ಮೈಸೂರು: "ಮೈಸೂರಿನಲ್ಲಿ ಬೆಳೆದ ಪ್ರತಿಯೊಬ್ಬರಿಗೂ, ಮೈಸೂರು ಒಂದು ಎಮೋಷನಲ್. ನನ್ನ ತಾಯಿಯ ನಂಬಿಕೆಯನ್ನು ಉಳಿಸಿಕೊಂಡಿದ್ದೇನೆ. ನನಗೆ ಜೀವನ ಕಟ್ಟಿಕೊಟ್ಟ ಮೈಸೂರಿನಲ್ಲೇ ಮದುವೆಯಾಗಿದ್ದಕ್ಕೆ ಬಹಳ ಖುಷಿಯಾಗಿದೆ. ಮೈಸೂರಿನ ಸ್ನೇಹಿತರೆಲ್ಲರೂ ಬಂದು ಶುಭ ಹಾರೈಸಿದಕ್ಕೆ ಡಬಲ್ ಖುಷಿಯಾಗಿದೆ" ಎಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ಡಾಲಿ ಧನಂಜಯ್ ಹೇಳಿದರು.
ಮೈಸೂರು ವಸ್ತು ಪ್ರದರ್ಶನ ಮೈದಾನದಲ್ಲಿ ಮದುವೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಮೊದಲಿಗೆ ಎಲ್ಲಾರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ. ಮದುವೆ ಸಂಭ್ರಮ ಚೆನ್ನಾಗಿ ನಡೆದಿದೆ. ಯಾವುದಾದರೂ ಸಣ್ಣ ಪುಟ್ಟ ತೊಂದರೆಗಳು ಆಗಿದ್ದರೆ ಕ್ಷಮೆ ಇರಲಿ. ವಿದ್ಯಾಪತಿ ದ್ವಾರದಿಂದ ಅಭಿಮಾನಿಗಳು ಬಂದು ಆಶೀರ್ವಾದ ಮಾಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದೆ. ನಮ್ಮ ಮನೆಯವರು ಖುಷಿಯಾಗಿದ್ದಾರೆ. ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲೇ ಮದುವೆಗೆ ಬಂದಿದ್ದಾರೆ. ತುಂಬಾ ಸಮಯ ನಮಗಾಗಿ ಕಾದಿದ್ದಾರೆ. ಅಭಿಮಾನಿಗಳ ಪ್ರೀತಿ ದೊಡ್ಡದು" ಎಂದರು.
"ಅಭಿಮಾನಿಗಳಿಗೆ ಸಾಕಷ್ಟು ಗೌರವ ಕೊಡಬೇಕು. ನಾವು ನಿಗದಿಪಡಿಸಿದ ಸ್ಥಳದಲ್ಲಿ ಅವರನ್ನು ನೋಡಿ ಬಹಳ ಖುಷಿಯಾಯಿತು. ಚಿತ್ರರಂಗದ ಗೆಳೆಯರಿಗೂ ಧನ್ಯವಾದಗಳು. ಮದುವೆಯಿಂದ ನನಗೆ ಸಾಕಷ್ಟು ಜವಾಬ್ದಾರಿ ಹೆಚ್ಚಾಗಿದೆ. ಅಭಿಮಾನಿಗಳ ಮೇಲೆ ಗೌರವ ಇನ್ನೂ ಹೆಚ್ಚಿದೆ. ಈ ಜವಾಬ್ದಾರಿ ನಿಭಾಯಿಸಲೇಬೇಕು ಎಂದು ಕೆಲಸ ಮಾಡಬೇಕು. ತಾಳಿ ಕಟ್ಟುವಾಗ ಭಯವಾಗಲಿಲ್ಲ. ಅಪ್ಪ-ಅಮ್ಮ ಬಹಳ ಖುಷಿಯಾಗಿದ್ದಾರೆ. ಶಿವಣ್ಣ ಪ್ರೀತಿ ದೊಡ್ಡದು. ಅವರು ಬಂದು ನಮಗೆ ಶಕ್ತಿ ತುಂಬಿ ಹೋಗಿದ್ದಾರೆ" ಎಂದು ಹೇಳಿದರು.
