ಧಾರವಾಡ: ಅಂಜುಮನ್ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಮೇಲೆ ಹಲ್ಲೆಗೆ ಯತ್ನ ನಡೆಸಿದ ಗಂಭೀರ ಆರೋಪ ಕೇಳಿಬಂದಿದೆ. ಈ ಬಗ್ಗೆ ಕುಟುಂಬಸ್ಥರು ಇಲ್ಲಿನ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅಪರಿಚಿತರ ಗ್ಯಾಂಗ್ವೊಂದು ಇಸ್ಮಾಯಿಲ್ ತಮಟಗಾರ ಮನೆಗೆ ನುಗ್ಗಿ ಹಲ್ಲೆಗೆ ಯತ್ನಿಸಿರುವ ಬಗ್ಗೆ ಸಂಬಂಧಿಕರು ಆರೋಪಿಸಿದ್ದಾರೆ. ಅಂಜುಮನ್ ಸಂಸ್ಥೆಯ ಕಚೇರಿಯಲ್ಲಿಯೇ 10ಕ್ಕೂ ಹೆಚ್ಚು ಯುವಕರ ಗ್ಯಾಂಗ್ ಇಸ್ಮಾಯಿಲ್ ಹಲ್ಲೆಗೆ ಮುಂದಾಗಿತ್ತು. ಆದರೆ ಅಲ್ಲಿ ಅವರಿಲ್ಲದ ಕಾರಣ, ಮನೆಗೆ ನುಗ್ಗಿದಾಗ ಮನೆಯಲ್ಲೂ ಇಲ್ಲದೇ ಇದ್ದುದರಿಂದ ಮನೆಯವರೊಂದಿಗೆ ಅಸಭ್ಯವಾಗಿ ವರ್ತನೆ ತೋರಿದ್ದಾರೆ. ಇಸ್ಮಾಯಿಲ್ನ್ನು ಕೊಲ್ಲಲು ಬಂದಿದ್ದೇವೆ ಎಂದಿದ್ದಾರೆ ಎಂದು ಮನೆಯವರು ತಿಳಿಸಿದ್ದಾರೆ.
ಆರೋಪಿಗಳು ಲಂಗೋಟಿ ಜಮಾದಾರ್ ಗಲ್ಲಿಯ ಅಂಜುಮನ್ ಹಾಸ್ಟೆಲ್ ಬಳಿ ಹಲ್ಲೆಗೆ ಸ್ಕೆಚ್ ಹಾಕಿದ್ದರಂತೆ. ಆದರೆ ಇಸ್ಮಾಯಿಲ್ ಇಲ್ಲದ ಕಾರಣಕ್ಕೆ ಮನೆಯವರೊಂದಿಗೆ ಜಗಳ ತೆಗೆದಿದ್ದಾರೆ ಎಂದು ಆತಂಕಗೊಂಡ ಕುಟುಂಬಸ್ಥರು ಶಹರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಬಗ್ಗೆ ಇಸ್ಮಾಯಿಲ್ ಸಹೋದರ ಇಕ್ಭಾರ್ ಮಾತನಾಡಿ, "ನಮ್ಮ ಅಣ್ಣನ ವಿರುದ್ಧ ಷಡ್ಯಂತರ ಮಾಡುತ್ತಿದ್ದಾರೆ. ಈ ಬಗ್ಗೆ ನಮಗೆ ಗೊತ್ತಿದೆ. ನಮ್ಮಣ್ಣ ನಮ್ಮೊಂದಿಗೆ ಈ ಬಗ್ಗೆ ಹೇಳಿದ್ದಾನೆ. ಅಲ್ಲದೇ ಪತ್ರ ಕೂಡ ಬರೆದಿದ್ದಾನೆ. ಆದರೆ ಯಾರೂ ಕೂಡ ಗಂಭೀರವಾಗಿ ತೆಗೆದುಕೊಂಡಿಲ್ಲ. ನಮ್ಮ ಅಣ್ಣನಿಗೆ ಏನಾದರೂ ಆದರೆ ಯಾರು ಹೊಣೆ. ಹೀಗಾಗಿ, ನಾನು ಮಾಧ್ಯಮದವರ ಮುಖಾಂತರ ಕೇಳಿಕೊಳ್ಳುತ್ತಿದ್ದೇನೆ. ಇದರ ಬಗ್ಗೆ ತನಿಖೆಯಾಗಬೇಕು. ನೀವೇ ತನಿಖೆ ಮಾಡಿ, ನಿಮಗೆ ತಿಳಿಯಲಿದೆ. ನೀವು ಮೊಬೈಲ್ ತೆಗದುಕೊಂಡು ಕಾರ್ಯಾಚರಣೆ ಮಾಡಿ. ಅಣ್ಣ ಯಾರಿಗೂ ಅನ್ಯಾಯ ಮಾಡಿಲ್ಲ" ಎಂದು ಹೇಳಿದರು.
ಘಟನೆ ಬಗ್ಗೆ ಪ್ರತ್ಯಕ್ಷದರ್ಶಿ ಜಮಾಲ್ ಪ್ರತಿಕ್ರಿಯಿಸಿ "ನಾನು ನಮ್ಮ ಮನೆಯಲ್ಲಿ ಕುಳಿತಿದ್ದೆ. ಹೊರಗಡೆ ಶಬ್ದ ಕೇಳಿ ಹೋದಾಗ ಇಸ್ಮಾಯಿಲ್ ತಾಯಿ ಅವರ ಮೇಲೆ ಯುವಕರ ಗುಂಪು ಬೈಯಲು ಶುರು ಮಾಡಿದ್ದರು. ಏನಾಗಿದೆ ಎಂದು ನಾನು ಕೇಳಲು ಹೋದಾಗ ನೀ ಯಾರು ಎಂದು ಪ್ರಶ್ನಿಸಿ 4 ಜನರು ನನ್ನನ್ನು ಕರೆದುಕೊಂಡು ಸೈಡಿಗೆ ಹೋದರು. ಚಾಕು ತೆಗೆದುಕೊಂಡು ಹಲ್ಲೆಗೆ ಬಂದಿದ್ದ ಅವರು 'ನಾವು ಅಂಜುಮನ್ ಆಫೀಸ್ಗೆ ಹೋಗಿದ್ದೆ. ಆದರೆ ಅಲ್ಲಿ ಇಸ್ಮಾಯಿಲ್ ಸಿಕ್ಕಿಲ್ಲ. ಇವತ್ತು ಅವ ಉಳಿದಿದ್ದಾನೆ. ನಾಳೆ ಉಳಿಯುವ ಹಾಗಿಲ್ಲ' ಎಂದು ದಮ್ಕಿ ಹಾಕಿ ಚಾಕು ಹಿಡಿದುಕೊಂಡು ಹೋಗಿದ್ದಾರೆ. ಒಟ್ಟು 10 ಮಂದಿ ಇದ್ದರು. ಏಕೆ ಎಂದು ಪ್ರಶ್ನಿಸಿದರೆ ನನಗೆ ಮತ್ತೆ ಹೊಡೆಯಲು ಬಂದರು" ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಪ್ರೇಮ ವಿವಾಹಕ್ಕೆ ಯುವತಿಯ ಪೋಷಕರಿಂದ ಬೆದರಿಕೆ: ಪೊಲೀಸ್ ಠಾಣೆ ಮೆಟ್ಟಿಲೇರಿದ ನವದಂಪತಿ - Couple Seeks Police Protection