ಬೆಂಗಳೂರು: ಕಾಟನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಅಂಜನಪ್ಪ ಗಾರ್ಡನ್ನಲ್ಲಿ ರೌಡಿಶೀಟರ್ ಶರತ್ ಎಂಬಾತನನ್ನ ಹತ್ಯೆ ಮಾಡಿರುವ ಆರೋಪದಡಿ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಸೇರಿ ಆರು ಮಂದಿ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.
ಕಾಟನ್‌ಪೇಟೆ ಠಾಣೆ ರೌಡಿಶೀಟರ್ ಶರತ್ ಎಂಬಾತನನ್ನ ಹತ್ಯೆ ಮಾಡಿದ ಆರೋಪದಡಿ ಕಾರ್ಪೋರೇಟರ್ ಕೊಲೆ ಕೇಸ್ನಲ್ಲಿ ಬಂಧಿಯಾಗಿದ್ದ ಸ್ಟೀಫನ್ ಹಾಗೂ ಸಹಚರರಾದ ಚಂದ್ರಶೇಖರ್, ಶೇಖರ್, ಮಣಿಕಂಠ, ಸಿಂಬು, ಕಿರಣ್ ಎಂಬುವರನ್ನ ಪೊಲೀಸರು ಬಂಧಿಸಿದ್ದಾರೆ.
ಏನಿದು ಪ್ರಕರಣ?: ಮೃತ ಶರತ್ ಹಾಗೂ ಆರೋಪಿಗಳೆಲ್ಲರೂ ಒಂದೇ ಏರಿಯಾದಲ್ಲಿ ವಾಸವಾಗಿದ್ದರು. ರೌಡಿಶೀಟರ್ ಶರತ್, ಬಂಧಿತ ಆರೋಪಿಗಳಾದ ಚಂದ್ರಶೇಖರ್, ಶೇಖರ್ ಎಂಬುವರಿಗೆ ಕಾಟ ಕೊಟ್ಟು ಏರಿಯಾದಿಂದ ಬಿಡಿಸಿದ್ದ. ಚಂದ್ರಶೇಖರ್ ಸಹಚರನಾಗಿದ್ದ ಪ್ರಭಾಕರ್ನನ್ನು 2020 ಕೊಲೆ ಮಾಡಿದ ಪ್ರಕರಣದಲ್ಲಿ ಮೃತ ಶರತ್ ಆರೋಪಿಯಾಗಿದ್ದ. ಸ್ನೇಹಿತನನ್ನ ಹತ್ಯೆ ಮಾಡಿದ ಕೋಪದಲ್ಲಿದ್ದ ಚಂದ್ರಶೇಖರ್ಗೆ ಮತ್ತಷ್ಟು ಕಿರುಕುಳ ನೀಡಿದ್ದ.
ಈತನ ಕಾಟ ತಾಳಲಾರದೇ ಹತ್ಯೆ ಮಾಡಲು ಸಂಚು ರೂಪಿಸಿದ್ದ ಚಂದ್ರಶೇಖರ್ ತನ್ನ ಸಹಚರರನ್ನ ಒಗ್ಗೂಡಿಸಿಕೊಂಡಿದ್ದ. ಇದೇ ವೇಳೆ, ರೇಖಾ ಕದಿರೇಶ್ ಹತ್ಯೆ ಪ್ರಕರಣದಲ್ಲಿ ಮೂರು ವರ್ಷ ಜೈಲಿನಲ್ಲಿದ್ದು, ಕಳೆದ ತಿಂಗಳ ಫೆಬ್ರವರಿಯಲ್ಲಿ ಜಾಮೀನಿನ ಮೇಲೆ ಹೊರಬಂದಿದ್ದ ಸ್ಟೀಫನ್ನನ್ನ ಆರೋಪಿ ಗ್ಯಾಂಗ್ ಸಂಪರ್ಕ ಮಾಡಿತ್ತು. ಬಳಿಕ ಕೊಲೆಗೆ ಒಳಸಂಚು ರೂಪಿಸಿಕೊಂಡು ಮಾರ್ಚ್ 8ರ ಶಿವರಾತ್ರಿ ಹಬ್ಬದಂದೇ ಡ್ರ್ಯಾಗರ್ನಿಂದ ಶರತ್ನನ್ನ ಹತ್ಯೆ ಮಾಡಲಾಗಿತ್ತು.
ಶರತ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಆರು ಮಂದಿ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಎರಡನೇ ಆರೋಪಿಯಾಗಿರುವ ಚಂದ್ರಶೇಖರ್ ಈ ಹಿಂದೆ ಜೆ.ಪಿ.ನಗರ ಠಾಣಾ ವ್ಯಾಪ್ತಿಯ ಮರ್ಡರ್ ಕೇಸ್ ವೊಂದರಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ಮಾತನಾಡಿ, ಕಾಟನ್ ಪೇಟೆ ಠಾಣಾ ವ್ಯಾಪ್ತಿಯಲ್ಲಿ ಕಳೆದ 8ರಂದು ಶರತ್ ಎಂಬಾತನ ಮರ್ಡರ್ ಆಗಿತ್ತು. ಪ್ರಕರಣ ದಾಖಲಿಸಿಕೊಂಡು ಈ ಮೂರ್ನಾಲ್ಕು ಜನರನ್ನ ಬಂಧಿಸಲಾಗಿತ್ತು. ನಿನ್ನೆ ಮತ್ತಿಬ್ಬರಾದ ಶೇಖರ್ ಆಲಿಯಾಸ್ ಡೋರಿ ಮತ್ತು ಸ್ಟೀಫನ್ ಎಂಬುವರನ್ನ ಅರೆಸ್ಟ್ ಮಾಡಲಾಗಿದೆ. ಒಟ್ಟು ಆರು ಜನರನ್ನ ಬಂಧಿಸಲಾಗಿದೆ ಎಂದರು.
ಶರತ್ ಮತ್ತು ಎಲ್ಲ ಆರೋಪಿಗಳು ಒಂದೇ ಏರಿಯಾದಲ್ಲಿ ವಾಸವಿದ್ದರು. 2017-18ರಿಂದ ಇಬ್ಬರ ಮಧ್ಯೆ ವೈಷಮ್ಯವಿತ್ತು. ಆಗ ಎಲ್ಲರಿಗೂ ಮೃತ ವ್ಯಕ್ತಿ ಆರೋಪಿಗಳಿಗೆ ಮತ್ತು ಆರೋಪಿ ಫ್ಯಾಮಿಲಿಗೆ ತೊಂದರೆ ಕೊಡುತ್ತಿದ್ದ. ಇತ್ತೀಚೆಗೆ ಆರೋಪಿಗಳೆಲ್ಲರೂ ಹತ್ಯೆಗೆ ಸಂಚು ರೂಪಿಸಿದ್ದರು. ಸ್ಟೀಫನ್ ಮತ್ತು ಚಂದ್ರಶೇಖರ್ ಇಬ್ಬರೂ ಶರತ್ನನ್ನ ಡ್ರ್ಯಾಗರ್ನಿಂದ ಕೊಲೆ ಮಾಡಿದ್ದರು ಎಂದು ಡಿಸಿಪಿ ತಿಳಿಸಿದ್ದಾರೆ.
ಓದಿ: ಬೆಂಗಳೂರು: ರೌಡಿಶೀಟರ್ ಬರ್ಬರ ಹತ್ಯೆ, ಎದುರಾಳಿ ಬಣದಿಂದ ಕೃತ್ಯ ಶಂಕೆ