ಹಾವೇರಿ: ಜಿಲ್ಲೆಯ ಪ್ರಸಿದ್ಧ ಜಾನಪದ ಸೊಗಡಿನ ಕ್ರೀಡೆ ದನ ಬೆದರಿಸುವ ಸ್ಪರ್ಧೆ. ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಪ್ರಖ್ಯಾತ ಹೋರಿಗಳನ್ನು ಇಲ್ಲಿಯ ಜನ ಸೆಲಿಬ್ರಿಟಿಗಳಂತೆ ನೋಡುತ್ತಾರೆ. ಅದರಲ್ಲೂ ಹೋರಿಯ ಜನ್ಮದಿನ ಬಂತೆಂದರೆ ಮಾಲೀಕರು ಮತ್ತು ಅಭಿಮಾನಿಗಳಲ್ಲಿ ಸಂಭ್ರಮವೋ ಸಂಭ್ರಮ. ಇದೇ ರೀತಿ, ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆ ತನ್ನದೇ ಆದ ಅಭಿಮಾನಿಗಳನ್ನು ಹೊಂದಿರುವ ಹಾವೇರಿಯ 'ಅನ್ನದಾತ 251' ಹೋರಿಯ ಜನ್ಮದಿನವನ್ನು ಇಂದು ನಗರದ ಅಂಬೇಡ್ಕರ್ ವೃತ್ತದಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು.
ಹೋರಿಯನ್ನು ತಮಿಳುನಾಡಿನಿಂದ ಖರೀದಿಸಿ ತಂದು ಇಂದಿಗೆ ಐದು ವರ್ಷವಾಗಿದ್ದು, ಆ ದಿನವನ್ನು ಜನ್ಮದಿನವಾಗಿ ಆಚರಿಸಲಾಯಿತು. ಸುಮಾರು 30 ಕೆ.ಜಿ ತೂಕದ ಕೇಕ್ ತಂದು ಕಟ್ ಮಾಡಿ ಹೋರಿಗೆ ತಿನ್ನಿಸಲಾಯಿತು. ಸಂಭ್ರಮಾಚರಣಿಯಲ್ಲಿ ಪಾಲ್ಗೊಂಡಿದ್ದ ನೂರಾರು ಅಭಿಮಾನಿಗಳು ಪಟಾಕಿ ಸಿಡಿಸಿ ಖುಷಿಪಟ್ಟರು.
"ಅನ್ನದಾತ ಹೋರಿ ಎರಡು ವರ್ಷಗಳ ಹಿಂದೆ ದನ ಬೆದರಿಸುವ ಸ್ಪರ್ಧೆಯಲ್ಲಿ ಪಾಲ್ಗೊಂಡು ಗಾಯಗೊಂಡಿತ್ತು. ಕೊಂಬಿಗೆ ಹೊಡೆತ ಬಿದ್ದ ಹೋರಿಯನ್ನು ಎರಡು ವರ್ಷಗಳ ಕಾಲ ಸ್ಪರ್ಧೆಗೆ ಬಿಟ್ಟಿರಲಿಲ್ಲ. ಇದೀಗ ಹೋರಿ ಚೇತರಿಸಿಕೊಂಡಿದೆ. ದೀಪಾವಳಿಯಲ್ಲಿ ನಡೆದ ಸ್ಪರ್ಧೆಯಲ್ಲಿ ಮತ್ತೆ ತನ್ನ ಹಿಂದಿನ ಖದರ್ ತೋರಿಸಿದೆ. ಈ ಹಿನ್ನೆಲೆಯಲ್ಲಿ ಜನ್ಮದಿನ ಆಚರಿಸಲಾಗುತ್ತಿದೆ. ರಾಜ್ಯ ಸೇರಿದಂತೆ ನೆರೆ ರಾಜ್ಯಗಳಲ್ಲಿ ನಡೆಯುವ ದನ ಬೆದರಿಸುವ ಸ್ಪರ್ಧೆಗಳಲ್ಲೂ ಪಾಲ್ಗೊಳ್ಳಲಿದೆ" ಎಂದು ಹೋರಿ ಮಾಲೀಕ ತಿಳಿಸಿದರು.
ರಕ್ತದಾನ ಶಿಬಿರ: ಹೋರಿ ಜನ್ಮದಿನದ ಅಂಗವಾಗಿ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ಶಿಬಿರದಲ್ಲಿ 50ಕ್ಕೂ ಅಧಿಕ ಜನ ರಕ್ತದಾನ ಮಾಡಿದರು. ದೂರದಿಂದ ಆಗಮಿಸಿದ ಅಭಿಮಾನಿಗಳು ತಾವೂ ಕೇಕ್ ತಂದು ಹೋರಿಗೆ ತಿನ್ನಿಸಿ ಶುಭ ಕೋರಿದರು. ಅನ್ನದಾತ ಹೋರಿಗೆ ಪುಷ್ಪಮಳೆಗೆರೆದ ಅಭಿಮಾನಿಗಳು ಹೋರಿಯ ಮುಂದೆ ನಿಂತು ಪೋಟೋ ಕ್ಲಿಕ್ಕಿಸಿಕೊಂಡರು. ಹೋರಿಯ ಮುಂದೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. ಹೋರಿಗೆ ದನ ಬೆದರಿಸುವ ಸ್ಪರ್ಧೆಗೆ ಸಿಂಗರಿಸುವಂತೆ, ಬಲೋನ್, ಜೋಲಾ, ಕೊಂಬೆಣಸು, ಗೆಜ್ಜೆ ಸೇರಿದಂತೆ ವಿವಿಧ ಅಲಂಕಾರಿಕ ವಸ್ತುಗಳಿಂದ ಹೋರಿಯನ್ನು ಅಲಂಕರಿಸಲಾಗಿತ್ತು. ಇದೇ ವೇಳೆ ಬಡಮಕ್ಕಳಿಗೆ ಸ್ವೆಟರ್ ವಿತರಿಸಲಾಯಿತು. ಹಾವೇರಿ ಜಿಲ್ಲೆಯ ಪ್ರಮುಖ ದನ ಬೆದರಿಸುವ ಹೋರಿಗಳ ಮಾಲೀಕರನ್ನು ಸನ್ಮಾನಿಸಲಾಯಿತು.
ಇದನ್ನೂ ಓದಿ: ರಾಜ್ಯಮಟ್ಟದ ದನ ಬೆದರಿಸುವ ಸ್ಪರ್ಧೆ ಆಯೋಜನೆ : ಸಾವಿರಾರು ಹೋರಿಗಳು ಭಾಗಿ