ಬೆಂಗಳೂರು: ಡ್ಯಾನ್ಸ್ ಮಾಡುವಾಗ ಮೈ ಟಚ್ ಆದ ವಿಚಾರವಾಗಿ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತಡರಾತ್ರಿ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಯೋಗೇಶ್ (23) ಕೊಲೆಯಾದ ಯುವಕ. ಪ್ರಕರಣದ ಸಂಬಂಧ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಏನಿದು ಘಟನೆ?: ಯೋಗೇಶ್ ಬೈಕ್ ಸರ್ವಿಸ್ ಸೆಂಟರ್‌ನಲ್ಲಿ ವಾಷಿಂಗ್ ಕೆಲಸ ಮಾಡುತ್ತಿದ್ದ. ನಿನ್ನೆ ಹನುಮಂತನಗರ ವ್ಯಾಪ್ತಿಯ ದೇವಸ್ಥಾನವೊಂದರ ಕಾರ್ಯಕ್ರಮದಲ್ಲಿ ನೃತ್ಯ ಮಾಡುವಾಗ ಮೈ ಟಚ್ ಆಗಿದ್ದಕ್ಕೆ ಯೋಗೇಶ್ ಮತ್ತು ಕೆಲ ಯುವಕರ ನಡುವೆ ಗಲಾಟೆಯಾಗಿತ್ತು. ಬಳಿಕ ಸ್ಥಳೀಯರು ಮಧ್ಯಸ್ಥಿಕೆ ವಹಿಸಿ ಗಲಾಟೆ ಬಿಡಿಸಿ ಕಳುಹಿಸಿದ್ದರು. ಆದರೆ, ಕಾರ್ಯಕ್ರಮ ಮುಗಿದ ನಂತರ ಯೋಗೇಶ್‌ನನ್ನು ನಾಲ್ವರು ಹಿಂಬಾಲಿಸಿಕೊಂಡು ಬಂದು ಚಾಕು ಇರಿದಿದ್ದರು. ಅವರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಮನೆಯೊಂದರ ಕಾಂಪೌಂಡ್ ಹಾರಿದ್ದ ಯೋಗೇಶ್ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದ.
ಆರಂಭದಲ್ಲಿ ಗೋಡೆ ಹಾರುವಾಗ ಗೋಡೆಗೆ ಮೇಲಿನ ಗಾಜಿನ ಚುರು ಚುಚ್ಚಿ ಯೋಗೇಶ್ ಮೃತಪಟ್ಟಿರಬಹುದು ಎಂದು ಸ್ಥಳೀಯರು ಅಂದಾಜಿಸಿದ್ದರು. ಆದರೆ, ಪೊಲೀಸರು ತನಿಖೆ ನಡೆಸಿದಾಗ ಇದು ಆಕಸ್ಮಿಕ ಸಾವಲ್ಲ. ಬದಲಿಗೆ ಹತ್ಯೆ ಎಂಬ ಅಂಶ ಬೆಳೆಕಿಗೆ ಬಂದಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಬ್ಯಾಟರಾಯನಪುರ ಪೊಲೀಸರು ತನಿಖೆ ಆರಂಭಿಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಕೊಲೆಗೆ ಹಳೆ ದ್ವೇಷದ ಹಿನ್ನೆಲೆ ಕಂಡು ಬಂದಿಲ್ಲ, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್. ಗಿರೀಶ್ ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರೀತಿ ವಿಚಾರಕ್ಕೆ ಯುವಕನ ಕೊಲೆ ಪ್ರಕರಣ; ನಾಲ್ವರ ಬಂಧನ
ರೌಡಿಶೀಟರ್ ಬರ್ಬರ ಹತ್ಯೆ(ಬೆಂಗಳೂರು): ಮತ್ತೊಂದೆಡೆ, ಶಿವರಾತ್ರಿ ಹಬ್ಬದ ದಿನವೇ ರೌಡಿಶೀಟರ್ ಒಬ್ಬನನ್ನು ಮಾರಕಾಸ್ತ್ರಗಳಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಡರಾತ್ರಿ ಕಾಟನ್ ಪೇಟೆ ಠಾಣಾ ವ್ಯಾಪ್ತಿಯ ಆಂಜನಪ್ಪ ಗಾರ್ಡನ್‌ನಲ್ಲಿ ನಡೆದಿದೆ. ಶಿವ ಕೊಲೆಯಾದ ರೌಡಿಶೀಟರ್ ಎಂದು ತಿಳಿದುಬಂದಿದೆ. ಕಾಟನ್ಪೇಟೆ ಪೊಲೀಸ್ ಠಾಣೆಯ ರೌಡಿ ಆಗಿರುವ ಶಿವ ಇತ್ತೀಚೆಗೆ ಸ್ಥಳೀಯ ವ್ಯಾಪಾರಿಗಳ ಮೇಲೆ ನಿಯಂತ್ರಣ ಸಾಧಿಸಲು ಯತ್ನಿಸುತ್ತಿದ್ದ ಎನ್ನಲಾಗಿದೆ.
ತಡರಾತ್ರಿ ಏಕಾಏಕಿ ಶಿವನ ಮೇಲೆ ಮುಗಿಬಿದ್ದ ಹಂತಕರ ತಂಡ, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದೆ. ಶಿವನ ಎದುರಾಳಿ ಬಣದವರಿಂದ ಕೃತ್ಯ ನಡೆದಿದೆ ಎಂದು ಶಂಕಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಕಾಟನ್ ಪೇಟೆ ಠಾಣೆಯ ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿರುವುದಾಗಿ ತಿಳಿಸಿದ್ದಾರೆ. ಶ್ವಾನ ದಳದವರೂ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.