![ಧನಂಜಯ್ - ಧನ್ಯತಾ ಮದುವೆ](https://etvbharatimages.akamaized.net/etvbharat/prod-images/16-02-2025/23555325_thumbnai3.jpg)
"ಆಸ್ತಿಕತೆ - ನಾಸ್ತಿಕತೆ ನನ್ನ ಬಾಲ್ಯದ ದಿನಗಳಿಂದಲೂ ನೋಡಿದ್ದೇನೆ. ನಮ್ಮೂರ ಜಾತ್ರೆಯಲ್ಲಿ ಭಾಗಿಯಾಗಿದ್ದೇನೆ. ಇದೆಲ್ಲವೂ ನಮ್ಮೂರಲ್ಲಿ ನಡೆಯುತ್ತಿರುವ ಜಾತ್ರೆಯ ಬಗ್ಗೆ ತಿಳಿಸುತ್ತದೆ. ವಿಜ್ಞಾನವು ಬೇಕು, ನಂಬಿಕೆಯೂ ಬೇಕು. ನನ್ನ ಹೆಂಡತಿ ವಿಜ್ಞಾನದಲ್ಲಿದ್ದಾರೆ. ನಮ್ಮ ತಾಯಿ ಆಸ್ಪತ್ರೆಗೆ ಒಳ ಹೋಗುವ ಮುನ್ನ ದೇವರಿಗೆ ಕೈ ಮುಗಿಯುತ್ತಾರೆ. ಅದನ್ನು ನಾನು ಗೌರವಿಸಬೇಕು. ನಾನು ಒಬ್ಬ ಕಲಾವಿದ, ಎಲ್ಲಾದರ ಅನುಭವ ನನಗೆ ಬೇಕು. ಹೀಗಾಗಿ ಪ್ರಶ್ನೆ ಮಾಡುವವರು ಕೂಡಾ ಇರಬೇಕು. ಮದುವೆ ಸಮಯದಲ್ಲಿ ಮಾಡಿದ ಎಲ್ಲಾ ಸಂಪ್ರದಾಯಗಳನ್ನು ನಾನು ಮಗುವಿನಂತೆ ಸಂಭ್ರಮಿಸಿದ್ದೇನೆ. ನನ್ನ ತಾಯಿಯ ನಂಬಿಕೆಯನ್ನು ನಾನು ಗೌರವಿಸಬೇಕು. ಮದುವೆ ಬಳಿಕ ಸ್ವಲ್ಪ ವಿರಾಮ ಇದ್ದೇ ಇರುತ್ತದೆ. ನಂತರ ಅವರವರು ಅವರ ವೃತ್ತಿ ಮಾಡ್ತಾರೆ. ನಾನು ಚಿತ್ರರಂಗದಲ್ಲಿ ಭಾಗಿಯಾಗುತ್ತೇನೆ" ಎಂದು ತಿಳಿಸಿದರು.
![ಧನಂಜಯ್ - ಧನ್ಯತಾ ಮದುವೆ](https://etvbharatimages.akamaized.net/etvbharat/prod-images/16-02-2025/23555325_thumbnai4.jpg)
ಧನ್ಯತಾ ಮಾತನಾಡಿ, "ಅಭಿಮಾನಿಗಳ ಪ್ರೀತಿ ಕಂಡು ಮಾತೇ ಹೊರಡುತ್ತಿಲ್ಲ. ಅವರ ಪ್ರೀತಿಯನ್ನು ನೋಡಿ ನಾನು ತುಂಬಾ ಭಾವುಕಳಾದೆ. ನಮ್ಮಲ್ಲಿ ಯಾವುದೇ ಬದಲಾವಣೆ ಇಲ್ಲ. ನಮ್ಮ ಕುಟುಂಬ, ಅವರ ಕುಟುಂಬ ಎರಡೂ ಒಂದೇ. ಇಬ್ಬರು ತುಂಬಾ ಅನ್ಯೋನ್ಯತೆಯಿಂದ ಇರುತ್ತೇವೆ. ಎಲ್ಲವೂ ಚೆನ್ನಾಗಿ ಆಗಿದೆ" ಎಂದು ಹೇಳಿದರು.
![ಧನಂಜಯ್ - ಧನ್ಯತಾ ಮದುವೆ](https://etvbharatimages.akamaized.net/etvbharat/prod-images/16-02-2025/23555325_thumbn1.jpg)
ಇದನ್ನೂ ಓದಿ: ಧನ್ಯತಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ಡಾಲಿ ಧನಂಜಯ್
ಇದನ್ನೂ ಓದಿ: ನಟ ಡಾಲಿ ಧನಂಜಯ್ - ಧನ್ಯತಾ ಆರತಕ್ಷತೆ : ನವಜೋಡಿಗೆ ಶುಭ ಹಾರೈಸಿದ ಗಣ್ಯರು