ಬೆಂಗಳೂರು: ಮನೆಯಿಂದ ಊಟ, ಬಟ್ಟೆ ಮತ್ತು ಹಾಸಿಗೆ ತರಿಸಿಕೊಳ್ಳಲು ಅನುಮತಿ ನೀಡಲು ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ನಟ ದರ್ಶನ್ ತೂಗದೀಪ ಹೊಸದಾಗಿ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧೀಕ್ಷಕರು ಮತ್ತು ಕಾಮಾಕ್ಷಿಪಾಳ್ಯದ ಪೊಲೀಸ್ ಸಬ್ಇನ್ಸ್ಪೆಕ್ಟರ್ ಅವರನ್ನು ಪ್ರತಿವಾದಿಯನ್ನಾಗಿಸಲಾಗಿದೆ. ಈ ಅರ್ಜಿಯು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕ ಸದಸ್ಯ ನ್ಯಾಯಪೀಠದ ಮುಂದೆ ಬುಧವಾರ ವಿಚಾರಣೆಗೆ ನಿಗದಿಯಾಗಿದೆ.
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ಜೂ.22ರಿಂದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಾರೆ. 'ಜೈಲಿನಲ್ಲಿ ನೀಡುತ್ತಿರುವ ಆಹಾರ ಜೀರ್ಣವಾಗುತ್ತಿಲ್ಲ. ಇದರಿಂದ ಅಜೀರ್ಣ, ಅತಿಸಾರ ಭೇದಿ ಸೇರಿ ಇನ್ನಿತರ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಹಾಗಾಗಿ, ಮನೆಯಿಂದ ಊಟ, ಹಾಸಿಗೆ ಮತ್ತು ಬಟ್ಟೆಯನ್ನು ತರಿಸಿಕೊಳ್ಳಲು ಅನುಮತಿ ನೀಡುವಂತೆ ಜೈಲು ಅಧಿಕಾರಿಗಳಿಗೆ ಸೂಚಿಸಬೇಕು' ಎಂದು ಕೋರಿ ಜು.9ರಂದು ಹೈಕೋರ್ಟ್‌ಗೆ ದರ್ಶನ್ ತಕರಾರು ಅರ್ಜಿ ಸಲ್ಲಿಸಿದ್ದರು.
ಈ ಕುರಿತಂತೆ ಮೊದಲು ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಅರ್ಜಿ ಸಲ್ಲಿಸುವಂತೆ ದರ್ಶನ್ ಪರ ವಕೀಲರಿಗೆ ಜು.19ರಂದು ಹೈಕೋರ್ಟ್ ಸೂಚಿಸಿ ವಿಚಾರಣೆ ಮುಂದೂಡಿತ್ತು. ಅದರಂತೆ ಜು.20ರಂದು ಅರ್ಜಿ ಸಲ್ಲಿಸಲಾಗಿತ್ತು. ಅದನ್ನು ವಜಾಗೊಳಿಸಿದ್ದ ಮ್ಯಾಜಿಸ್ಟ್ರೇಟ್ ಕೋರ್ಟ್, ಕೊಲೆ ಆರೋಪ ಹೊತ್ತಿರುವುದರಿಂದ ಮನೆಯಿಂದ ಉಟ ತರಿಸಿಕೊಳ್ಳಲು ದರ್ಶನ್ ಅರ್ಹರಾಗಿಲ್ಲ ಎಂದು ಜು.25ರಂದು ಆದೇಶಿಸಿತ್ತು.
ಈ ಆದೇಶ ಪ್ರಶ್ನಿಸಿ ಹೊಸದಾಗಿ ಅರ್ಜಿ ಸಲ್ಲಿಸುವ ಉದ್ದೇಶದಿಂದ ಮೊದಲಿಗೆ (ಜು.9ರಂದು) ದಾಖಲಿಸಿದ್ದ ತಕರಾರು ಅರ್ಜಿಯನ್ನು ಸೋಮವಾರವಷ್ಟೇ (ಜು.29) ದರ್ಶನ್ ಹಿಂಪಡೆದುಕೊಂಡಿದ್ದರು. ಇದೇ ವಿಚಾರವಾಗಿ ಮಂಗಳವಾರ ಮತ್ತೆ ಹೊಸದಾಗಿ ತಕರಾರು ಅರ್ಜಿ ಸಲ್ಲಿಸಿರುವ ಅವರು, ಮ್ಯಾಜಿಸ್ಟ್ರೇಟ್‌ಕೋರ್ಟ್ ಆದೇಶ ರದ್ದುಪಡಿಸಬೇಕು. ಮನೆಯಿಂದ ಊಟ, ಬಟ್ಟೆ ಮತ್ತು ಹಾಸಿಗೆ ತರಿಸಿಕೊಳ್ಳಲು ತನಗೆ ಅನುಮತಿ ನೀಡುವಂತೆ ಕಾರಾಗೃಹದ ಅಧೀಕ್ಷಕರಿಗೆ ಸೂಚಿಸುವಂತೆ ಹೈಕೋರ್ಟ್‌ಗೆ ಕೋರಿದ್ದಾರೆ.
ಇದನ್ನೂ ಓದಿ: ಮನೆ ಊಟಕ್ಕೆ ಅನುಮತಿ ಕೋರಿದ್ದ ಅರ್ಜಿ ಹಿಂಪಡೆದ ದರ್ಶನ್ - Darshan Withdraws Plea