ಗಂಗಾವತಿ (ಕೊಪ್ಪಳ): ತಾಲೂಕಿನ ಚಿಕ್ಕರಾಂಪೂರ ಗ್ರಾಮದ ಅಂಜನಾದ್ರಿ ಬೆಟ್ಟದ ದರ್ಶನಕ್ಕೆ ಬಂದಿದ್ದ ಉತ್ತರ ಭಾರತ ಮಹಿಳಾ ಯಾತ್ರಿಕರೊಬ್ಬರು ನೆಲದಿಂದ 503 ಮೆಟ್ಟಿಲು ಮೇಲಿರುವ ಬೆಟ್ಟದ ಮೇಲೆ ಅಸ್ವಸ್ಥರಾಗಿದ್ದರಿಂದ ಅವರನ್ನು ಡೋಲಿ ಮೂಲಕ ಸಾಗಿಸಿ ಚಿಕಿತ್ಸೆ ನೀಡಿರುವ ಘಟನೆ ನಡೆದಿದೆ.
ರಾಜಸ್ಥಾನದ ಜೋಧಪುರದಿಂದ ಅಂಜನಾದ್ರಿಯ ವೀಕ್ಷಣೆಗೆ ಸುಮಿತ್ರಾನಂದ ಕೃಷ್ಣ ಎಂಬ 55 ವರ್ಷ ವಯಸ್ಸಿನ ಮಹಿಳೆ ಬಂದಿದ್ದರು. ನೆಲದಿಂದ ಸುಮಾರು ಐನ್ನೂರು ಅಡಿ ಎತ್ತರ ಇರುವ ಬೆಟ್ಟ ಹತ್ತಿದ್ದಾರೆ. ಬಳಿಕ ಇದ್ದಕ್ಕಿದ್ದಂತೆ ಸುಮಿತ್ರಾ ಅವರ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡು, ಬೆಟ್ಟದಲ್ಲಿಯೇ ಕುಸಿದು ಬಿದ್ದಿದ್ದಾರೆ . ಮಹಿಳೆ ಮೊದಲೇ ಸಕ್ಕರೆ ಕಾಯಿಲೆ ಮತ್ತು ರಕ್ತದ ಒತ್ತಡದಿಂದ ಬಳಲುತಿದ್ದರು. ಮಾಹಿತಿ ತಿಳಿಯುತ್ತಿದ್ದಂತೆಯೆ ದೇವಸ್ಥಾನದ ಸಿಬ್ಬಂದಿ ಅಸ್ವಸ್ಥ ಮಹಿಳೆಯ ನೆರವಿಗೆ ಬಂದಿದೆ.
ತಕ್ಷಣ ಡೋಲಿ ಮಾದರಿಯ ಸಾಧನದಲ್ಲಿ ಸುಮಿತ್ರಾ ಅವರನ್ನು ಬೆಟ್ಟದಿಂದ ಹೊತ್ತು ತಂದ ಪ್ರವಾಸಿ ಮಿತ್ರ ಹಾಗೂ ದೇಗುಲದ ಸಿಬ್ಬಂದಿ, ಬಳಿಕ ಆ್ಯಂಬುಲೆನ್ಸ್ ಮೂಲಕ ಆನೆಗೊಂದಿ ಗ್ರಾಮದ ಪ್ರಾಥಮಿಕ ಆಸ್ಪತ್ರೆಗೆ ದಾಖಲಿಸಿದರು. ಪ್ರಾಥಮಿಕ ಚಿಕಿತ್ಸೆ ಕೊಟ್ಟ ವೈದ್ಯರು ಸಕ್ಕರೆ ಪ್ರಮಾಣ ಮತ್ತು ರಕ್ತದೊತ್ತಡ ಸಾಮಾನ್ಯ ಸ್ಥಿತಿಗೆ ತಲುಪಿದ ಬಳಿಕ ಆಸ್ಪತ್ರೆಯಿಂದ ಬಿಡುಗಡೆ ಮಾಡಿದರು.
ಅಂಜನಾದ್ರಿ ಬೆಟ್ಟವನ್ನು ಉಪವಾಸದಿಂದ ಹತ್ತಿ ಪವನಸುತನ ದರ್ಶನ ಮಾಡಬೇಕು ಎಂಬ ಹರಕೆ ಸುಮಿತ್ರಾ ಹೊಂದಿದ್ದರು. ಆದರೆ ದೇಹದಲ್ಲಿ ಸಕ್ಕರೆ ಅಂಶ ಕುಸಿದು ರಕ್ತದೊತ್ತಡ ಅಧಿಕವಾಗಿದ್ದರಿಂದ ಸಮಸ್ಯೆಯಾಗಿತ್ತು ಎಂದು ಸಹ ಯಾತ್ರಾರ್ಥಿ ಪವನ್ ತಿಳಿಸಿದ್ದಾರೆ.
ಇದನ್ನೂ ಓದಿ: ಭದ್ರಾವತಿ ರೈಸ್ ಮಿಲ್ನಲ್ಲಿ ಬಾಯ್ಲರ್ ಸ್ಫೋಟ: 7 ಮಂದಿಗೆ ಗಾಯ