ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದ ಹಿನ್ನೆಲೆ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಹೀಗಾಗಿ ಭಾನುವಾರ ರಾಯಚೂರು ಜಿಲ್ಲೆಯ ಲಿಂಗಸಗೂರಿನ ಅಭಿಮಾನಿಗಳು ತಮ್ಮ ನಟನನ್ನ ಭೇಟಿಯಾಗಲು ಜೈಲಿನ ಬಳಿಗೆ ಆಗಮಿಸಿದ್ದರು.
''ನಮ್ಮ ಬಾಸ್ ಕೆಟ್ಟದ್ದು ಮಾಡಿರಬಹುದು, ಆದ್ರೆ ಸಾಕಷ್ಟು ಸಮಾಜ ಸೇವೆ ಮಾಡಿದ್ದಾರೆ. ಆದ್ರೂ ಮಾಧ್ಯಮಗಳಲ್ಲಿ ಕೆಟ್ಟದಾಗಿ ತೋರಿಸಲಾಗುತ್ತಿದೆ. ನಟ ದರ್ಶನ್ರಂತೆ ಅವ್ರ ಅಭಿಮಾನಿಗಳು ಕೆಟ್ಟವರು ಅಂತಾರೆ. ನಾವು ರಾಯಚೂರಿನಿಂದ ಬಾಸ್ ನೋಡಲು ಆಗಮಿಸಿದ್ದೇವೆ. ಹಾಗಾದ್ರೆ ನಾವು ಕೆಟ್ಟವರಾ?'' ಎಂದು ಪ್ರಶ್ನಿಸಿದ್ದಾರೆ.
ಈ ಬಗ್ಗೆ ನಟ ದರ್ಶನ್ ಅಭಿಮಾನಿ ಮಂಜು ಎನ್ನುವವರು ಮಾತನಾಡಿ, ''ನಾವು ನಟ ದರ್ಶನ್ ಅವರ ಸಿನಿಮಾ ನೋಡುತ್ತಿದ್ದೆವು. ಅವರು ಬಡವರಿಗೆ ಹೇಗೆ ಸಹಾಯ ಮಾಡುತ್ತಿದ್ದರೋ ಹಾಗೆ ನಮ್ಮ ಕೈಯಲ್ಲಾದ ಮಟ್ಟಿಗೆ ಹೆಲ್ಪ್ ಮಾಡುತ್ತೇವೆ. ಅನಾಥಾಶ್ರಮಗಳಿಗೆ ಹೋಗಿ ಒಂದು ಕೆಜಿ ಅಕ್ಕಿ, ಎಣ್ಣೆಯನ್ನು ನೀಡಿದ್ದೇವೆ. ನಾವು ಇದನ್ನು ಎಲ್ಲಿಯೂ ತೋರಿಸಿಲ್ಲ. ಸಂಘ ನಮಗೆ ಬೇಡ. ನಮ್ ಬಾಸ್ ಒಳ್ಳೆಯದು ಮಾಡ್ತಾರೆ, ನಾವು ಒಳ್ಳೆಯದು ಮಾಡ್ತೀವಿ'' ಎಂದರು.
''ಈಗ ನಮ್ಮ ಬಾಸ್ ತಪ್ಪು ಮಾಡಿದ್ದಾರೆ. ಅವರ ಹುಡುಗರು ತಪ್ಪು ಮಾಡಿದ್ದಾರೆ. ಆದರೆ ಇದು ನಮಗೆ ಗೊತ್ತಿಲ್ಲ. ಏಕೆಂದರೆ ನಾವು ಅಲ್ಲಿ ಇರಲಿಲ್ಲ. ಇಂದು ರಜೆ ಇರುವುದರಿಂದ ಬಾಸ್ ಭೇಟಿಗೆ ಅವಕಾಶ ನೀಡುತ್ತಿಲ್ಲ. ನಾವು ನಾಳೆ ಭೇಟಿ ಮಾಡಿಯೇ ವಾಪಸ್ ಹೋಗುತ್ತೇವೆ'' ಎಂದು ತಿಳಿಸಿದರು.
ಇನ್ನೊಬ್ಬ ಅಭಿಮಾನಿ ಮಾತನಾಡಿ, ''ನಾನು 16 ವರ್ಷದಿಂದ ಡಿ ಬಾಸ್ ಅವರ ಅಭಿಮಾನಿ. ಅವರ ಎಲ್ಲ ಸಿನಿಮಾವನ್ನು ಬಿಡಲಾರದೆ ನೋಡಿಕೊಂಡು ಬಂದಿದ್ದೇನೆ ಎಂದರು. ಕೊಲೆ ಪ್ರಕರಣದ ಕುರಿತು ಮಾತನಾಡಿದ ಅವರು, ಈ ಬಗ್ಗೆ ನಾವು ಏನೂ ಹೇಳಲು ಬರಲ್ಲ. ತನಿಖೆಯಾಗುತ್ತಿದೆ. ಅವರದು ತಪ್ಪಾ? ಇವರದ್ದು ತಪ್ಪಾ? ಎಂಬುದರ ಕುರಿತು ತನಿಖೆ ಮಾಡುತ್ತಾರೆ. ಒಂದಕ್ಕೊಂದು ಪಿನ್ ಟು ಪಿನ್ ತೆಗೆಯುತ್ತಾರೆ'' ಎಂದರು.
ಇದನ್ನೂ ಓದಿ : ರೇಣುಕಾಸ್ವಾಮಿ ಕೊಲೆ ಪ್ರಕರಣ: ಈವರೆಗಿನ ಪ್ರಮುಖ ಬೆಳವಣಿಗೆಗಳು - Renukaswamy Murder Case