ಕಲಬುರಗಿ : ಕಾಂಗ್ರೆಸ್‌ನವರು ಅರ್ಬನ್ ನಕ್ಸಲರು ಎನ್ನುವ ಪ್ರಧಾನಿ ಮೋದಿ ಹೇಳಿಕೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದ್ದಾರೆ. ಮೋದಿ ಈ ರೀತಿ ಮಾತು ಯಾವಾಗಲೂ ಹೇಳ್ತಾನೆ ಇರ್ತಾರೆ. ಈಗಲೂ ಅದನ್ನೇ ಹೇಳಿದ್ದಾರೆ. ಕಾಂಗ್ರೆಸ್ ಬಗ್ಗೆ ಮೋದಿ ಈ ರೀತಿ ಹೇಳಿಕೆ ಹೊಸದೇನಲ್ಲ. ಮೋದಿ ಅವರು ದೇಶದ ಬುದ್ಧಿಜೀವಿಗಳಿಗೆ ಅರ್ಬನ್ ನಕ್ಸಲ್ಸ್ ಅಂತಾರೆ. ಕಾಂಗ್ರೆಸ್ ಪಕ್ಷವನ್ನ ಹೀಯಾಳಿಸುವುದು ಮೋದಿಯವರ ಚಾಳಿಯಾಗಿದೆ ಎಂದಿದ್ದಾರೆ.
ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಾಸ್ತವವಾಗಿ ಬಿಜೆಪಿ ಪಕ್ಷವೇ ಒಂದು ಉಗ್ರಗಾಮಿಗಳ ಪಕ್ಷವಾಗಿದೆ. ದಲಿತ ಮತ್ತು ಹಿಂದುಳಿದವರ ಮೇಲೆ ಇವರೇ ಹಲ್ಲೆ ಮಾಡ್ತಾರೆ. ಬುಡಕಟ್ಟು ಜನಾಂಗದವರ ಮೇಲೆ ಅತ್ಯಾಚಾರ ಮಾಡುತ್ತಾರೆ. ಇಂತಹ ಕೃತ್ಯಗಳನ್ನ ಎಸಗುವವರಿಗೆ ಇವರೇ ಬೆಂಬಲ ನೀಡಿ ಈಗ ಬೇರೆಯವರ ಮೇಲೆ ಆರೋಪ ಮಾಡ್ತಾರೆ ಎಂದರು.
ಬಿಜೆಪಿ ಸರ್ಕಾರ ಇರುವ ರಾಜ್ಯಗಳಲ್ಲಿ ದಲಿತ, ಹಿಂದುಳಿದವರ ಮೇಲೆ ನಿರಂತರವಾಗಿ ಅತ್ಯಾಚಾರ, ದೌರ್ಜನ್ಯಗಳು ನಡೆಯುತ್ತಲೇ ಇವೆ. ಮೋದಿ ಅವರು ಬೇರೆಯವರ ಮೇಲೆ ಆರೋಪ ಮಾಡುವ ಬದಲು ಕೇಂದ್ರದಲ್ಲಿ ನಿಮ್ಮದೇ ಸರ್ಕಾರ ಇದೆ. ನೀವು ಕಂಟ್ರೋಲ್ ಮಾಡೋದು ಬಿಟ್ಟು ನಮ್ಮ ಮೇಲೆ ಆರೋಪ ಮಾಡೋದು ಸರಿನಾ? ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಖರ್ಗೆ ವಾಗ್ದಾಳಿ ನಡೆಸಿದರು.
ಹರಿಯಾಣ ಚುನಾವಣೆ ಸೋಲಿನ ಬಗ್ಗೆ ಮಾತನಾಡಿ, ಹರಿಯಾಣ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತೆ ಅಂತ ಇಡೀ ದೇಶವೇ ಹೇಳ್ತಿತ್ತು. ಟಿವಿ, ಪ್ರಿಂಟ್, ಜನ ಸಮುದಾಯ, ರಾಜಕೀಯ ಮುಖಂಡರು ಎಲ್ಲರ ಅಭಿಪ್ರಾಯ ಕಾಂಗ್ರೆಸ್ ಗೆಲ್ಲುತ್ತೆ ಅಂತಾನೇ ಇತ್ತು. ಅದಾಗ್ಯೂ ಅಲ್ಲಿ ಫಲಿತಾಂಶ ಬೇರೆಯದೇ ರೀತಿ ಬಂದಿದೆ ಎಂದರು.
ರಿಸಲ್ಟ್ ಮಾತ್ರ ಏಕೆ ಹೀಗಾಯ್ತು ಅನ್ನೋದೆ ತಿಳಿಯದಾಗಿದೆ : ಈ ರೀತಿ ಫಲಿತಾಂಶ ಬರಲು ಏನು ಕಾರಣ ಎನ್ನುವುದರ ಬಗ್ಗೆ ವಿಶ್ಲೇಷಣೆ ನಡೆಯುತ್ತಿದೆ. ಬೂತ್ ವೈಸ್ ರಿಪೋರ್ಟ್ ತರಿಸಿಕೊಳ್ಳಲು ಸೂಚಿಸಿದ್ದೇನೆ. ರಿಪೋರ್ಟ್ ಬಂದ ಮೇಲೆ ಆ ಫಲಿತಾಂಶದ ಬಗ್ಗೆ ಸ್ಪಷ್ಟವಾಗಿ ಮಾತನಾಡುವೆ. ಎಲ್ಲವೂ ನಮ್ಮ ಪರವಾಗಿಯೇ ಇದ್ರೂ ರಿಸಲ್ಟ್ ಮಾತ್ರ ಏಕೆ ಹೀಗಾಯ್ತು ಅನ್ನೋದೆ ತಿಳಿಯದಾಗಿದೆ ಎಂದು ಖರ್ಗೆ ಅಚ್ಚರಿ ವ್ಯಕ್ತಪಡಿಸಿದರು.
ಚುನಾವಣೆ ಪ್ರಕ್ರಿಯೆ ಸರಿ ಇದೆ, ಇಲ್ಲ ಎನ್ನುವುದರ ಬಗ್ಗೆ ನಾನೀಗಲೇ ಏನನ್ನೂ ಹೇಳಲ್ಲ. ಬೂತ್ ವೈಸ್ ರಿಪೋರ್ಟ್ ಬಂದ ಮೇಲೆ ಇದರಲ್ಲಿ ನಮ್ಮ ಕಾರ್ಯಕರ್ತರ ತಪ್ಪೇನಾಗಿದೆ, ಇಲ್ಲವೇ ಚುನಾವಣೆಯಲ್ಲಿ ಮತ್ತೇನಾದ್ರೂ ಆಡ್ ಆಗಿದೆಯಾ ಎನ್ನುವ ಬಗ್ಗೆ ನೋಡೋಣ ಎಂದು ಹೇಳಿದರು.
ಇದನ್ನೂ ಓದಿ : 'ಪ್ರಧಾನಿ ಮೋದಿಯವರನ್ನು ಅಧಿಕಾರದಿಂದ ಕೆಳಗಿಳಿಸುವವರೆಗೂ ನಾನು ಸಾಯಲ್ಲ': ಖರ್ಗೆ ಹೇಳಿಕೆ - J K campaigning