ಮೈಸೂರು: ಮಾಜಿ ಪಾಲಿಕೆ ಸದಸ್ಯನ ಸಹೋದರನನ್ನು ಭೀಕರವಾಗಿ ನಡುರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಮೈಸೂರು ನಗರದ ರಾಜೀವನಗರ ಬಳಿಯ ನಿಮ್ರಾ ಮಸೀದಿಯ ಬಳಿ ಶುಕ್ರವಾರ ರಾತ್ರಿ ನಡೆದಿದೆ. ಹತ್ಯೆಗೈದ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಅಕ್ಮಲ್ ಪಾಷಾ(45) ಹತ್ಯೆಯಾದವ.
ಮೃತ ಅಕ್ಮಲ್ ಮಾಜಿ ಪಾಲಿಕೆಯ ಸದಸ್ಯ ಅಯಾಜ್ ಅಲಿಯಾಸ್ನ (ಪಂಡು) ಸೋದರ. ಶುಕ್ರವಾರ ರಾತ್ರಿ ರಾಜೀವ್ ನಗರದ ನಿಮ್ರಾ ಮಸೀದಿ ಬಳಿ ಬೇಕರಿ ಮುಂಭಾಗದ ರಸ್ತೆಯಲ್ಲಿ ಅಕ್ಮಲ್ ಪಾಷಾ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ. ಈ ವೇಳೆ ದುಷ್ಕರ್ಮಿಗಳು ತಡೆದು ಮಾರಕಾಸ್ತ್ರಗಳಿಂದ ಭೀಕರವಾಗಿ ಕೊಚ್ಚಿ ಕೊಲೆ ಮಾಡಿ, ಪರಾರಿಯಾಗಿದ್ದರು.
ಕೊಲೆಗೆ ಖಚಿತ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಉದಯಗಿರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತ ವ್ಯಕ್ತಿಯ ಕುಟುಂಬದವರು ನೀಡಿರುವ ದೂರಿನ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ನಗರ ಪೊಲೀಸ್ ಕಮಿಷನರ್ ಹೇಳಿಕೆ: ಮೈಸೂರು ನಗರ ಪೊಲೀಸ್ ಕಮಿಷನರ್ ರಮೇಶ್ ಬಾನೋತ್ ಘಟನೆ ಕುರಿತು ಮಾಹಿತಿ ನೀಡಿದ್ದಾರೆ. 'ಶುಕ್ರವಾರ ರಾತ್ರಿ ರಾಜೀವ್ ನಗರದ ನಿಮ್ರಾ ಮಸೀದಿಯ ಬಳಿ ಬೈಕ್ನಲ್ಲಿ ಹೋಗುತ್ತಿದ್ದ ಅಕ್ಮಲ್ ಪಾಷಾ ಎಂಬ ವ್ಯಕ್ತಿಯನ್ನು ದುಷ್ಕರ್ಮಿಗಳು ಅಡ್ಡಗಟ್ಟಿ ಭೀಕರವಾಗಿ ಹಲ್ಲೆ ಮಾಡಿದ್ದರು. ಘಟನೆ ತಿಳಿದ ಬಳಿಕ ಸ್ಥಳಕ್ಕೆ ಉದಯಗಿರಿ ಪೊಲೀಸರು ತೆರಳಿ ಹಲ್ಲೆಗೆ ಒಳಗಾಗಿದ್ದ ಅಕ್ಮಲ್ನ್ನು ಆಸ್ಪತ್ರೆಗೆ ಸಾಗಿಸಲು ಯತ್ನಿಸಿದರು. ಆದರೆ ಅವರು ಅಷ್ಟರಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ' ಎಂದು ತಿಳಿಸಿದರು.
'ಈ ಸಂಬಂಧ ಅಕ್ಮಲ್ ಪಾಷಾ ಕುಟುಂಬದವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಸದ್ಯ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಕೊಲೆಗೆ ಪ್ರಮುಖ ಕಾರಣ ಅಕ್ಮಲ್ ಪಾಷಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯನಾಗಿದ್ದು, ಕಾರ್ಯಕ್ರಮ ಒಂದರಲ್ಲಿ ಫ್ಲೆಕ್ಸ್ ಸಂಬಂಧ ಜಾಲತಾಣದಲ್ಲಿ ಕಾಮೆಂಟ್ವೊಂದನ್ನು ಹಾಕಿದ್ದ. ಇದು ವಿರೋಧಕ್ಕೆ ಕಾರಣ ಆಗಿರಬಹುದು ಎಂದು ಶಂಕಿಸಲಾಗಿದೆ. ಹಾಗೂ ಬೇರೆ ವಿಚಾರದ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ' ಎಂದು ರಮೇಶ್ ಬಾನೋತ್ ತಿಳಿಸಿದ್ದಾರೆ.
ಇದನ್ನೂ ಓದಿ: ಡ್ಯಾನ್ಸ್ ಮಾಡುವಾಗ ಮೈ ಟಚ್ ಆಗಿದ್ದಕ್ಕೆ ಯುವಕನ ಕೊಲೆ: ನಾಲ್ವರು ಆರೋಪಿಗಳ ಬಂಧನ