ಬೆಂಗಳೂರು: ಕದ್ದ ಬೈಕ್ ರೈಡ್ ಮಾಡಲು ಕೊಡಲಿಲ್ಲವೆಂದು ಸ್ನೇಹಿತನಿಗೆ ಚಾಕು ಇರಿದಿದ್ದ ಆರೋಪಿಯನ್ನ ಶಿವಾಜಿನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಸೈಯ್ಯದ್ ನಜೀಂ ಎಂಬಾತನಿಗೆ ಚಾಕು ಇರಿದಿದ್ದ ಸಾಧಿಕ್ ಎಂಬಾತನನ್ನ ಬಂಧಿಸಲಾಗಿದೆ. ಜುಲೈ 21ರಂದು ರಾತ್ರಿ ದಾಸರಹಳ್ಳಿ ಬಳಿ ಸೈಯ್ಯದ್ ನಜೀಂಗೆ ಆರೋಪಿ ಚಾಕು ಇರಿದಿದ್ದ.
ಆರೋಪಿ ಸಾಧಿಕ್ ಹಾಗೂ ಸೈಯ್ಯದ್ ನಜೀಂಗೆ ಈ ಹಿಂದೆ ರಾಮನಗರ ಜೈಲಿನಲ್ಲಿದ್ದಾಗ ಪರಿಚಯವಾಗಿತ್ತು. ಸೈಯದ್ ನಜೀಂಗೆ ಜಾಮೀನು ಪಡೆದುಕೊಳ್ಳಲು ಆರೋಪಿ ಸಾಧಿಕ್ ಸಹಾಯ ಕೂಡಾ ಮಾಡಿದ್ದ. ಜೈಲಿನಿಂದ ಹೊರಬಂದ ಬಳಿಕ ಸಹ ಒಟ್ಟಿಗೆ ಓಡಾಡಿಕೊಂಡಿದ್ದ ಇಬ್ಬರೂ ಜುಲೈ 21ರಂದು ಶಿವಾಜಿನಗರದ ಎಕೆಪಿ ಪಂಕ್ಷನ್ ಹಾಲ್ ಬಳಿಯಿರುವ ಆರೋಪಿಯ ಅಕ್ಕನ ಮನೆಗೆ ಹೋಗಿದ್ದರು. ಅದೇ ದಿನ ರಾತ್ರಿ ಸೈಯ್ಯದ್ ನಜೀಂ, ಆರೋಪಿ ಸಾಧಿಕ್ ಹಾಗೂ ಆತನ ಅಕ್ಕನ ಮಗ ವಾಪಸ್ ಬರುವಾಗ ಗೋರಿಪಾಳ್ಯ ಬಳಿ ಒಂದು ಹೊಸ ಹಾಗೂ ಮತ್ತೊಂದು ಹಳೆಯ ಪಲ್ಸರ್ ಬೈಕ್ ಕದ್ದಿದ್ದರು. ಈ ಪೈಕಿ ಹೊಸ ಬೈಕ್ ರೈಡ್ ಮಾಡುತ್ತಿದ್ದ ಸೈಯ್ಯದ್ ನಜೀಂ ಬಳಿ, 'ತನಗೆ ಬೈಕ್ ರೈಡ್ ಮಾಡಲು ಕೊಡು' ಎಂದು ಸಾಧಿಕ್ ಕೇಳಿದ್ದ. ಬೈಕ್ ನೀಡಲು ನಿರಾಕರಿಸಿದ್ದ ನಜೀಂ ವೇಗವಾಗಿ ರೈಡ್ ಮಾಡಿಕೊಂಡು ಹೋಗಿದ್ದ. ಆತನನ್ನ ಹಿಂಬಾಲಿಸಿಕೊಂಡು ಬಂದಿದ್ದ ಸಾಧಿಕ್, ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದ. ಈ ವೇಳೆ ಆತನ ಸಹಾಯಕ್ಕೆ ಸೈಯ್ಯದ್ ನಜೀಂ ಮುಂದಾದಾಗ ಏಕಾಏಕಿ ಚಾಕುವಿನಿಂದ ಹೊಟ್ಟೆಗೆ ಇರಿದಿದ್ದ.
ಗಾಯಗೊಂಡಿದ್ದ ನಜೀಂ ಕೆಂಗೇರಿಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ನಂತರ ಬೌರಿಂಗ್ ಆಸ್ಪತ್ರೆಗೆ ದಾಖಲಾಗಿದ್ದ. ಬಳಿಕ ನಜೀಂ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಶಿವಾಜಿನಗರ ಠಾಣಾ ಪೊಲೀಸರು ಆರೋಪಿ ಸಾಧಿಕ್ ನನ್ನ ಬಂಧಿಸಿದ್ದಾರೆ.
ಇದನ್ನೂ ಓದಿ: ಉತ್ತರಾಖಂಡದಲ್ಲಿ ಮಳೆ ಅಬ್ಬರ: ಕೇದಾರನಾಥದಲ್ಲಿ 700ಕ್ಕೂ ಹೆಚ್ಚು ಯಾತ್ರಾರ್ಥಿಗಳ ಸ್ಥಳಾಂತರ - Heavy rain in Uttarakhand