ಬೆಂಗಳೂರು: ದಶಕದ ಕಾಯುವಿಕೆ ಬಳಿಕ ಇದೀಗ ನಾಳೆ ಎತ್ತಿನ ಹೊಳೆ ಯೋಜನೆಯ ಮೊದಲ ಹಂತದ ಕಾಮಗಾರಿ ಲೋಕಾರ್ಪಣೆಗೊಳ್ಳುತ್ತಿದೆ. ಆ ಮೂಲಕ ಅನೇಕ ವಿಳಂಬ, ಗಣನೀಯ ಪ್ರಮಾಣದ ಯೋಜನಾ ವೆಚ್ಚ ಹೆಚ್ಚಳ, ವಿರೋಧ, ಪ್ರತಿರೋಧಗಳ ಮಧ್ಯೆ ಕುಟುಂತ್ತಾ ಸಾಗುತ್ತಿರುವ ಯೋಜನೆ ದಶಕದ ಬಳಿಕ ಮೊದಲ ಯಶಸ್ವಿ ಹೆಜ್ಜೆ ಇಡುತ್ತಿದೆ.
ಪಶ್ಚಿಮಘಟ್ಟದ ಮೇಲ್ಭಾಗದಲ್ಲಿ ಹರಿಯುವ ಎತ್ತಿನ ಹೊಳೆ, ಕಾಡುಮನೆ ಹೊಳೆ, ಕೇರಿ ಹೊಳೆ ಮತ್ತು ಹೊಂಗದಹಳ್ಳದಿಂದ ಮುಂಗಾರು ಮಳೆ ಅವಧಿಯಲ್ಲಿ 24.01 ಟಿಎಂಸಿ ಪ್ರಮಾಣದ ಪ್ರವಾಹದ ನೀರನ್ನು 7 ಜಿಲ್ಲೆಗಳಿಗೆ ಹರಿಸುವ ಎತ್ತಿನ ಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ ಇದು. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಹಾಗೂ ಚಿಕ್ಕಮಗಳೂರಿನ ಬರಪೀಡಿತ 29 ತಾಲೂಕುಗಳ 38 ಪಟ್ಟಣ ಪ್ರದೇಶಗಳ ಹಾಗೂ 6,657 ಗ್ರಾಮಗಳ ಸುಮಾರು 75.59 ಲಕ್ಷ ಜನರಿಗೆ ಮತ್ತು ಜಾನುವಾರುಗಳಿಗೆ 14.056 ಟಿಎಂಸಿ ಕುಡಿಯುವ ನೀರನ್ನು ಒದಗಿಸುವುದು. ಹಾಗೂ 5 ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಹಾಸನ, ತುಮಕೂರು ವ್ಯಾಪ್ತಿಯಲ್ಲಿ 527 ಕೆರೆಗಳಿಗೆ 9.953 ಟಿಎಂಸಿ ಪ್ರಮಾಣದ ನೀರನ್ನು ಕೆರೆಗಳ ಸಾಮರ್ಥ್ಯದ ಶೇ.50ರಷ್ಟು ತುಂಬಿಸಿ ಅಂರ್ತಜಲ ಮರುಪೂರಣ ಮಾಡುವ ಮಹತ್ವದ ಯೋಜನೆ ಇದಾಗಿದೆ.
