ಮೈಸೂರು: ಎಂಟು ವರ್ಷ ವಯಸ್ಸು ಇದ್ದಾಗ ಭಾರತದಿಂದ ಸ್ವೀಡನ್‌ಗೆ ತೆರಳಿದ ಯುವತಿಯೊಬ್ಬರು ಮತ್ತೆ ತನ್ನ ಕುಟುಂಬದ ಮೂಲವನ್ನು ಹುಡುಕಿಕೊಂಡು ಜಿಲ್ಲೆಗೆ ಬಂದಿದ್ದಾರೆ. ತಮ್ಮ ಕುಟುಂಬಸ್ಥರನ್ನು ಹುಡುಕುವುದಕ್ಕೆ ಯಾರಾದರೂ ನೆರವಾಗಬೇಕೆಂದು ಮನವಿ ಮಾಡಿದ್ದಾರೆ.
ಈ ಕುರಿತು ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ವಕೀಲೆ ಅಂಜಲಿ ಪವಾರ್ ಮಾತನಾಡಿ, ಜಾಲಿ ಸ್ಯಾಂಡ್ ಬರ್ಗ್ (ನೆನಪಿರುವಂತೆ ಮೂಲ ಹೆಸರು ಜಾನು) ಎಂಬ ಯುವತಿ ಎಂಟು ವರ್ಷದ ಬಾಲಕಿಯಾಗಿದ್ದಾಗ 1989ರಲ್ಲಿ ಬೆಂಗಳೂರಿನ ಆಶ್ರಯ ಚಿಲ್ಡ್ರನ್ ಹೋಂ ಎಂಬ ಸಂಸ್ಥೆ ಸೇರಿದ್ದರು. ಬಳಿಕ ಸ್ವೀಡನ್‌ನ ಕುಟುಂಬವೊಂದು ಆಕೆಯನ್ನು ದತ್ತು ಪಡೆದುಕೊಂಡಿತ್ತು. ನಂತರ ಅಲ್ಲಿಯೇ ಬೆಳೆದು ದೊಡ್ಡವರಾದ ಯುವತಿ, ಈಗ ತನ್ನ ಮೂಲ ಕುಟುಂಬದ ಹುಡುಕಾಟದಲ್ಲಿದ್ದಾರೆ ಎಂದರು.
ಜಾಲಿ ಸ್ಯಾಂಡ್‌ಬರ್ಗ್‌ಗೆ ತಮ್ಮ ಮೂಲವನ್ನು ಹುಡುಕುವ ಹಂಬಲ ಹೆಚ್ಚಾಗಿ ಅಗೇನ್ಸ್ಟ್ ಚೈಲ್ಡ್ ಟ್ರಾಕಿಂಗ್ ಸಂಸ್ಥೆಯನ್ನು 2017ರಲ್ಲಿ ಸಂಪರ್ಕಿಸಿದ್ದರು. ನಂತರ ಅವರಿಂದ ಕೆಲವು ಮಾಹಿತಿ ಪಡೆದುಕೊಂಡ ತಂಡ ಅವರ ಕುಟುಂಬದ ಮೂಲ ಹುಡುಕಲು ಹೊರಟಿತು. ಜಾಲಿ ಸ್ಯಾಂಡ್‌ಬರ್ಗ್ ಮೂಲತಃ ಮೈಸೂರು ಜಿಲ್ಲೆಯ ಯಾವುದೋ ಒಂದು ಕುಟುಂಬದಲ್ಲಿ 1985ರಲ್ಲಿ ಜನಿಸಿದ್ದಾರೆ. ಅವರ ತಾಯಿ ಮಂಡ್ಯ ಬಳಿಯ ಮದ್ದೂರಿನವರು ಎಂಬುದು ತಿಳಿದು ಬಂದಿದೆ.
ಅವರು ಈ ಹಿಂದೆ ಮೈಸೂರಿನ ಒಬ್ಬರನ್ನು ವಿವಾಹವಾಗಿದ್ದರು. ತಮ್ಮ ತಂದೆ ನಿಧನರಾದ ನಂತರ ತಾಯಿ ಎರಡನೇ ಮದುವೆಯಾಗಿದ್ದರು. ಈ ನಡುವೆ ತಾಯಿಯೂ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾರೆ. ಅದಕ್ಕೂ ಕಾರಣ ತಿಳಿದು ಬಂದಿಲ್ಲ. ಆದರೆ, ಅವರ ಮರಣೋತ್ತರ ಪರೀಕ್ಷೆ ಮಾಡಿರುವ ಬಗ್ಗೆ ಮಾಹಿತಿ ದೊರೆತಿದೆ.
ನಂತರ ಸ್ಯಾಂಡ್‌ಬರ್ಗ್‌ನ ಅಜ್ಜಿ ಪರಿಚಿತರಾದ ಜಯಮ್ಮ ಎಂಬುವವರಿಗೆ ಇವರನ್ನು ನೀಡಿದ್ದಾರೆ. ಆಕೆ ಬೆಂಗಳೂರಿನ ಮೇರಿ ಕಾನ್ವೆಂಟ್‌ಗೆ ಕರೆ ತಂದಾಗ ಅಲ್ಲಿಂದ ಆಶ್ರಯ ಚಿಲ್ಡ್ರನ್ ಹೋಂಗೆ ಸ್ಥಳಾಂತರಿಸಲಾಯಿತು ಎಂಬ ಮಾಹಿತಿ ದೊರೆತಿದೆ. ಹೀಗೆ ಮದ್ದೂರಿನ ಮೂಲವನ್ನು ಹುಡುಕಿ ಹೊರಟಾಗ ತನ್ನ ಮದ್ದೂರಿನ ಪ್ರೌಢಶಾಲೆ ಪಕ್ಕದ ಮನೆಯಲ್ಲಿದ್ದ ಜಯಮ್ಮ ಎಂಬುವವರು ಸಂಸ್ಥೆಗೆ ನೀಡಿದ್ದರು ಎಂಬುದಾಗಿ ತಿಳಿದು ಬಂದಿದೆ.
ಸಂಸ್ಥೆಗೆ ತನ್ನನ್ನು ನೀಡಿದವರು ಯಾರು? ಎಂಬುದನ್ನು ತಿಳಿಯಲು ಹೋದರೆ ಆಕೆ ಈ ಹಿಂದೆಯೇ ನಿಧನರಾಗಿದ್ದಾರೆ ಎಂಬುದು ತಿಳಿದುಬಂದಿದೆ. ಈಗ ಅವರ ಮೂಲವನ್ನು ಹಿಡಿದು ಹೊರಟಾಗ ಯಾರೂ ಸಹ ಬದುಕಿಲ್ಲ. ಹೀಗಿದ್ದರೂ ತನಗೆ ಸಹೋದರರು, ಸಹೋದರಿಯರು ಇರಬಹುದು. ಹೀಗಾಗಿ ಅವರ ಹುಡುಕಾಟದಲ್ಲಿರುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸ್ಯಾಂಡ್‌ಬರ್ಗ್ ಮತ್ತು ಅವರ ಪತಿ ಎಡಿನ್ ಸಹ ಇದ್ದರು.
ಇದನ್ನೂ ಓದಿ : 15 ವರ್ಷದಿಂದ ನಾಪತ್ತೆ: ಮಗನ ಕನವರಿಕೆಯಲ್ಲೇ ದಿನ ಕಳೆಯುತ್ತಿರುವ ತಂದೆ