ಬೆಂಗಳೂರು : ವಿವಾಹವಾಗಿ ಮಗುವಾದ ಬಳಿಕ ಪ್ರತ್ಯೇಕ ವಾಸಿಸುತ್ತಿದ್ದು, ವಿಚ್ಛೇದನಕ್ಕೆ ಸಮ್ಮತಿ ಸೂಚಿಸಲು ಪತಿಯಿಂದ ನಿವೇಶನವೊಂದನ್ನು ದಾನವನ್ನಾಗಿ ಪಡೆದು ನ್ಯಾಯಾಲಯಕ್ಕೆ ಹಾಜರಾಗದ ಮಹಿಳೆಗೆ ಹೈಕೋರ್ಟ್, ಪತಿಯಿಂದ ಶಾಶ್ವತ ದೂರವಾಗುವಂತೆ ವಿಚ್ಛೇದನ ಮಂಜೂರು ಮಾಡಿದೆ.
ಬೆಂಗಳೂರಿನ ನಿವಾಸಿ ಕುಮಾರ್ ಎಂಬುವರು (ಹೆಸರು ಬದಲಿಸಲಾಗಿದೆ) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನು ಸಿವರಾಮನ್ ಅವರ ನೇತೃತ್ವದ ವಿಭಾಗೀಯ ಪೀಠ, ವಿಚ್ಛೇದನ ಮಂಜೂರು ಮಾಡಿ ಆದೇಶ ಹೊರಡಿಸಿದೆ.
ಪ್ರಕರಣದಲ್ಲಿ ದಂಪತಿ ಸಮ್ಮತಿಯಿಂದಲೇ ಹಿಂದೂ ವಿವಾಹ ಕಾಯ್ದೆ ಸೆಕ್ಷನ್ 13ರ (ದಂಪತಿಯ ಒಮ್ಮತದ ಒಪ್ಪಿಗೆಯಿಂದ) ಅಡಿಯಲ್ಲಿ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ರೀತಿಯಲ್ಲಿ ಸಮ್ಮತಿಯಿಂದ ಅರ್ಜಿ ಸಲ್ಲಿಸಿದ ಬಳಿಕ ಮೋಸ, ವಂಚನೆ, ಬಲವಂತದಿಂದ ಮತ್ತು ತಪ್ಪು ವಿವರಣೆ ನೀಡುವ ಕಾರಣಗಳನ್ನು ಹೊರುತುಪಡಿಸಿ ಇತರೆ ಯಾವುದೇ ಕಾರಣಕ್ಕೂ ಅರ್ಜಿ ಹಿಂಪಡೆಯಲು ಅವಕಾಶವಿಲ್ಲ.
ಆದರೆ, ಸಮ್ಮತಿಯಿಂದ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪತಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಸಂಬಂಧ ವಿಚಾರಣೆಗೆ ಆಕ್ಷೇಪಣೆ ಸಲ್ಲಿಸುವಂತೆ ಹಲವು ಬಾರಿ ನೋಟಿಸ್ ಜಾರಿ ಮಾಡಿದರೂ, ಹಾಜರಾಗಿರಲಿಲ್ಲ. ಅಲ್ಲದೆ, ಪತ್ರಿಕಾ ಪ್ರಕಟಣೆ ಹೊರಡಿಸಿದ್ದರೂ, ಯಾವುದೇ ಫಲ ನೀಡಿರಲಿಲ್ಲ. ಹೀಗಾಗಿ ಅರ್ಜಿದಾರರ ವಾದಕ್ಕೆ ಆಕ್ಷೇಪಣೆ ಸಲ್ಲಿಸದ ಹಿನ್ನೆಲೆಯಲ್ಲಿ ವಿಚ್ಛೇದನಕ್ಕೆ ಪ್ರತಿವಾದಿ ಪತ್ನಿಯ ಸಮ್ಮತಿಯಿದೆ ಎಂಬುದಾಗಿ ನ್ಯಾಯಪೀಠ ಪರಿಗಣಿಸಿದೆ.
ಈ ಹಿಂದೆ ವಿಚ್ಛೇದನಕ್ಕೆ ನೀಡಿರುವ ಸಮ್ಮತಿಯನ್ನು ಸೂಕ್ತ ಕಾರಣ ನೀಡದೆ ಪರೋಕ್ಷವಾಗಿ ಹಿಂಪಡೆದುಕೊಂಡಿದ್ದಾರೆ. ವಿಚ್ಛೇದನಕ್ಕೆ ಸಮ್ಮತಿಸಿದ ಬಳಿಕ ನ್ಯಾಯಾಲಯದ ಆದೇಶ ಉಲ್ಲಂಘಿಸಿ, ಪತಿಯಿಂದ ಒಪ್ಪಂದಂತೆ ದಾನ ಪತ್ರದ ಮೂಲಕ ಪಡೆದ ನಿವೇಶನವನ್ನು ಮಾರಾಟ ಮಾಡಿದ್ದಾರೆ. ಹೀಗಾಗಿ ಪತಿಯನ್ನು ಅಸಹಾಯಕ ಸ್ಥಿತಿಯಲ್ಲಿ ಇರಿಸುವುದಕ್ಕೆ ಸಾಧ್ಯವಿಲ್ಲ. ಅಲ್ಲದೆ, ಪತ್ನಿಗೆ ಇಷ್ಟ ಬಂದ ರೀತಿಯಲ್ಲಿ ವರ್ತಿಸುವುದು ಮತ್ತು ನ್ಯಾಯಾಲಯದಿಂದ ದೂರವಿದ್ದಲ್ಲಿ ಮೇಲ್ಮನವಿದಾರರ ಹಕ್ಕುಗಳನ್ನು ನಿರಾಸೆಗೊಳಿಸುವುದಕ್ಕೆ ಅವಕಾಶ ನೀಡಿದಂತಾಗಲಿದೆ. ಹೀಗಾಗಿ ವಿಚ್ಛೇದನ ಮಂಜೂರು ಮಾಡುತ್ತಿರುವುದಾಗಿ ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಪ್ರಕರಣದ ಹಿನ್ನೆಲೆ : ದಂಪತಿಗೆ 2005ರಲ್ಲಿ ಬೆಂಗಳೂರಿನಲ್ಲಿ ಶಾಸ್ತ್ರೋಕ್ತವಾಗಿ ವಿವಾಹವಾಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದು, ಪ್ರಸ್ತುತ 13 ವರ್ಷದವರಾಗಿದ್ದಾರೆ. ವೈವಾಹಿಕ ಸಂಬಂಧ ಪ್ರಾರಂಭದಲ್ಲಿ ಸುಂದವಾಗಿತ್ತಾದರೂ, ಬಳಿಕ ವಿವಾದಕ್ಕೆ ಕಾರಣವಾಗಿತ್ತು. 2010ರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು.
