ಕಾರವಾರ: ಕಳೆದ ಕೆಲವು ದಿನಗಳಿಂದ ಕರಾವಳಿ ಜಿಲ್ಲೆಗಳಲ್ಲಿ ಸುರಿದ ಭಾರಿ ಮಳೆಯಿಂದ ನೆನೆದ ಹಳೆಯ ಕಟ್ಟಡದ ಗೋಡೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಕಾರವಾರ ತಾಲೂಕಿನ ಅಸ್ನೋಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆರವ ತೊರ್ಲೆಬಾಗ ಮಜಿರೆಯಲ್ಲಿ ನಡೆದಿದೆ.
ಗುಲಾಬಿ ರಾಮಚಂದ್ರ ಮಾಂಜ್ರೇಕರ (70) ಮೃತ ಮಹಿಳೆ. ಚಿತ್ತಾಕುಲದಲ್ಲಿ ಹಣ್ಣು ವ್ಯಾಪಾರ ಮಾಡುತ್ತಾ ಜೀವನ ಸಾಗಿಸುತ್ತಿದ್ದ ಇವರು ಗುರುವಾರ ಮಧ್ಯಾಹ್ನ ತಮ್ಮ ಮನೆಯ ಪಕ್ಕದಲ್ಲಿದ್ದ ಹಳೆಯ ಕಟ್ಟಡದಲ್ಲಿ ಹಸುಗಳಿಗೆ ಗಂಜಿ ನೀಡಲು ತೆರಳಿದ್ದಾರೆ. ಈ ವೇಳೆ, ಮಳೆಗೆ ನೆನೆದ ಮಣ್ಣಿನ ಗೋಡೆ ಕುಸಿದಿದ್ದು, ಮಣ್ಣಿನ ಗೋಡೆಯೊಳಗೆ ಮಹಿಳೆ ಸಂಪೂರ್ಣವಾಗಿ ಮುಚ್ಚಿಹೋಗಿದ್ದರು.
ಹೀಗಾಗಿ ಮಹಿಳೆಯನ್ನು ಸ್ಥಳೀಯರು ಗಮನಿಸಿರಲಿಲ್ಲ. ರಾತ್ರಿ ಸುರಿದ ಮಳೆಯಿಂದಾಗಿ ಗೋಡೆಯ ಮಣ್ಣು ತೊಳೆದು ಹೋಗಿದ್ದು ಶುಕ್ರವಾರ ಬೆಳಗ್ಗೆ ಮಹಿಳೆಯ ಕಾಲು ಸ್ಥಳೀಯರಿಗೆ ಕಾಣಿಸಿದೆ. ಬಳಿಕ ಸ್ಥಳಕ್ಕೆ ತಹಸೀಲ್ದಾರ ನಿಶ್ಚಲ ನರೋನಾ ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿತ್ತಾಕುಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಸ್- ಓಮಿನಿ ಅಪಘಾತದಲ್ಲಿ ಓರ್ವ ಸಾವು: ಖಾಸಗಿ ಬಸ್ ಹಾಗೂ ಓಮಿನಿ ನಡುವೆ ನಡೆದ ಅಪಘಾತದಲ್ಲಿ ಓಮಿನಿಯಲ್ಲಿದ್ದ ಓರ್ವ ಮೃತಪಟ್ಟು ಆತನ ಪತ್ನಿ ಗಂಭೀರವಾಗಿ ಗಾಯಗೊಂಡ ಘಟನೆ ಬೆಂಗಳೂರು ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯ ಗೇರುಸೊಪ್ಪ ಶರಾವತಿ ಡ್ಯಾಂ ಸೈಟ್ ಬಳಿ ಶುಕ್ರವಾರ ನಡೆದಿದೆ.
ಭಟ್ಕಳದ ಅಬ್ದುಲ್ ವಜಿದ್ (44) ಮೃತಪಟ್ಟಿದ್ದಾರೆ. ಇವರ ಪತ್ನಿ ಗುಲ್ಶನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಭಟ್ಕಳದಿಂದ ಸಾಗರಕ್ಕೆ ತೆರಳುತ್ತಿದ್ದ ಓಮಿನಿ ಹಾಗೂ ಸಾಗರದಿಂದ ಹೊನ್ನಾವರಕ್ಕೆ ತೆರಳುತ್ತಿದ್ದ ಬಸ್ ನಡುವೆ ಅಪಘಾತ ಸಂಭವಿಸಿದೆ. ಗಾಯಗೊಂಡ ಮಹಿಳೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಸ್ ಚಾಲಕನ ವಿರುದ್ಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.