ಗಣನೀಯ ಪ್ರಮಾಣದಲ್ಲಿ ಏರಿಕೆಯಾದ ಯೋಜನಾ ವೆಚ್ಚ: ಎತ್ತಿನ ಹೊಳೆ ಯೋಜನಾ ವೆಚ್ಚ ದುಪ್ಪಟ್ಟು ಏರಿಕೆಯಾಗಿರುವುದು ದೊಡ್ಡ ವಿರೋಧ, ಟೀಕೆಗಳಿಗೆ ಕಾರಣವಾಗಿದೆ. ಯೋಜನೆಯ ಮೂಲ ಅಂದಾಜು ಮೊತ್ತ 8,323.50 ಕೋಟಿಗಳಾಗಿತ್ತು. ಈ ಸಂಬಂಧ ಸರ್ಕಾರ 2012ರ ಜುಲೈ 13ರಂದು ಆದೇಶ ಹೊರಡಿಸಿತ್ತು. ದರ ಪರಿಷ್ಕರಣೆ ಮತ್ತು ಭೂಸ್ವಾಧೀನದಿಂದಾಗಿ ರೂ. 12,912.36 ಕೋಟಿಗಳ ಮೊತ್ತದ ಪರಿಷ್ಕೃತ ಯೋಜನಾ ವರದಿಗೆ 2014ರ ಫೆಬ್ರವರಿ 17ರಂದು ಆಡಳಿತಾತ್ಮಕ ಅನುಮೋದನೆ ನೀಡಲಾಯಿತು.
ಇತ್ತೀಚೆಗೆ ಹೊಸ ಭೂಸ್ವಾಧೀನ ಕಾಯ್ದೆಯ ಅನುಷ್ಠಾನ, ದರ ಪರಿಷ್ಕರಣೆ, ಟೆಂಡರ್ ಪ್ರೀಮಿಯಂ, ಸರಕು ಮತ್ತು ಸೇವಾ ತೆರಿಗೆಯ (GST) ಹೆಚ್ಚಳ, ಯೋಜನೆಯಲ್ಲಿ ಅವಶ್ಯವಿರುವ ಹೆಚ್ಚುವರಿ ಕಾಮಗಾರಿಗಳ ಅಳವಡಿಕೆ (ಪಥ ಬದಲಾವಣೆಯಿಂದ) ಮತ್ತು ಫೀಡರ್ ಕಾಲುವೆಗಳಲ್ಲಿ ತೆರೆದ ಕಾಲುವೆ ಬದಲಾಗಿ ಪೈಪ್ಲೈನ್ಗಳ ಅಳವಡಿಕೆ ಈ ಎಲ್ಲ ಕಾರಣಗಳಿಂದ ಯೋಜನೆಯ ಅಂದಾಜು ಮೊತ್ತ ಮತ್ತೆ ಗಣನೀಯವಾಗಿ ಹೆಚ್ಚಾಗಿದೆ. ಅದರಂತೆ ಯೋಜನೆಯ ಅಂದಾಜು ಮೊತ್ತ ರೂ.23,251.66 ಕೋಟಿಗಳಿಗೆ ಏರಿಕೆ ಕಂಡಿದೆ. ಈ ಸಂಬಂಧ ಪುನರ್ ಪರಿಷ್ಕೃತ ಯೋಜನಾ ವರದಿಗೆ 2023ರ ಜನವರಿ 10ರಂದು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಹತ್ತು ಹಲವು ವಿಳಂಬಗಳಿಂದ ವೇಗ ಕಳೆದ ಯೋಜನೆ: ದಶಕದ ಹಿಂದೆ ಆರಂಭವಾದ ಎತ್ತಿನಹೊಳೆ ಕಾಮಗಾರಿ ಕುಂಟುತ್ತಾ, ಆಮೆಗತಿಯಲ್ಲಿ ಸಾಗಿದೆ. ಹಲವು ಡೆಡ್ಲೈನ್ಗಳನ್ನೂ ಪೂರೈಸಲಾಗದೇ ಇದೀಗ ಮೊದಲ ಹಂತವನ್ನು ಲೋಕಾರ್ಪಣೆ ಮಾಡಲಾಗುತ್ತಿದೆ. ಎತ್ತಿನ ಹೊಳೆ ಯೋಜನೆಯ ಮೊದಲ ಹಂತ ಏತ ಕಾಮಗಾರಿಗೆ ಅರಣ್ಯ ಇಲಾಖೆ ಮಂಜೂರಾತಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯ ಪೀಠದಲ್ಲಿ (NGT) ಒಟ್ಟು 7 ಪ್ರಕರಣಗಳು ದಾಖಲಾಗಿತ್ತು. ಇದರಿಂದ ಕಾಮಗಾರಿ ಅನುಷ್ಠಾನದಲ್ಲಿ ವಿಳಂಬವಾಗಿತ್ತು. ರಾಷ್ಟ್ರೀಯ ಹಸಿರು ನ್ಯಾಯ ಪೀಠದಲ್ಲಿ ದಾಖಲಾಗಿದ್ದ ಎಲ್ಲಾ ಏಳು ಪ್ರಕರಣಗಳು 2019ರ ಮೇ 24ರಂದು ಇತ್ಯರ್ಥವಾಯಿತು.
