ಬೆಂಗಳೂರು: ಕುಡಿದ ಮತ್ತಿನಲ್ಲಿ ಆಟೋ ಡ್ರೈವರ್ ಜೊತೆ ಯುವತಿಯೊಬ್ಬಳು ಕಿರಿಕ್ ತೆಗೆದ ಘಟನೆ ನಗರದಲ್ಲಿ ನಡೆದಿದೆ. ಯುವತಿ ಮದ್ಯದ ಅಮಲಿನಲ್ಲಿ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿದ್ದಾಳೆ. ಈ ಬಗ್ಗೆ ಪ್ರಶ್ನೆ ಮಾಡಿದ ಆಟೋ ಡ್ರೈವರ್‌ಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆ ಮಾಡಿದ್ದಾಳೆ. ಘಟನೆ ಸಂಬಂಧ ಆಟೋ ಡ್ರೈವರ್ ನಿಶಾಂತ್ ನೀಡಿದ ದೂರಿನ ಮೇರೆಗೆ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆಗೊಳಗಾದ ನಿಶಾಂತ್ ಎಂಬುವರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ಘಟನೆ?: ಆಟೋ ಚಾಲಕನಾಗಿರುವ ನಿಶಾಂತ್ ನಿನ್ನೆ ರಾತ್ರಿ ಬಾಣಸವಾಡಿ ರೈಲ್ವೆ ನಿಲ್ದಾಣದಿಂದ ಪ್ರಯಾಣಿಕರನ್ನ ಹತ್ತಿಸಿಕೊಂಡು ಹೆಚ್ಎಂಟಿ ಬಳಿ ಬರುವಾಗ, ಮುಂದೆ ಹೋಗುತ್ತಿದ್ದ ಕಾರು ವೇಗವಾಗಿ ಚಾಲನೆ ಮಾಡುತ್ತಿದ್ದರಿಂದ ಹಾರ್ನ್ ಮಾಡಿ ಜಾಗರೂಕವಾಗಿ ವಾಹನ ಚಾಲನೆ ಮಾಡಿ ಎಂದಿದ್ದಕ್ಕೆ ಕಾರಿನಲ್ಲಿದ್ದ ಯುವತಿ ಕೊಪಕೊಂಡು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಬಳಿಕ ಆಟೋ ಅಡ್ಡಗಟ್ಟಿ ನಡುರಸ್ತೆಯಲ್ಲಿಯೇ ಹಲ್ಲೆ ಮಾಡಿದ್ದಾಳೆ ಎಂದು ನಿಶಾಂತ್ ದೂರಿನಲ್ಲಿ ತಿಳಿಸಿದ್ದಾರೆ. ಯುವತಿ ಹಲ್ಲೆ ಮಾಡಿರುವ ದೃಶ್ಯ ಸ್ಥಳೀಯರೊಬ್ಬರ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಟ್ರಾಫಿಕ್ ಕಾನ್ಸ್ಟೇಬಲ್ಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿದ್ದ ಬೈಕ್ ಸವಾರ ಅರೆಸ್ಟ್ - Bike Rider Arrested
ಮಹಿಳೆ ಮೇಲೆ ಬಿಎಂಟಿಸಿ ಕಂಡಕ್ಟರ್ನಿಂದ ಹಲ್ಲೆ ಆರೋಪ (ಬೆಂಗಳೂರು): ಬಿಎಂಟಿಸಿ ಬಸ್ನಲ್ಲಿ ಟಿಕೆಟ್ ಕೇಳಿದ್ದಕ್ಕೆ ಮಹಿಳೆ ಮೇಲೆ ಹಲ್ಲೆ ಮಾಡಿರುವ ಆರೋಪ ಕಂಡಕ್ಟರ್ ವಿರುದ್ಧ ಕೇಳಿ ಬಂದಿತ್ತು. ನಿನ್ನೆ ಬೆಳಗ್ಗೆ ಸಿದ್ದಾಪುರ ಠಾಣಾ ವ್ಯಾಪ್ತಿಯ ಡೈರಿ ಸರ್ಕಲ್ ಬಳಿ ಈ ಘಟನೆ ನಡೆದಿತ್ತು. ಘಟನೆಯ ಎಲ್ಲಾ ದೃಶ್ಯಗಳು ಸಹ ಪ್ರಯಾಣಿಕರೊಬ್ಬರ ಮೊಬೈಲ್ನಲ್ಲಿ ಸೆರೆಯಾಗಿದ್ದವು. ಹಲ್ಲೆಗೊಳಗಾದ ತಂಜುಲಾ ದೂರಿನನ್ವಯ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 354- ಮಹಿಳೆಯ ಮೇಲೆ ಹಲ್ಲೆ, 323- ಉದ್ದೇಶಪೂರ್ವಕ ಹಲ್ಲೆ, 506- ಕ್ರಿಮಿನಲ್ ಉದ್ದೇಶದಿಂದ ಅಪರಾಧ, 509- ಮಹಿಳೆಯ ಘನತೆಗೆ ಅವಮಾನಕರ ರೀತಿ ನಡೆದುಕೊಳ್ಳುವ ಆರೋಪದಡಿ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಎಂಟಿಸಿ ಕಂಡಕ್ಟರ್ ಹೊನ್ನಪ್ಪರನ್ನ ಸಿದ್ದಾಪುರ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದರು.
ಬಿಳೆಕಹಳ್ಳಿಯಲ್ಲಿ ಬಸ್ ಹತ್ತಿದ್ದ ದೂರುದಾರ ಮಹಿಳೆಗೆ ಟಿಕೆಟ್ ನೀಡಲು ಆಧಾರ್ ಕಾರ್ಡ್ ತೋರಿಸುವಂತೆ ಹೊನ್ನಪ್ಪ ಕೇಳಿದ್ದರು. ಆದರೆ ಮುಂದಿನ ಎರಡು ನಿಲ್ದಾಣಗಳು ಬಂದರೂ ಸಹ ಮಹಿಳೆ ತನ್ನ ಆಧಾರ್ ಕಾರ್ಡ್ ತೋರಿಸಿರಲಿಲ್ಲ. ಟಿಕೆಟ್ ಕ್ರಿಯೇಟಿಂಗ್ ಸ್ಟೇಜ್ ಮುಕ್ತಾಯ ಆಗುತ್ತದೆ, ಬೇಗ ಆಧಾರ್ ಕಾರ್ಡ್ ತೋರಿಸಿ ಅಥವಾ ಹಣ ಕೊಟ್ಟು ಟಿಕೆಟ್ ಖರೀದಿಸಿ ಎಂದು ಹೊನ್ನಪ್ಪ ಹೇಳಿದ್ದರು. ಇದರಿಂದ ಕೊಪಕೊಂಡ ಮಹಿಳೆ ಕಂಡಕ್ಟರ್ಗೆ ಕಪಾಳಮೋಕ್ಷ ಮಾಡಿದ್ದಾರೆ. ಇದರಿಂದ ರೊಚ್ಚಿಗೆದ್ದ ಕಂಡಕ್ಟರ್ ಹೊನ್ನಪ್ಪ ಮಹಿಳೆ ಮೇಲೆ ಹಲ್ಲೆ ಮಾಡಿದ್ದರು ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿತ್ತು.