ಬೆಂಗಳೂರು : ಸಿಸಿಬಿ ದಾಳಿ ಹಿಂದಿನ ದಿನ ರಾತ್ರಿಯೇ ಜೈಲಿನಲ್ಲಿ ಅನುಮಾನಾಸ್ಪದ ವಸ್ತುಗಳನ್ನು ಸಾಗಸಿರುವ ಸಂಬಂಧ ನಾಲ್ವರು ಜೈಲು ಸಿಬ್ಬಂದಿ ವಿರುದ್ಧ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರಾಗೃಹ ಹಾಗೂ ಸುಧಾರಣಾ ಇಲಾಖೆಯ ಉಪಮಹಾನಿರೀಕ್ಷಕ ಸೋಮಶೇಖರ್ ಅವರು ನೀಡಿದ ದೂರಿನ ಮೇರೆಗೆ ಜೈಲು ಸಿಬ್ಬಂದಿ ಸುದರ್ಶನ್, ಪರಮೇಶ್ ನಾಯಕ್, ರಾಯಮನೆ ಹಾಗೂ ಶಿಕ್ಷಾಬಂಧಿ ಮುಜೀಬ್ ಎಂಬುವರ ವಿರುದ್ಧ ಕರ್ನಾಟಕ ಜೈಲು ತಿದ್ದುಪಡಿ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆಯಡಿ (ಬಿಎನ್ಎಸ್) ಸೆಕ್ಷನ್ಗಳನ್ನ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಜೈಲಿನಲ್ಲಿ ಮೊಬೈಲ್ ಹಾಗೂ ಮಾದಕವಸ್ತು ಸೇರಿದಂತೆ ನಿಷೇಧಿತ ವಸ್ತುಗಳ ಬಳಕೆ ಹಿನ್ನೆಲೆ ಸಿಸಿಬಿ ಪೊಲೀಸರು ಆಗಸ್ಟ್ 24 ರಂದು ದಾಳಿ ನಡೆಸಿದ್ದರು. ಇದಕ್ಕೂ ಮುನ್ನ ಸಿಸಿಬಿ ದಾಳಿ ಮಾಹಿತಿ ಸೋರಿಕೆ ಹಿನ್ನೆಲೆಯಲ್ಲಿ ಆ.23 ರ ರಾತ್ರಿ 10.58 ರಿಂದ 11.30ರ ವರೆಗೆ ಆರೋಪಿಗಳು ಕೆಲ ವಸ್ತುಗಳನ್ನು ಸಾಗಿಸುತ್ತಿರುವು ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಅನುಮಾನಾಸ್ಪದ ರೀತಿಯಲ್ಲಿ ಸಾಗಿಸಿರುವ ಬಗ್ಗೆ ಪ್ರಶ್ನಿಸಿದಾಗ ಕಸ ಎಂದು ಸಿಬ್ಬಂದಿ ಸಮಜಾಯಿಷಿ ನೀಡಿದ್ದರು. ಅಲ್ಲದೆ, ಸಿಸಿಬಿ ದಾಳಿ ವೇಳೆ ನಿಷೇಧಿತ ವಸ್ತುಗಳು ಸಿಗದಿರುವುದಕ್ಕೆ ಜೈಲು ಸಿಬ್ಬಂದಿ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಈ ಬಗ್ಗೆ ಪ್ರತ್ಯೇಕ ತನಿಖೆಯನ್ನ ಸಿಸಿಬಿ ನಡೆಸುತ್ತಿದೆ. ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ಎಸಿಪಿ ಮಂಜುನಾಥ್ ಅವರು ಕರ್ತವ್ಯ ಲೋಪವೆಸಗಿದ ಜೈಲು ಸಿಬ್ಬಂದಿ ವಿರುದ್ಧ ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ಮೊದಲ ಆರೋಪಿ ದರ್ಶನ್ : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಆರೋಪಿ ದರ್ಶನ್ ಅವರನ್ನು ಮೊದಲ ಆರೋಪಿಯನ್ನಾಗಿ ಮಾಡಲು ಕಾಮಾಕ್ಷಿಪಾಳ್ಯ ಪೊಲೀಸರು ಚಿಂತನೆ ನಡೆಸಿದ್ದಾರೆ. ಜೈಲಿನಲ್ಲಿ ಸಿಗರೇಟು ಸೇರಿದಂತೆ ಜೈಲಿನ ನಿಯಾಮವಳಿ ಉಲ್ಲಂಘನೆ ಮಾಡಿರುವ ಸಂಬಂಧ ದಾಖಲಾದ ಎರಡನೇ ಪ್ರಕರಣದಲ್ಲಿ ದರ್ಶನ್ನನ್ನು ಮೊದಲ ಆರೋಪಿಯಾಗಿ ಮಾಡಲಾಗಿದೆ. ದರ್ಶನ್ ಜೊತೆ ಈತನ ಮ್ಯಾನೇಜರ್ ನಾಗರಾಜ್, ನಟೋರಿಯಸ್ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ಹಾಗೂ ಶಿಕ್ಷಾಬಂಧಿ ಕುಳ್ಳ ಶ್ರೀನಿವಾಸ್ ವಿರುದ್ಧ ಕಾರಾಗೃಹಗಳ ಕೈಪಿಡಿ-2021ರಡಿ ಪ್ರಕರಣ ದಾಖಲಾಗಿದ್ದು, ಬೇಗೂರು ಠಾಣೆ ಇನ್ಸ್ಪೆಕ್ಟರ್ ಕೃಷ್ಣಕುಮಾರ್ ತನಿಖೆ ನಡೆಸುತ್ತಿದ್ದಾರೆ.
ರೌಡಿ ಪುತ್ರನನ್ನು ವಶಕ್ಕೆ ಪಡೆದ ಖಾಕಿ: ಇನ್ನು ಜೈಲಿನಲ್ಲಿರುವಾಗಲೇ ಮೊಬೈಲ್ ಬಳಸಿ ವಿಡಿಯೋ ಕರೆ ಸಂಬಂಧ ಜೈಲಿನಲ್ಲಿರುವ ದರ್ಶನ್, ರೌಡಿ ಧರ್ಮ ಹಾಗೂ ಜಾಮೀನಿನ ಮೇರೆಗೆ ಹೊರಗಿರುವ ಸತ್ಯ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪ್ರಕರಣದ ತನಿಖೆಯನ್ನು ಹುಳಿಮಾವು ಠಾಣೆ ಇನ್ಸ್ಪೆಕ್ಟರ್ ಕುಮಾರಸ್ವಾಮಿ ಅವರು ಚುರುಕುಗೊಳಿಸಿದ್ದಾರೆ. ಈ ಪ್ರಕರಣದಲ್ಲಿಯೂ ದರ್ಶನ್ ಮೊದಲ ಆರೋಪಿಯಾಗಿದ್ದಾರೆ. ಈಗಾಗಲೇ ರೌಡಿಪುತ್ರ ಸತ್ಯನನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಎರಡ್ಮೂರು ದಿನಗಳಲ್ಲಿ ನಟ ದರ್ಶನ್ ಬೇರೆ ಜೈಲಿಗೆ ಸ್ಥಳಾಂತರ: ಸಚಿವ ಜಿ. ಪರಮೇಶ್ವರ್ - Minister G Parameshwar