ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ಉಪೇಂದ್ರ ನಿರ್ದೇಶಿಸಿ, ನಟಿಸಿರುವ ಬಹುನಿರೀಕ್ಷಿತ ಚಿತ್ರ 'ಯುಐ' ಡಿಸೆಂಬರ್ 20, ಇಂದು ಪ್ರಪಂಚದಾದ್ಯಂತ 2,000ಕ್ಕೂ ಅಧಿಕ ಸ್ಕ್ರೀನ್ಗಳಲ್ಲಿ ಬಿಡುಗಡೆ ಆಗಿದೆ. ಉಪ್ಪಿ ಹವಾ ಶುರುವಾಗಿದ್ದು, ಸಿನಿಮಾ ವೀಕ್ಷಿಸಿದವರ ತಲೆಗೆ ಕೆಲಸ ಸಿಕ್ಕಿದೆ.
ಒಂಬತ್ತು ವರ್ಷಗಳ ನಂತರ ಬುದ್ಧಿವಂತ ನಿರ್ದೇಶಕ ಆ್ಯಕ್ಷನ್ ಕಟ್ ಹೇಳಿರುವ ಸಿನಿಮಾ ಕನ್ನಡ ಸೇರಿ ಐದು ಭಾಷೆಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಪೋಸ್ಟರ್ಸ್, ಹಾಡು, ಟೀಸರ್, ಗ್ಲಿಂಪ್ಸ್ ಮೂಲಕ ಕುತೂಹಲ ಮೂಡಿಸಿರುವ ಈ ಚಿತ್ರವನ್ನು ನೋಡಲು ಕೋಟ್ಯಂತರ ಸಿನಿಪ್ರಿಯರು ಹಾಗೂ ಉಪ್ಪಿ ಫ್ಯಾನ್ಸ್ ಬಹಳ ಕಾತುರರಾಗಿದ್ದರು. ಫೈನಲಿ ಇಂದು ಮುಂಜಾನೆ ಸಿನಿಮಾ ಬಿಡುಗಡೆ ಆಗಿದೆ. ಕಳೆದ ರಾತ್ರಿಯಿಂದಲೇ ಅಭಿಮಾನಿಗಳ ಸಂಭ್ರಮಾಚರಣೆ ಜೋರಾಗಿದೆ. ಚಿತ್ರಮಂದಿರಗಳ ಬಳಿ ಅಭಿಮಾನಿಗಳು ಪಟಾಕಿ ಸಿಡಿಸಿ, ಕುಣಿದು ಕುಪ್ಪಳಿಸಿದ್ದು, ಫೋಟೋ ವಿಡಿಯೋಗಳು ವ್ಯಾಪಕವಾಗಿ ವೈರಲ್ ಆಗಿದೆ.
ಕರುನಾಡ ಚಕ್ರವರ್ತಿ ಖ್ಯಾತಿಯ ಶಿವರಾಜ್ಕುಮಾರ್ ಚಿಕಿತ್ಸೆ ಹಿನ್ನೆಲೆ ಇತ್ತೀಚೆಗಷ್ಟೇ ಅಮೆರಿಕಕ್ಕೆ ತೆರಳಿದ್ದಾರೆ. ಅವರ ಆರೋಗ್ಯ ಚೇತರಿಕೆಗಾಗಿ ಅಭಿಮಾನಿಗಳು ಪೂಜೆ ಸಲ್ಲಿಸಿದ್ದಾರೆ. ಶಿವರಾಜ್ಕುಮಾರ್, ಉಪೇಂದ್ರ, ಯುಐ ಪೋಸ್ಟರ್ ಇಟ್ಟು ಪೂಜೆ ನಡೆಸಲಾಗಿದೆ. ಒಂಬತ್ತು ವರ್ಷಗಳ ನಂತರ ಬಂದಿರುವ ಉಪೇಂದ್ರ ನಿರ್ದೇಶನದ ಸಿನಿಮಾ ಆದ ಹಿನ್ನೆಲೆ ಅಭಿಮಾನಿಗಳು ಚಿತ್ರದ ಯಶಸ್ಸಿಗೆ ಪೂಜೆ ಕೈಗೊಳ್ಳುತ್ತಿದ್ದಾರೆ. ಇದೆಲ್ಲವನ್ನೂ ನೋಡುತ್ತಿದ್ರೆ ಅಭಿಮಾನಿಗಳು ತಮ್ಮ ಮೆಚ್ಚಿನ ನಟರ ಮೇಲಿಟ್ಟಿರುವ ಅಭಿಮಾ, ಪ್ರೀತಿ, ಗೌರವ ಎಂಥದ್ದು ಎಂದು ತಿಳಿಯುತ್ತದೆ.
