ಮೈಸೂರು: ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮೊದಲು ದೇವರಾಜೇಗೌಡ ಅವರನ್ನು ಬಂಧಿಸಿ ಮಂಪರು ಪರೀಕ್ಷೆಗೆ ಒಳಪಡಿಸಿದರೆ ಸತ್ಯಾಂಶ ಹೊರ ಬರಲಿದೆ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಎಂ. ಲಕ್ಷ್ಮಣ್ ಹೇಳಿದರು. ನಗರದ ಕಾಂಗ್ರೆಸ್ ಭವನದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಪ್ರಕರಣ ರಾಷ್ಟ್ರ ಮಟ್ಟದಲ್ಲಿ ಸುದ್ದಿ ಆಗಿದೆ. ಈ ಪ್ರಕರಣದಲ್ಲಿ ಡಿ. ಕೆ. ಶಿವಕುಮಾರ್ ಮೇಲೆ ಆರೋಪ ಹೊರಿಸುತ್ತಿದ್ದಾರೆ. ಬಿಜೆಪಿ ಈ ಪ್ರಕರಣವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ ಎಂದು ದೂರಿದರು.
ವಿಡಿಯೋ ಮಾಡಿದ್ದು ಪ್ರಜ್ವಲ್ ರೇವಣ್ಣ, ಆದರೆ ಆ ವಿಡಿಯೋವನ್ನ ತೆಗೆದುಕೊಂಡಿದ್ದು ಕಾರ್ತಿಕ್. ನಂತರ ದೇವರಾಜೇಗೌಡ ಮೂಲಕ ವಿಡಿಯೋ ರಿಲೀಸ್ ಆಗಿದೆ. ಇದರಲ್ಲಿ ಡಿ. ಕೆ. ಶಿವಕುಮಾರ್ ಅವರ ಪಾತ್ರ ಏನು ಇಲ್ಲ. ಕಳೆದ ಡಿಸೆಂಬರ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮೂಲಕ ಪೆನ್ ಡ್ರೈವ್ ಬಿಜೆಪಿ ಹೈಕಮಾಂಡ್ಗೆ ತಲುಪಿತ್ತು. ಆದರು ಪ್ರಧಾನಿ ನರೇಂದ್ರ ಮೋದಿ ಪ್ರಜ್ವಲ್ ಪರ ಕ್ಯಾಂಪೇನ್ ಮಾಡಿದ್ದು ಎಷ್ಟು ಸರಿ?. ಇದೇನಾ ನಿಮ್ಮ ನೈತಿಕತೆ. ಪ್ರಕರಣ ಸಂಬಂಧ ಆರ್. ಅಶೋಕ್, ಬಿ ವೈ ವಿಜಯೇಂದ್ರ, ಪ್ರೀತಮ್ ಗೌಡ, ದೇವರಾಜೇಗೌಡ ನಾಲ್ವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಮಂಪರು ಪರೀಕ್ಷೆಗೆ ಒಳಪಡಿಸಿದರೆ ಸತ್ಯಾಸತ್ಯತೆ ಬೆಳಕಿಗೆ ಬರುತ್ತದೆ ಎಂದು ಲಕ್ಷ್ಮಣ್ ಹೇಳಿದರು.
ಈ ಪ್ರಕರಣದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಪಾತ್ರ ಇದೆ ಎಂಬ ಸುದ್ದಿಗಳನ್ನು ಹರಡುವ ಮೂಲಕ ಸರ್ಕಾರದ ದಿಕ್ಕು ತಪ್ಪಿಸಲಾಗುತ್ತಿದೆ. ಡಿಕೆಶಿ ಒಕ್ಕಲಿಗ ನಾಯಕರಾಗಿ ಬೆಳೆಯುತ್ತಿರುವ ಕಾರಣ ಅವರ ಮೇಲೆ ಆರೋಪ ಮಾಡಲಾಗುತ್ತಿದೆ. ಇದರಲ್ಲಿ ಡಿಕೆಶಿ ಪಾತ್ರವಿಲ್ಲ. ಈಗತಾನೇ ಎಸ್ಐಟಿ ತನಿಖೆ ಆರಂಭಿಸಿದೆ. ಆಗಲೇ ತನಿಖೆ ಸರಿಯಿಲ್ಲ ಎಂದು ಹೇಳುವ ಮೂಲಕ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಈ ಪ್ರಕರಣದ ತನಿಖೆಯ ದಿಕ್ಕು ತಪ್ಪಿಸುತ್ತಿದ್ದಾರೆ. ನಾವು ಸಹ ಈ ಪ್ರಕರಣವನ್ನ ಹಾಲಿ ನ್ಯಾಯಾಧೀಶರ ಮೂಲಕ ತನಿಖೆ ನಡೆಸಬೇಕೆಂದು ಒತ್ತಾಯಿಸುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: ಮೇ 14ರವರೆಗೂ ಹೆಚ್.ಡಿ.ರೇವಣ್ಣಗೆ ನ್ಯಾಯಾಂಗ ಬಂಧನ - H D REVANNA