ಬೆಳಗಾವಿ: ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಎಡಿಜಿಪಿ ಅಲೋಕ್ ಕುಮಾರ್ ಅವರಿಗೆ ಜೀವ ಬೆದರಿಕೆ ಹಾಕಿದ ಪ್ರಕರಣದ ಆರೋಪಿಯೋರ್ವ ನ್ಯಾಯಾಲಯದ ಆವರಣದಲ್ಲೇ ಪಾಕ್ ಪರ ಘೋಷಣೆ ಕೂಗಿದ ಆರೋಪ ಬೆಳಗಾವಿಯಲ್ಲಿ ಇಂದು ಕೇಳಿ ಬಂದಿದೆ.
ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿನ ಕೈದಿ ಜಯೇಶ್ ಪೂಜಾರಿ ಎಂಬಾತ ಈ ಘೋಷಣೆ ಕೂಗಿದ್ದಾನೆ ಎಂದು ಹೇಳಲಾಗಿದೆ. ಘೋಷಣೆ ಕೂಗುತ್ತಿದ್ದಂತೆ ವಕೀಲರು, ಸಾರ್ವಜನಿಕರು ಹಿಡಿದು ಥಳಿಸಿದ್ದಾರೆ.
ಜೈಲಿನಲ್ಲಿದ್ದುಕೊಂಡೇ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರಿಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿರುವುದಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಇದೀಗ ಘೋಷಣೆ ಕೂಗಿದ ಆರೋಪದ ಬಳಿಕ ಪೊಲೀಸರು ಆತನನ್ನು ಎಪಿಎಂಸಿ ಠಾಣೆಗೆ ಕರೆದೊಯ್ದಿದ್ದಾರೆ.
ಈ ವೇಳೆ ಕೈದಿ, "ನನ್ನ ಮೇಲೆ ಸುಮ್ಮನೆ ದೇಶದ್ರೋಹದ ಕೇಸ್ ಮಾಡಿದ್ದಾರೆ. ಇದೊಂದು ರಾಜಕೀಯ. ದಾಖಲೆಗಳನ್ನು ಸಲ್ಲಿಸಲು ಬಿಡುತ್ತಿಲ್ಲ. ನನಗೆ ನ್ಯಾಯ ಬೇಕು" ಎಂದು ಹೇಳುತ್ತಿರುವ ದೃಶೃಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಇದನ್ನೂ ಓದಿ: ರೇಣುಕಾಸ್ವಾಮಿ ಶವ ಎಸೆದಿದ್ದ ಜಾಗ ತೋರಿಸಿದ ಆರೋಪಿಗಳು