ಉಪೇಂದ್ರ ಅವರು ಆ್ಯಕ್ಷನ್ ಕಟ್ ಹೇಳಿರುವ ಕೊನೆ ಸಿನಿಮಾ 'ಉಪ್ಪಿ 2' 2015ರ ಆಗಸ್ಟ್ 14ರಂದು ಬಿಡುಗಡೆ ಆಗಿ ಯಶಸ್ವಿಯಾಗಿತ್ತು. 9 ವರ್ಷಗಳ ಅಂತರದ ನಂತರ ಉಪ್ಪಿ ನಿರ್ದೇಶನದ ಸಿನಿಮಾವಿಂದು ಪರದೆ ಮೇಲೆ ರಾರಾಜಿಸುತ್ತಿದೆ. ಬುದ್ಧಿವಂತ ಎಂದೇ ಕರೆಸಿಕೊಳ್ಳುವ ಉಪ್ಪಿ ಆ್ಯಕ್ಷನ್ ಕಟ್ ಹೇಳಿದ್ದಾರೆ ಅಂದ್ರೆ ವೀಕ್ಷಕರ ತಲೆಗೆ ಕೆಲಸ ಸಿಗಬೇಕಲ್ವೇ. ಅದರಂತೆ ಇಂದು ಬಿಡುಗಡೆ ಆಗಿರುವ ಯುಐ ಕೂಡಾ ಸಿನಿಪ್ರಿಯರ ತಲೆಗೆ ಕೆಲಸ ಕೊಟ್ಟಿದೆ. ಸಿನಿಮಾ ಅರ್ಥ ಆಗದೇ ತಲೆ ಮೇಲೆ ಕೈ ಇಟ್ಟು ಕುಳಿತವರ ಸಂಖ್ಯೆ ಕೂಡಾ ಹೆಚ್ಚಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸೂಪರ್, ಉಪೇಂದ್ರ, ಎ, ಆಪರೇಷನ್ ಅಂತ, ಓಂ, ಶ್ ಸಿನಿಮಾಗಳನ್ನು ನಿರ್ದೇಶಿಸುರುವ ಉಪ್ಪಿ ಇಂದು ಯುಐ ಮೂಲಕ ಮತ್ತೆ ಗಮನ ಸೆಳೆಯುವಲ್ಲಿ ಯಶ ಕಂಡಿದ್ದಾರೆ.
ಇದನ್ನೂ ಓದಿ: 'ಸಿನಿಮಾ ನಮ್ಮನ್ನು ವಿಮರ್ಶೆ ಮಾಡುತ್ತೆ': 'ಯುಐ'ಗೆ ಪ್ರೇಕ್ಷಕರು ಹೇಳಿದ್ದಿಷ್ಟು; ಮೊದಲ ದಿನ ಕಲೆಕ್ಷನ್ ಎಷ್ಟಾಗಬಹುದು?
ಸೆನ್ಸಾರ್ನಲ್ಲಿ ಯು/ಎ ಸರ್ಟಿಫಿಕೇಟ್ ಪಡೆದುಕೊಂಡಿರುವ ಯುಐ ಚಿತ್ರದ ಗ್ಲಿಂಪ್ಸ್ಗೆ ಬಾಲಿವುಡ್ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಖ್ಯಾತಿಯ ಅಮೀರ್ ಖಾನ್ ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಜೊತೆಗೆ ನಾನು ಉಪೇಂಂದ್ರ ಅವರ ದೊಡ್ಡ ಅಭಿಮಾನಿ ಎಂದು ಹೇಳಿಕೊಂಡಿದ್ದರು.
ಇದನ್ನೂ ಓದಿ: 'UI' ರಿಲೀಸ್ ಬೆನ್ನಲ್ಲೇ ಪ್ರೇಕ್ಷಕರಿಗೆ ಉಪೇಂದ್ರ ಸವಾಲ್: ಈ ಚಾಲೆಂಜ್ ಸ್ವೀಕರಿಸುತ್ತೀರಾ?
ಲಹರಿ ಫಿಲ್ಮ್ಸ್, ವೀನಸ್ ಎಂಟರ್ ಪ್ರೈಸಸ್ ಲಾಂಛನದಡಿ ಜಿ.ಮನೋಹರನ್ ಹಾಗೂ ಕೆ.ಪಿ.ಶ್ರೀಕಾಂತ್ ಬಿಗ್ ಬಜೆಟ್ನಲ್ಲಿ ಈ ಬಹುನಿರೀಕ್ಷಿತ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ನವೀನ್ ಮನೋಹರ್ ಚಿತ್ರದ ಸಹ ನಿರ್ಮಾಪಕರು. ತುಳಸಿರಾಮ ನಾಯ್ಡು (ಲಹರಿ ವೇಲು), ಜಿ.ರಮೇಶ್, ಜಿ.ಆನಂದ್, ಚಂದ್ರು ಮನೋಹರನ್ ಹಾಗೂ ನಾಗೇಂದ್ರ ಅವರು ಕಾರ್ಯಕಾರಿ ನಿರ್ಮಾಪಕರು. ಉಪ್ಪಿ ಜೋಡಿಯಾಗಿ ರೀಷ್ಮಾ ನಾಣಯ್ಯ ಅಭಿನಯಿಸಿದ್ದಾರೆ. ಖ್ಯಾತ ಸಂಗೀತ ನಿರ್ದೆಶಕ ಅಜನೀಶ್ ಲೋಕನಾಥ್ ಅವರ ಸಂಗೀತ ಸಿನಿಮಾಗಿದೆ. ಹೆಸರಾಂತ ಕೆ.ವಿ.ಎನ್ ಪ್ರೊಡಕ್ಷನ್ಸ್ ವಿತರಣೆಯ ಜವಾಬ್ದಾರಿ ಹೊತ್ತಿದೆ.