ಹುಬ್ಬಳ್ಳಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಪರ ಪ್ರಚಾರಾರ್ಥವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನಗರಕ್ಕೆ ಭೇಟಿ ನೀಡಲಿದ್ದು, ಅವರು ಆಗಮಿಸುವ ರಸ್ತೆ ಹಾಗೂ ಸಮಾರಂಭ ಸ್ಥಳವನ್ನು ಭದ್ರತಾ ದೃಷ್ಟಿಯಿಂದ "ನೋ ಡ್ರೋಣ್ ಜೋನ್" ಘೋಷಿಸಿ ಹು-ಧಾ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ್ ಆದೇಶ ಹೊರಡಿಸಿದ್ದಾರೆ.
ಬುಧವಾರ ಹುಬ್ಬಳ್ಳಿ ನಗರಕ್ಕೆ ವಿಮಾನದ ಮೂಲಕ ಆಗಮಿಸಿ, ವಿಮಾನ ನಿಲ್ದಾಣದಿಂದ ಅಕ್ಷಯ ಪಾರ್ಕ್, ಹೊಸೂರು ವೃತ್ತ, ಉತ್ತರ ಸಂಚಾರ ಪೊಲೀಸ್ ಠಾಣೆ, ಬೆಂಬಳಗಿ ಕ್ರಾಸ್, ಬಾಳಿಗಾ ಕ್ರಾಸ್, ಐ.ಬಿ ಕ್ರಾಸ್, ದೇಸಾಯಿ ಅಂಡರ್ ಬ್ರಿಡ್ಜ್, ಅಂಬೇಡ್ಕರ್ ವೃತ್ತ, ಚೇಂಬರ್ ಆಫ್ ಕಾಮರ್ಸ್ ಕ್ರಾಸ್ ಮೂಲಕ ನೆಹರೂ ಮೈದಾನಕ್ಕೆ ಆಗಮಿಸಲಿದ್ದಾರೆ. ಚುನಾವಣೆಯ ಪ್ರಯುಕ್ತ ಅಲ್ಲಿ ಪಕ್ಷದ ಅಭ್ಯರ್ಥಿ ಪರ ಸಾರ್ವಜನಿಕ ಬಹಿರಂಗ ಸಭೆ ಉದ್ದೇಶಿಸಿ ಅಮಿತ್ ಶಾ ಮಾತನಾಡಲಿದ್ದಾರೆ.
ವಿಮಾನ ನಿಲ್ದಾಣದಿಂದ ನೆಹರೂ ಮೈದಾನಕ್ಕೆ ಆಗಮಿಸುವ ಸಮಯದಲ್ಲಿ ಹಾಗೂ ನೆಹರೂ ಮೈದಾನದಲ್ಲಿ ಸಾರ್ವಜನಿಕ ಬಹಿರಂಗ ಸಭೆಯನ್ನು ಉದ್ದೇಶಿತ ಮಾತನಾಡುವ ಸಮಯದಲ್ಲಿ ಡ್ರೋಣ್ ಕ್ಯಾಮರಾ ಹಾರಾಟದ ಮುಖಾಂತರ ವಿಡಿಯೋ ಚಿತ್ರೀಕರಣ ಮಾಡುವ ಸಾಧ್ಯತೆಗಳು ಇರುತ್ತವೆ. ಗೃಹ ಸಚಿವರು ಅತೀ ಗಣ್ಯ ವ್ಯಕ್ತಿಗಳಾಗಿದ್ದು, ಅಲ್ಲದೇ ಭದ್ರತೆಗೆ ಒಳಪಟ್ಟ ಗಣ್ಯವ್ಯಕ್ತಿಯಾಗಿರುತ್ತಾರೆ. ಈ ಹಿನ್ನೆಲೆ ಯಾವುದೇ ಅಹಿತಕರ ಘಟನೆಗಳು ಸಂಭವಿಸಬಹುದಾದ ಸಾಧ್ಯತೆಗಳು ಹೆಚ್ಚು. ಸುರಕ್ಷತೆಯ ಹಿತದೃಷ್ಟಿಯಿಂದ ಡ್ರೋಣ್ ಕ್ಯಾಮರಾ ಹಾರಾಟದ ಮೂಲಕ ವಿಡಿಯೋ ಚಿತ್ರೀಕರಣ ಮಾಡುವುದನ್ನು ನಿಷೇಧಿಸಿ, No Drone Zone ಎಂದು ಪರಿಗಣಿಸಿ ನಿಷೇಧಾಜ್ಞೆಯನ್ನು ಹೊರಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಹಾಸನ ವಿಡಿಯೋ ಕೇಸಲ್ಲಿ ಕಾಂಗ್ರೆಸ್ ಸರ್ಕಾರ ಇದುವರೆಗೂ ಯಾಕೆ ಕ್ರಮ ಜರುಗಿಸಿಲ್ಲ: ಅಮಿತ್ ಶಾ - HASSAN PEN DRIVE CASE