ಕಾರವಾರ: ಕಾಳಿನದಿಯ ಹಳೆಯ ಸೇತುವೆ ಕುಸಿದು ನದಿಗೆ ಬಿದ್ದಿದ್ದ ಲಾರಿಯನ್ನು ಎತ್ತಲು ಜಿಲ್ಲಾಡಳಿತ ಹಿಂದೇಟು ಹಾಕುತ್ತಿದೆ ಎಂದು ಆರೋಪಿಸಿ ಲಾರಿ ಮಾಲೀಕ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ಮಂಗಳವಾರ ತಡರಾತ್ರಿ ನಡೆಯಿತು.
ತಮಿಳುನಾಡು ಮೂಲದ ಲಾರಿ ಮಾಲೀಕ ಸೆಂಥಿಲ್ ಕುಮಾರ್ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಆ.7 ರಂದು ಸೇತುವೆ ಕುಸಿದು ಬಿದ್ದಾಗ ತಮಿಳುನಾಡಿನ ಲಾರಿ ಕೂಡ ನದಿಗೆ ಬಿದ್ದಿತ್ತು. ಬಳಿಕ ಲಾರಿ ಚಾಲಕನನ್ನು ರಕ್ಷಣೆ ಮಾಡಲಾಗಿತ್ತು. ಆದರೆ ಏಳು ದಿನವಾದರೂ ಲಾರಿಯನ್ನು ಮೇಲೆತ್ತಲು ಜಿಲ್ಲಾಡಳಿತ ಹಿಂದೇಟು ಹಾಕುತ್ತಿದೆ. ನನ್ನ ಲಾರಿ ಬಿದ್ದ ಕಾರಣದಿಂದಲೇ ನಾಲ್ಕಾರು ಲಾರಿಗಳು ಅಪಾಯದಿಂದ ಪಾರಾಗಿವೆ. ಆದರೂ ತಮಿಳುನಾಡಿನ ಲಾರಿ ಎಂದು ನಿಶ್ಕಾಳಜಿ ಮಾಡಲಾಗಿದೆ. ಇಲ್ಲಿಯದ್ದೇ ಲಾರಿಯಾದರೆ ಬಿಡುತ್ತಿರಲಿಲ್ಲ ಎಂದು ಆರೋಪಿಸಿದರು.
ಬಳಿಕ ಲಾರಿ ಮಾಲೀಕ ಹಾಗೂ ಅವನ ಇಬ್ಬರು ಸಹಚರರು ಹಳೆಯ ಸೇತುವೆಯ ಉಳಿದ ಭಾಗದಿಂದಲೇ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ತಕ್ಷಣ ಸ್ಥಳೀಯರು ಹಾಗೂ ಚಿತ್ತಾಕುಲ ಠಾಣೆಯ ಪೊಲೀಸರು ರಕ್ಷಿಸಿದರು.
"ನದಿಗೆ ಬಿದ್ದಿರುವ ಲಾರಿ ಎತ್ತಲು ಈಗಾಗಲೇ ಎನ್ಎಚ್ಎಐ ಅಧಿಕಾರಿಗಳು ಐಆರ್ಬಿ ಅವರಿಗೆ ಸೂಚನೆ ನೀಡಿದ್ದಾರೆ. ಆದರೆ ಹೊಸ ಸೇತುವೆ ಮೇಲೆ ಕಾರ್ಯಾಚರಣೆಯಿಂದ ಸೇತುವೆಗೆ ಹಾನಿಯಾಗುವ ಸಾಧ್ಯತೆ ಇದೆ. ಅಲ್ಲದೆ ಎರಡು ಬದಿಯ ಸಂಚಾರ ಒಂದೇ ಸೇತುವೆ ಮೇಲೆ ಓಡಾಟ ನಡೆಸುತ್ತಿದ್ದು, ನೀರಿನ ಸೆಳವು ಕೂಡ ಹೆಚ್ಚಿದೆ. ಲಾರಿಗೆ ಇನ್ಶೂರೆನ್ಸ್ ಇದ್ದರೆ ಅದಕ್ಕೆ ಪರಿಹಾರ ಸಿಗಲಿದೆ. ನೀರಿನ ಸೆಳವು ಕಡಿಮೆಯಾದ ಮೇಲೆ ಲಾರಿ ಎತ್ತಲಾಗುವುದು" ಎಂದು ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.