ಬೆಂಗಳೂರು : ಹಣಕಾಸಿನ ವಿಚಾರಕ್ಕಾಗಿ ವ್ಯಕ್ತಿಯನ್ನ ಚಾಕುವಿನಿಂದ ಹತ್ಯೆ ಮಾಡಿರುವ ಘಟನೆ ಶ್ರೀರಾಮಪುರ ಪೊಲೀಸ್ ಠಾಣಾ ವ್ಯಾಪ್ತಿಯ ಸಾಯಿಬಾಬಾ ನಗರದ ಗಲ್ಲಿಯೊಂದರಲ್ಲಿ ನಡೆದಿದೆ.
ಕುಮಾರ್ (39) ಕೊಲೆಯಾದ ದುದೈರ್ವಿ. ಇಂದು ಬೆಳಗ್ಗೆ ಸುಮಾರು 2.30ರ ವೇಳೆಗೆ ಹತ್ಯೆಯಾಗಿದ್ದು, ಈ ಸಂಬಂಧ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ನೇಹಿತ ದಯಾಳ್ನನ್ನ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಶ್ರೀರಾಮಪುರದಲ್ಲಿ ಕುಟುಂಬದ ಜೊತೆ ನೆಲೆಸಿದ್ದ ಕುಮಾರ್, ಹೋಟೆಲ್ ನಡೆಸುತ್ತಿದ್ದ. ಇದೇ ಏರಿಯಾದ ನಿವಾಸಿಯಾಗಿದ್ದ ದಯಾಳ್, ಫೈನಾನ್ಸ್ ಬಿಸಿನೆಸ್ ಮಾಡುತ್ತಿದ್ದ.
ಕಳೆದ 10 ವರ್ಷಗಳಿಂದ ಇಬ್ಬರು ಸ್ನೇಹಿತರಾಗಿದ್ದರು. ದೊಡ್ಡಮಟ್ಟದಲ್ಲಿ ಹೋಟೆಲ್ ಮಾಡಬೇಕು, ಜೊತೆಗೆ ಮನೆ ಕಟ್ಟಿಸಬೇಕು ಎಂದಿಕೊಂಡಿದ್ದ ಕುಮಾರ್, ಸ್ನೇಹಿತನ ಬಳಿ ಹಂತ - ಹಂತವಾಗಿ ಸುಮಾರು 50 ಲಕ್ಷದವರೆಗೆ ಸಾಲ ಪಡೆದುಕೊಂಡಿದ್ದರಂತೆ. ಆದರೆ, ಹೋಟೆಲ್ ಬಿಸಿನೆಸ್ ನಷ್ಟವಾಗಿದ್ದರಿಂದ ಸಾಲ ಹಿಂತಿರುಗಿಸುವುದಕ್ಕೆ ಕುಮಾರ್ಗೆ ಸಾಧ್ಯವಾಗಿರಲಿಲ್ಲ. ಫೈನಾನ್ಸ್ ವ್ಯವಹಾರ ಮಾಡುತ್ತಿದ್ದ ದಯಾಳ್ಗೂ ಆರ್ಥಿಕ ಸಂಕಷ್ಟ ಎದುರಾಗಿತ್ತು. ಆಗಾಗ ಹಣಕಾಸಿನ ವಿಚಾರಕ್ಕಾಗಿ ಇಬ್ಬರ ಮಧ್ಯೆ ವಾಗ್ವಾದ ನಡೆಯುತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಆರ್ಥಿಕ ಸಂಕಷ್ಟದಿಂದ ಬೇಸತ್ತಿದ್ದ ದಯಾಳ್, ನಿನ್ನೆ ಸಂಜೆ ಮನೆಗೆ ಬಂದು ಹೊರಗೆ ಊಟ ಮಾಡೋಣ ಬಾ ಎಂದು ಕುಮಾರ್ನನ್ನ ಕರೆದೊಯ್ದಿದ್ದಾರೆ. ರಾತ್ರಿವರೆಗೂ ಇಬ್ಬರು ಮದ್ಯ ಸೇವಿಸಿ ಪಾರ್ಟಿ ಮಾಡಿದ್ದರು. ಬಳಿಕ ಹಣದ ವಿಚಾರಕ್ಕಾಗಿ ಮತ್ತೆ ಜಗಳವಾಗಿತ್ತು. ಈ ವೇಳೆ ಚಾಕುವಿನಿಂದ ಕುಮಾರ್ನನ್ನ ಇರಿದು ಹತ್ಯೆ ಮಾಡಲಾಗಿದೆ. ಸದ್ಯ ದಯಾಳ್ನನ್ನ ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.
ಈ ಬಗ್ಗೆ ನಗರ ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್ ಪ್ರತಿಕ್ರಿಯಿಸಿದ್ದು, ''ಕುಮಾರ್ನನ್ನ ಹತ್ಯೆ ಮಾಡಿರುವ ಆರೋಪದಡಿ ಒಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ. ಹಣಕಾಸಿನ ವಿಚಾರಕ್ಕಾಗಿ ಕೊಲೆಯಾಗಿರುವುದಾಗಿ ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ. ಸದ್ಯ ಮೃತನ ಪತ್ನಿ ನೀಡಿದ ದೂರಿನ ಮೇರೆಗೆ ಹತ್ಯೆ ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಲಾಗಿದೆ'' ಎಂದಿದ್ದಾರೆ.
ಇದನ್ನೂ ಓದಿ : ಏರಿಯಾದಲ್ಲಿ ಪ್ರಾಬಲ್ಯ ಸಾಧಿಸಲು ಕಂಡ ಕಂಡವರ ಮೇಲೆ ಹಲ್ಲೆ ಮಾಡುತ್ತಿದ್ದವನ ಕೊಲೆ: ನಾಲ್ವರು ಆರೋಪಿಗಳು ಅಂದರ್ - MURDER CASE