ಬೆಂಗಳೂರು : ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಪ್ರತಿ ವರ್ಷ ರಕ್ತದಾನಿಗಳ ದಿನಾಚರಣೆಯನ್ನು ಆಚರಿಸಿಕೊಂಡು ಬರುತ್ತಿದೆ. ರಕ್ತದ ಗುಂಪುಗಳನ್ನು ಕಂಡು ಹಿಡಿದ ಡಾ. ಕಾರ್ಲ್ ಲ್ಯಾಂಡ್ ಸ್ಪೇನರ್ ಅವರ ಜನ್ಮದಿನದ ಪ್ರಯುಕ್ತ ಈ ದಿನವನ್ನು ವಿಶ್ವಾದಾದ್ಯಂತ ಆಚರಿಸಿಕೊಂಡು ಬರಲಾಗುತ್ತಿದೆ.
ಈ ಕುರಿತು ಈಟಿವಿ ಭಾರತದ ಜೊತೆಗೆ ರೆಡ್ ಕ್ರಾಸ್ ಸಂಸ್ಥೆಯ ಉಪ ಸಭಾಪತಿಗಳಾದ ಆನಂದ್ ಎಸ್ ಜಿಗಜಿನ್ನಿ ಮಾತನಾಡಿ, ಎಲ್ಲ ದಾನಗಳಲ್ಲಿ ರಕ್ತ ದಾನ ಶ್ರೇಷ್ಠವಾಗಿದೆ. ಅಮೂಲ್ಯವಾದ ಜೀವವನ್ನು ಉಳಿಸಲು ರಕ್ತ ಅತ್ಯಂತ ಸಹಕಾರಿಯಾಗಿದೆ. ಒಬ್ಬರು ರಕ್ತದಾನ ಮಾಡಿದರೆ ಮೂರು ಜೀವಗಳು ಉಳಿಯುವ ಕೆಲಸವಾಗುತ್ತದೆ ಎಂದು ಹೇಳಿದರು.
ಸುಮಾರು 9 ರಕ್ತ ಭಂಡಾರವನ್ನು ನಡೆಸುತ್ತಿದೆ: ಯುವಜನತೆ ಹೆಚ್ಚು ಹೆಚ್ಚು ರಕ್ತದಾನ ಮಾಡಿ ಸಮಾಜಕ್ಕೆ ಮಾದರಿಯಾಗಬೇಕಿದೆ. ರಕ್ತದ ಕೊರತೆ ಸಾಕಷ್ಟಿದೆ. ಆದರೆ, ರೆಡ್ ಕ್ರಾಸ್ ಸಂಸ್ಥೆ ರಾಜ್ಯದಲ್ಲಿ ಸುಮಾರು 9 ರಕ್ತ ಭಂಡಾರವನ್ನು ನಡೆಸುತ್ತಿದೆ. ಎಲ್ಲ ಟೆಸ್ಟ್ ಮಾಡಿದ ಶುದ್ಧವಾದ ರಕ್ತವನ್ನು ಕೊಡುತ್ತಿದ್ದೇವೆ. ಪ್ರತಿ ವರ್ಷ ಸುಮಾರು 30 ಸಾವಿರ ಯೂನಿಟ್ ರಕ್ತವನ್ನು ನಾವು ಸಂಸ್ಕರಿಸಿ ಸಂಸ್ಥೆಯಿಂದ ನೀಡುತ್ತಿದ್ದೇವೆ. ಅದರಲ್ಲಿ ಕಡು ಬಡವರಿಗೆ 5 ರಿಂದ 6 ಸಾವಿರ ಯೂನಿಟ್ ಉಚಿತವಾಗಿ ಸರಬರಾಜು ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ಕೋವಿಡ್ ಸಂದರ್ಭದಲ್ಲಿ ರಕ್ತದಾನಿಗಳ ಸಂಖ್ಯೆ ಕುಸಿದಿತ್ತು. ಆ ಸಮಯದಲ್ಲಿ ಸುಮಾರು 28 ಸಾವಿರ ರೆಡ್ ಕ್ರಾಸ್ ಸಂಸ್ಥೆಯ ಸ್ವಯಂ ಸೇವಕರು ಕಾರ್ಯತತ್ಪರರಾಗಿ ರಕ್ತದ ಕೊರತೆಯನ್ನು ನೀಗಿಸುವ ಕೆಲಸವನ್ನು ಮಾಡಿದರು. ಆ ಸಮಯದಲ್ಲಿ ಕೇವಲ 20 ಸಾವಿರ ಯೂನಿಟ್ನಷ್ಟು ಮಾತ್ರ ಸಂಗ್ರಹವಾಗುತ್ತಿತ್ತು. ಆದರೆ ಈಗ ಪರಿಸ್ಥಿತಿ ಸಾಕಷ್ಟು ಸುಧಾರಿಸಿದ್ದು, ಸಮಾಧಾನಕರ ಸಂಗತಿಯಾಗಿದೆ ಎಂದು ಹೇಳಿದರು.
ಎಲ್ಲರೂ ರಕ್ತದಾನ ಮಾಡಲು ಮುಂದೆ ಬರಬೇಕು: ಆಧುನಿಕ ಯುಗದಲ್ಲಿ ಸಾಕಷ್ಟು ರಸ್ತೆ ಅಪಘಾತಗಳು, ಕ್ಯಾನ್ಸರ್ ರೋಗ, ಪ್ರಸೂತಿ ಸಂಬಂಧಿತ ಕಾಯಿಲೆಗಳು ಹೀಗೆ ಸಾಕಷ್ಟು ಸಂದರ್ಭದಲ್ಲಿ ರಕ್ತದ ಕೊರತೆ ಉಂಟಾಗುತ್ತಿದೆ. ಈ ಕಾರಣಕ್ಕೆ ಇನ್ನಷ್ಟು ರಕ್ತದಾನಿಗಳ ಅವಶ್ಯಕತೆಯಿದೆ. ರಕ್ತದಾನದಿಂದ ಸೌಂದರ್ಯ ವೃದ್ಧಿ ಸೇರಿದಂತೆ ಸಾಕಷ್ಟು ಉಪಯೋಗಗಳು ಮನುಷ್ಯನಿಗೆ ಇದೆ. ಈ ಕಾರಣಕ್ಕೆ ಎಲ್ಲರೂ ರಕ್ತದಾನ ಮಾಡಲು ಮುಂದೆ ಬರಬೇಕು ಎಂದು ಮನವಿ ಮಾಡಿದರು.
ರೆಡ್ ಕ್ರಾಸ್ ಸಂಸ್ಥೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಸಂವಿಧಾನಾತ್ಮಕವಾದ ಸಂಸ್ಥೆ ನಮ್ಮದಾಗಿದ್ದು, ಇಲ್ಲಿ ಬಂದು ರಕ್ತ ದಾನ ಮಾಡಿದರೆ ಯಾವುದೇ ತೊಂದರೆ ಇರುವುದಿಲ್ಲ ಎಂದು ಹೇಳಿದರು.
ಇದನ್ನೂ ಓದಿ : ಇದು 'ರಕ್ತದಾನಿಗಳ ಗ್ರಾಮ'ವೆಂದೇ ಪ್ರಸಿದ್ಧಿ; ಇಲ್ಲಿನ ಪ್ರತಿ ಮನೆಯಲ್ಲೂ ಇದ್ದಾರೆ ದಾನಿಗಳು - WORLD BLOOD DONOR DAY 2024