ಭೂಸ್ವಾಧೀನಕ್ಕೆ ವಿರೋಧ: "ಭೂ ಪರಿಹಾರ ಪಡೆಯುವ ಸಂದರ್ಭದಲ್ಲಿ ರೈತರು ದಾಖಲಾತಿಗಳನ್ನು ಒದಗಿಸಲು ವಿಳಂಬ ಮಾಡುತ್ತಿದ್ದು, ಭೂಸ್ವಾಧೀನ ಪ್ರಕ್ರಿಯೆಯು ಪೂರ್ಣಗೊಂಡು, ಹಣ ಪಾವತಿಯಾಗುವವರೆಗೂ ಜಮೀನನ್ನು ಸ್ವಾಧೀನಕ್ಕೆ ಪಡೆಯಲು ವಿರೋಧ ವ್ಯಕ್ತವಾಗಿದ್ದರಿಂದ ಯೋಜನೆ ಅನುಷ್ಠಾನಗೊಳಿಸುವಲ್ಲಿ ವಿಳಂಬವಾಗಿದೆ" ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೂ ಕೆಲ ಭಾಗಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಕೈಗೊಳ್ಳಲು ರೈತರನ್ನು ಮನವೊಲಿಸಿ ಒಪ್ಪಿಗೆ ಪಡೆದು ಟೆಂಡರ್ ಕರಾರಿನಂತೆ ತ್ರಿಪಕ್ಷೀಯ ಒಪ್ಪಂದ (Tripartite agreement) ಮಾಡಿಕೊಂಡು ಜಮೀನು ಪಡೆದು ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ" ಎಂದು ಜಲಸಂಪನ್ಮೂಲ ಇಲಾಖೆ ಮಾಹಿತಿ ನೀಡಿದೆ.
ಜಲ ಸಂಪನ್ಮೂಲ ಇಲಾಖೆಯಿಂದಲೂ ವಿಳಂಬ: ಎರಡನೇ ಹಂತದ ಗುರುತ್ವ ಕಾಲುವೆಯ ಸರಪಳಿ 261.69 ಕಿ.ಮೀವರೆಗೆ ಬರುತ್ತಿದ್ದು, ಅದರಲ್ಲಿ 32.72 ಕಿ.ಮೀ ರಿಂದ 229.46 ಕಿ.ಮೀರವರೆಗೆ 20 ಸ್ಥಳಗಳಲ್ಲಿ 19.41 ಕಿ.ಮೀ ಉದ್ದದ ನಾಲೆ ಬರಲಿದೆ. ಈ ಕಾಮಗಾರಿ ಹಾಸನ (15.47 ಕಿ.ಮೀ) ಮತ್ತು ತುಮಕೂರು (3.944 ಕಿ.ಮೀ) ಜಿಲ್ಲೆಗಳಲ್ಲಿ ಒಟ್ಟು 530.24 ಎಕರೆ ಅರಣ್ಯ ಪ್ರದೇಶಗಳಲ್ಲಿ (both reserved & deemed) ಹಾದು ಹೋಗುತ್ತದೆ. ಇದಕ್ಕೆ ಪ್ರತಿಯಾಗಿ ಒಟ್ಟು 573.11 ಎಕರೆ ಅರಣ್ಯೀಕರಣ ಭೂಮಿಯನ್ನು ಪರಿಹಾರಾತ್ಮಕವಾಗಿ ಜಲಸಂಪನ್ಮೂಲ ಇಲಾಖೆ ನೀಡಬೇಕಿದ್ದು, ಈ ಪ್ರಕ್ರಿಯೆ ವಿಳಂಬವಾಗುತ್ತಿದೆ.
