ಬೆಂಗಳೂರು: ಇಬ್ಬರು ಬಿಬಿಎಂಪಿ ಅಧಿಕಾರಿಗಳ ನಿವಾಸಗಳ ಮೇಲೆ ಇಂದು ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಿಬಿಎಂಪಿ ಕಲ್ಯಾಣಾಧಿಕಾರಿ ಲಲಿತಾ ಹಾಗೂ ಉಪ ಹಣಕಾಸು ನಿಯಂತ್ರಕ ಸತ್ಯಮೂರ್ತಿ ಅವರ ನಿವಾಸಗಳಿಗೆ ಲೋಕಾಯುಕ್ತ ಡಿವೈಎಸ್‌ಪಿ ಸುನೀಲ್. ವೈ. ನಾಯಕ್ ನೇತೃತ್ವದಲ್ಲಿ 8 ತಂಡಗಳಾಗಿ ದಾಳಿ ನಡೆಸಿದ್ದು, ಶೋಧ ಮುಂದುವರೆದಿದೆ.
ಬಿಬಿಎಂಪಿಯ ಪಶ್ಚಿಮ ವಲಯದಲ್ಲಿ ಕಲ್ಯಾಣ ಯೋಜನೆಗಳ ಅನುಷ್ಠಾನದ ಹೆಸರಿನಲ್ಲಿ ಫಲಾನುಭವಿಗಳ ಹಣವನ್ನು ಅಕ್ರಮವಾಗಿ ಸೊಸೈಟಿಗಳಿಗೆ ವರ್ಗಾಯಿಸಿಕೊಂಡು ಕಬಳಿಸಿರುವ ಆರೋಪ ಕೇಳಿ ಬಂದಿತ್ತು.
ಈ ಹಿನ್ನೆಲೆಯಲ್ಲಿ ವಯ್ಯಾಲಿಕಾವಲ್‌ನಲ್ಲಿರುವ ಸತ್ಯಮೂರ್ತಿ ಅವರ ಮನೆ ಹಾಗೂ ದೇವಯ್ಯ ಪಾರ್ಕ್ ಬಳಿ ಇರುವ ಲಲಿತಾ ಅವರ ಮನೆ ಹಾಗೂ ಅವರಿಗೆ ಸಂಬಂಧಿಸಿದ ಮತ್ತಿತರ ಸ್ಥಳಗಳ ಮೇಲೂ ಲೋಕಾಯುಕ್ತ ತಂಡ ದಾಳಿ ನಡೆಸಿದ್ದು, ಪರಿಶೀಲನೆಯಲ್ಲಿ ತೊಡಗಿದೆ.
ತುಮಕೂರಿನ ಆರ್‌ಟಿಓ ಕಚೇರಿ ಮೇಲೂ ದಾಳಿ; ಮತ್ತೊಂದೆಡೆ ತುಮಕೂರಿನ ಆರ್‌ಟಿಓ ಕಚೇರಿ ಮೇಲೂ ಲೋಕಾಯುಕ್ತ ಅಧಿಕಾರಿಗಳ ತಂಡ ಇಂದು ದಾಳಿ ಮಾಡಿದ್ದು, ದಾಖಲೆಗಳ ಪರಿಶೀಲೆ ನಡೆಸಿದೆ.
10ಕ್ಕೂ ಹೆಚ್ಚು ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿ ಪರಿಶೀಲನೆ ಕೈಗೊಂಡಿದೆ. ಬುಧವಾರ ಬೆಳಗ್ಗೆ ಸುಮಾರು 11 ಗಂಟೆ ಸುಮಾರಿಗೆ ನಗರದ ಬಿ ಹೆಚ್ ರಸ್ತೆಯಲ್ಲಿರುವ ಆರ್‌ಟಿಓ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳು ಆಗಮಿಸಿದ್ದರು.
ಆರ್‌ಟಿಓ ಕಚೇರಿಗೆ ಬರುತ್ತಿದ್ದ ಪ್ರತಿಯೊಬ್ಬರು ಸೇರಿದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಲೋಕಾಯುಕ್ತ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದರು. ಬೆಳಗ್ಗೆಯಿಂದಲೂ ಆರ್‌ಟಿಓ ಕಚೇರಿ ಆವರಣದಲ್ಲಿ ಇದ್ದವರಿಗೆ ಯಾವ ಕೆಲಸದ ನಿಮಿತ್ತ ಆಗಮಿಸಿದ್ದಾಗಿ ತೀವ್ರ ವಿಚಾರಣೆ ನಡೆಸಿದರು.
ಇದನ್ನೂ ಓದಿ: ಲೋಕಾಯುಕ್ತ ದಾಳಿ: ಬೆಳಗ್ಗೆಯಿಂದ ನಡೆದ ರೇಡ್ ವಿವರ ನೀಡಿದ ಅಧಿಕಾರಿಗಳು, ಹೀಗಿದೆ ಸಂಪೂರ್ಣ ಮಾಹಿತಿ