ಈ ನಡುವೆ ಪತಿ ವಿವಾಹ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿತ್ತು. ಆ ಆದೇಶ ಪ್ರಶ್ನಿಸಿ ಪತಿ ಹೈಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಇದಾದ ಬಳಿಕ ದಂಪತಿ ಒಮ್ಮತದಿಂದ ವಿಚ್ಛೇದನ ಕೋರಿ ಜಂಟಿ ಮೆಮೋ ಸಲ್ಲಿಸಿದ್ದರು.
ಒಮ್ಮತದ ವಿಚ್ಛೇದನಕ್ಕಾಗಿ ಯಲಹಂಕ ಬಳಿ ಪತಿ ಹೆಸರಿನಲ್ಲಿರುವ ಒಂದು ನಿವೇಶನವನ್ನು ಪತ್ನಿ ಹೆಸರಿಗೆ ದಾನ ನೀಡುತ್ತಿರುವುದಾಗಿ ಬರೆದುಕೊಡಬೇಕು. ಪತ್ನಿ ಸಲ್ಲಿಸಿರುವ ಆಸ್ತಿ ವಿಭಜನೆ ಸಂಬಂಧ ಸಲ್ಲಿಸಿರುವ ಅರ್ಜಿ ಹಿಂಪಡೆಯಬೇಕು. ಜತೆಗೆ, ಪತ್ನಿ ಜೀವನಾಂಶಕ್ಕಾಗಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆಯಬೇಕು ಎಂಬುದಾಗಿ ಒಪ್ಪಂದ ಮಾಡಿಕೊಳ್ಳಲಾಗಿತ್ತು.
ಆದರೆ, ನಿವೇಶನವನ್ನು ತನ್ನ ಹೆಸರಿಗೆ ಪಡೆದ ಪತ್ನಿ, ಕೌಟುಂಬಿಕ ನ್ಯಾಯಾಲಯದಲ್ಲಿ ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 13ರ ಅಡಿ(ಜಂಟಿ ಒಪ್ಪಂದದಲ್ಲಿ) ವಿಚ್ಛೇದನ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಗೈರು ಹಾಜರಿಯಾಗುವ ಮೂಲಕ ಪರೋಕ್ಷವಾಗಿ ಸಮ್ಮತಿಯನ್ನು ಸೂಚಿಸಿದ್ದರು. ಈ ಅರ್ಜಿ ವಿಚಾರಣಾ ಹಂತದಲ್ಲಿರುವಾಗ ಈ ನಡುವೆ ದಾನವಾಗಿ ಪಡೆದಿದ್ದ ನಿವೇಶನವನ್ನು ಮತ್ತೊಬ್ಬರಿಗೆ ಮಾರಾಟ ಮಾಡುವುದಕ್ಕೆ ಪತ್ನಿ ಮುಂದಾಗಿದ್ದರು. ಅಲ್ಲದೆ, ದಾನವಾಗಿ ನೀಡಿದ್ದ ನಿವೇಶನವನ್ನು ಮೂರನೇ ವ್ಯಕ್ತಿಗೆ ಮಾರಾಟ ಮಾಡದಂತೆ ಪತಿ ನಿರ್ಬಂಧಕಾಜ್ಞೆ ಆದೇಶವನ್ನು ಪಡೆದುಕೊಂಡಿದ್ದರೂ, ಆದರೂ ಪತ್ನಿ ನಿವೇಶನವನ್ನು ಮಾರಾಟ ಮಾಡಿದ್ದರು.
ಪತ್ನಿ ವಿಚಾರಣೆಗೆ ಗೈರಾದ ಹಿನ್ನೆಲೆಯಲ್ಲಿ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಕೌಟುಂಬಿಕ ನ್ಯಾಯಾಲಯ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಪತಿ ಹೈಕೋರ್ಟ್ ಮೊರೆಹೋಗಿದ್ದರು.
ಇದನ್ನೂ ಓದಿ: ಪತ್ನಿ ಪರ್ದಾ ಧರಿಸಿಲ್ಲ ಎಂಬುದು ವಿಚ್ಛೇದನಕ್ಕೆ ನೀಡುವ ಕಾರಣವಲ್ಲ: ಹೈಕೋರ್ಟ್ - GHUNGHAT IS NOT GROUND FOR DIVORCE