ಏಕರೂಪ ದರ ನೀಡಲು ರೈತರ ಒತ್ತಾಯ: ಖಾಸಗಿ ಜಮೀನು ಮತ್ತು ಅರಣ್ಯ ಇಲಾಖೆಯ ಜಮೀನುಗಳನ್ನು ಗುರುತಿಸುವಲ್ಲಿ ಗೊಂದಲ ಮತ್ತು ವಿಳಂಬದಿಂದ ಕೆಲವು ಪ್ರದೇಶಗಳಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಲ್ಲಿ ವಿಳಂಬವಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ, ರೈಲ್ವೇ, ಪೆಟ್ರೋನೆಟ್ ಮತ್ತು ಗೇಲ್ ಕ್ರಾಸಿಂಗ್‌ಗಳಿಗೆ ಸಂಬಂಧಿಸಿದ ಇಲಾಖೆಗಳಿಂದ ಅನುಮತಿ ಪಡೆಯುವಲ್ಲಿ ವಿಳಂಬವಾಗುತ್ತಿದೆ. ಅಲ್ಲದೇ ಭೈರಗೊಂಡ್ಲು ಜಲಾಶಯ ನಿರ್ಮಾಣ ಕಾಮಗಾರಿಯನ್ನು ಟೆಂಡರ್ ಆಧಾರದ ಮೇಲೆ ಗುತ್ತಿಗೆದಾರರಿಗೆ 2018ರಲ್ಲಿ ವಹಿಸಲಾಗಿದೆ.
ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಗೊಳ್ಳುವ ಸಂದರ್ಭದಲ್ಲಿ ಕೊರಟಗೆರೆ ತಾಲೂಕಿನ ರೈತರು ದೊಡ್ಡಬಳ್ಳಾಪುರ ತಾಲೂಕಿನ ರೈತರಿಗೆ ನೀಡುವ ಪರಿಹಾರ ದರದಂತೆ ತಮಗೂ ಸಹ ಏಕರೂಪ ದರ ನೀಡಲು ಒತ್ತಾಯಿಸಿದ್ದರಿಂದ ಕಾಮಗಾರಿಗಳಿಗೆ ಅಡೆ ತಡೆಯಾಗಿದೆ. ಈ ಕಾರಣದಿಂದಾಗಿ ಭೂಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಪ್ರಾರಂಭಿಸುವಲ್ಲಿ ವಿಳಂಬವಾಗುತ್ತಿದೆ. ಈ ಎಲ್ಲಾ ವಿಳಂಬಗಳ ಮಧ್ಯೆ ಯೋಜನೆಯನ್ನು 2027ರ ಮಾರ್ಚ್ 31r ಅಂತ್ಯಕ್ಕೆ ಅನುದಾನದ ಲಭ್ಯತೆಯ ಮೇರೆಗೆ ಸಂಪೂರ್ಣವಾಗಿ ಪೂರ್ಣಗೊಳಿಸುವ ವಿಶ್ವಾಸವನ್ನು ಸರ್ಕಾರ ಹೊಂದಿದೆ.
ಇದನ್ನೂ ಓದಿ: ಎತ್ತಿನಹೊಳೆ ಯೋಜನೆ ಏತ ಕಾಮಗಾರಿಗಳ ಪೂರ್ವ ಪರೀಕ್ಷಾರ್ಥ ಕಾರ್ಯಾಚರಣೆ ಯಶಸ್ವಿ - Yettinahole Project