ಮೈಸೂರು: ಶಾಲಾ ಮಕ್ಕಳ ರಂಗ ಪ್ರಯೋಗಗಳ ಪ್ರದರ್ಶನ 'ಶಾಲಾರಂಗ ಮಕ್ಕಳ ಹಬ್ಬ' ಡಿ.14 ಹಾಗೂ 15ರಂದು ಇಲ್ಲಿನ ಕಲಾಮಂದಿರದಲ್ಲಿರುವ ಕಿರು ರಂಗಮಂದಿರದಲ್ಲಿ ನಡೆಯಲಿದೆ. ಇದೇ ವೇದಿಕೆಯಲ್ಲಿ 15ರಿಂದ 17ರವರೆಗೆ ನಿರ್ದಿಗಂತ ರಂಗಹಬ್ಬದ ಪ್ರಯುಕ್ತ ಮೂರು ನಾಟಕಗಳು ಜರುಗಲಿವೆ.
ಈ ಕುರಿತು ನಟ ಪ್ರಕಾಶ್ ರಾಜ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ರಂಗಭೂಮಿ ಕಲಾವಿದರೆಲ್ಲಾ ಸೇರಿ ನಿರ್ದಿಗಂತ ಎಂಬ ರಂಗಶಾಲೆ ಆರಂಭಿಸಿದ್ದು, ಇದರಲ್ಲಿ ರಂಗಭೂಮಿ ವಿಚಾರದಲ್ಲಿ ತರಬೇತಿ ಪಡೆದ 20 ಜನರ ತಂಡ ನಿರ್ಧಿಂಗತ ಸಂಸ್ಥೆ ಕಟ್ಟಿದೆ ಎಂದರು.
ಶಾಲಾರಂಗ ವಿಕಾಸ ಎಂಬ ಪ್ರಾಯೋಗಿಕ ಯೋಜನೆಯಲ್ಲಿ 5 ರಂಗ ಕಲಾವಿದರನ್ನು ಆಯ್ಕೆ ಮಾಡಿ, ಅವರಿಗೆ ತರಬೇತಿ ನೀಡಿ 5 ಶಾಲೆಗಳಿಗೆ ಕಳುಹಿಸಲಾಗಿತ್ತು. ಈ ಶಿಕ್ಷಕರು 6 ತಿಂಗಳ ಕಾಲ ಶಾಲೆಗಳಲ್ಲಿ ಶಿಕ್ಷಣ ಮತ್ತು ರಂಗಭೂಮಿಯ ಬಗ್ಗೆ ಕಲಿಸುತ್ತಾ ಪ್ರತಿ ವಾರಾಂತ್ಯ ರಂಗ ಪ್ರದರ್ಶನ, ಬಣ್ಣದ ಹೆಜ್ಜೆ ಶಿಬಿರ, ಕಾವ್ಯಾಂಗ ಮುಂತಾದ ಚಟುವಟಿಕೆಗಳನ್ನು ನಡೆಸಿದ್ದಾರೆ. ಇದರ ಮುಂದುವರೆದ ಭಾಗವಾಗಿ ಶಾಲಾರಂಗ ಮಕ್ಕಳ ಹಬ್ಬ ಆಯೋಜಿಸಲಾಗಿದೆ ಎಂದು ಹೇಳಿದರು.
ನಿರ್ದಿಗಂತ ತಂಡ ಹೊಸ ಹೊಸ ನಾಟಕಗಳ ಮೂಲಕ ರಾಜ್ಯಾದ್ಯಂತ ಈಗಾಗಲೇ ಹಲವಾರು ನಾಟಕಗಳನ್ನು ಪ್ರದರ್ಶನ ಮಾಡಿದೆ. ಇದರ ಜೊತೆಗೆ ಶಾಲಾರಂಗ ಎಂಬ ಯೋಜನೆ ಮೂಲಕ ಹತ್ತು ಜನರ ರಂಗ ತಂಡ 110 ಶಾಲೆಗಳಲ್ಲಿ, 30 ನಿಮಿಷದ 3 ಕಿರು ನಾಟಕಗಳು, ಗೊಂಬೆಯಾಟ, ಅಭಿನಯ, ಕಥಾಭಿನಯ, ಮಕ್ಕಳ ಹಾಡು ಎಲ್ಲವನ್ನೂ ಪರಿಣಾಮಕಾರಿಯಾಗಿ ನಡೆಸಿದೆ ಎಂದು ತಿಳಿಸಿದರು. ಇದೇ ವೇಳೆ, ಮೂರು ದಿನ ನಿರ್ದಿಗಂತ ಹಬ್ಬ ಆಯೋಜಿಸಲಾಗಿದೆ. ಪ್ರತಿದಿನ ಸಂಜೆ 7ಕ್ಕೆ ತಂಡದಿಂದ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಹೇಳಿದರು.
'ಮಕ್ಕಳ ಬಗ್ಗೆ ಮಾತನಾಡಲು ಬಂದಿದ್ದೇನೆ, ಕಳ್ ನನ್‌ಮಕ್ಕಳ ಬಗ್ಗೆ ಅಲ್ಲ': ಇನ್ನು, ಈ ಸಂದರ್ಭದಲ್ಲಿ ಇತರೆ ವಿಚಾರಗಳ ಕುರಿತು ಮಾತನಾಡಲು ನಿರಾಕರಿಸಿದ ಅವರು, ನಾನು ಇಂದಿನ ಪತ್ರಿಕಾಗೋಷ್ಠಿಯಲ್ಲಿ ಮಕ್ಕಳ ಬಗ್ಗೆ ಮಾತನಾಡಲು ಬಂದಿದ್ದೇನೆ. ಕಳ್ ನನ್ ಮಕ್ಕಳ ಬಗ್ಗೆ ಅಲ್ಲ ಎಂದು ಚಟಾಕಿ ಹಾರಿಸಿದರು.
ಇದನ್ನೂ ಓದಿ: ನಟ ಪ್ರಕಾಶ್ ರಾಜ್ ನಿರ್ದಿಗಂತ ಸಂಸ್ಥೆಯಿಂದ 'ಗಾಯಗಳು' ನಾಟಕ ಪ್ರದರ್ಶನ.. - ಪ್ರಕಾಶ್ ರಾಜ್