ಬೆಂಗಳೂರು: ಬೆಂಗಳೂರಿನಿಂದ ಕೊಚ್ಚಿಗೆ ತೆರಳುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಇಂಜಿನ್ವೊಂದರಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆ ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್ ಭಾನುವಾರ ತಿಳಿಸಿದೆ.
ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸ್ಥಳಾಂತರಿಸಲಾಗಿದೆ. ಯಾರಿಗೂ ಗಾಯಗಳಾಗಿಲ್ಲ ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ತಿಳಿಸಿದೆ. ಮೂಲಗಳ ಪ್ರಕಾರ, ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಈ ವಿಮಾನದ ಇಂಜಿನ್ವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸಿಬ್ಬಂದಿ ಏರ್ ಟ್ರಾಫಿಕ್ ಕಂಟ್ರೋಲರ್‌ಗೆ ಮಾಹಿತಿ ನೀಡಿ, ತುರ್ತು ಭೂಸ್ಪರ್ಶ ಮಾಡಲಾಯಿತು.
ಇಂಜಿನ್ಗೆ ತಗುಲಿದ್ದ ಬೆಂಕಿ ನಂದಿಸಿದ ಸಿಬ್ಬಂದಿ: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ತುರ್ತು ಭೂಸ್ಪರ್ಶ ಮಾಡಿದ ಕೂಡಲೇ ಇಂಜಿನ್ವೊಂದರಲ್ಲಿ ತಗುಲಿದ್ದ ಬೆಂಕಿಯನ್ನು ನಂದಿಸಲಾಯಿತು. "2024ರ ಮೇ 18ರಂದು, ಇಂಜಿನ್ವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಬೆಂಗಳೂರಿನಿಂದ ಕೊಚ್ಚಿಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ BLR ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಿತು. ಪೂರ್ಣ ಪ್ರಮಾಣದ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಯಿತು. ಲ್ಯಾಂಡಿಂಗ್ ಆದ ತಕ್ಷಣ ಬೆಂಕಿಯನ್ನು ನಂದಿಸಲಾಯಿತು. ಎಲ್ಲಾ 179 ಪ್ರಯಾಣಿಕರು ಮತ್ತು ಆರು ಸಿಬ್ಬಂದಿಯನ್ನು ವಿಮಾನದಿಂದ ಯಶಸ್ವಿಯಾಗಿ ಸ್ಥಳಾಂತರಿಸಲಾಗಿದೆ ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (BIAL) ವಕ್ತಾರರು ತಿಳಿಸಿದ್ದಾರೆ.
ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ- ಏರ್ ಇಂಡಿಯಾ ಭರವಸೆ: ''ವಿಮಾನ ಟೇಕಾಫ್ ಆದ ನಂತರ ಬಲ ಭಾಗದಲ್ಲಿರುವ ಇಂಜಿನ್‌ನಿಂದ ಬೆಂಕಿ ಹೊತ್ತಿಕೊಂಡಿರುವ ಹಿನ್ನೆಲೆ ಬೆಂಗಳೂರು-ಕೊಚ್ಚಿ ವಿಮಾನವನ್ನು ಬೆಂಗಳೂರಿನಲ್ಲಿ ಮುನ್ನೆಚ್ಚರಿಕೆಯಾಗಿ ಲ್ಯಾಂಡಿಂಗ್ ಮಾಡಿದೆ'' ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಕ್ತಾರರು ತಿಳಿಸಿದ್ದಾರೆ.
"ಯಾವುದೇ ಅತಿಥಿಗಳಿಗೆ ಯಾವುದೇ ಗಾಯಗಳಾಗಿಲ್ಲ. ಎಲ್ಲಾ ಪ್ರಯಾಣಿಕರನ್ನು ಸಿಬ್ಬಂದಿ ಸುರಕ್ಷಿತವಾಗಿ ಸ್ಥಳಾಂತರಿಸಲು ಯಶಸ್ವಿಯಾಗಿದ್ದಾರೆ. ಇದರಿಂದ ಉಂಟಾದ ಅನಾನುಕೂಲತೆಗಾಗಿ ನಾವು ವಿಷಾದಿಸುತ್ತೇವೆ. ನಮ್ಮ ಅತಿಥಿಗಳು ತೆರಳಬೇಕಾದ ಸ್ಥಳಕ್ಕೆ ಆದಷ್ಟು ಬೇಗ ತಲುಪಿಸಲು ಪರ್ಯಾಯ ವ್ಯವಸ್ಥೆ ಮಾಡುತ್ತಿದ್ದೇವೆ. ಬೆಂಕಿ ಅವಘಡದ ಕುರಿತು ತನಿಖೆ ನಡೆಸುವುದು" ಎಂದು ಅವರು ಹೇಳಿದ್ದಾರೆ.