಂದ ತುಂಬಿದ ಪೋಷಕಾಂಶ ದಟ್ಟವಾದ ಮೂಲವಾಗಿ ಶುಂಠಿ. ಇದು ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳಾದ ಜಿಂಜರಾಲ್, ವಿಟಮಿನ್ ಬಿ 6, ಸಿ ಹಾಗೂ ಪೊಟ್ಯಾಸಿಯಮ್, ಮೆಗ್ನೀಸಿಯಮ್, ಮ್ಯಾಂಗನೀಸ್‌ನಂತಹ ಅಗತ್ಯ ಖನಿಜಗಳಿ ಶುಂಠಿಯಲ್ಲಿ ಅಡವಾಗಿವೆ.
- ಏಲಕ್ಕಿ: ಏಲಕ್ಕಿಯ ಸೇವನೆಯಿಂದ ದೇಹಕ್ಕೆ ಸೇರಿರುವ ವಿಷಕಾರಿ ಅಂಶಗಳನ್ನು ಹೊರಹಾಕಲು ಪೂರಕವಾಗುತ್ತದೆ. ಏಲಕ್ಕಿ ರಕ್ತದಲ್ಲಿ ಇರುವ ವಿಷಕಾರಿ ಅಂಶ ಕಡಿಮೆ ಸಹಾಯ ಮಾಡುತ್ತದೆ. ಸೌಮ್ಯ ಮೂತ್ರವರ್ಧನೆ ವೃದ್ಧಿಸುವುದು ಹಾಗೂ ಜೀವಾಣುಗಳ ನಿರ್ಮೂಲನೆ ಹೆಚ್ಚಿಸುತ್ತದೆ, ಹೃದಯದ ಆರೋಗ್ಯ ಸಮಸ್ಥಿತಿಯಲ್ಲಿಡಲು ಕೆಲಸ ಮಾಡುತ್ತದೆ.
ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ನ್ನು ವೀಕ್ಷಿಸಬಹುದು: https://pmc.ncbi.nlm.nih.gov/articles/PMC9926607/
ಓದುಗರಿಗೆ ಸೂಚನೆ: ಈ ಲೇಖನದಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ, ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಉತ್ತಮ.