ಬೆಂಗಳೂರು: ಸಿ.ಟಿ.ರವಿ ಅವರು ರಾಹುಲ್ ಗಾಂಧಿಗೂ ಡ್ರಗ್ ಅಡಿಕ್ಟ್ ಅಂದಿದ್ದಾರೆ, ಅದನ್ನೂ ಪರಿಶೀಲಿಸ್ತೇವೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಸಿ.ಟಿ.ರವಿ ಅವಾಚ್ಯ ಪದ ಬಳಕೆ ಆರೋಪ ಸಂಬಂಧ ಅವರು ಪ್ರತಿಕ್ರಿಯಿಸಿದರು.
ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ''ಮೂಲತಃ ಇದು ಅವರು ಬೈದಿದ್ದಕ್ಕೆ ಶುರುವಾಯ್ತು. ಹಿರಿಯ ಜನಪ್ರತಿನಿಧಿ ಆಗಿ ಅವರು ಬೈದಿದ್ದು ಸರಿಯಲ್ಲ. ಅವರು ಏಕೆ ಬೈಯಬೇಕಿತ್ತು? ಸಿ.ಟಿ.ರವಿ ಆ ಪದ ಹೇಳಿದ್ದಾರೆ'' ಎಂದು ಟೀಕಿಸಿದರು.
ಪೊಲೀಸರು ಎಲ್ಲವನ್ನೂ ಕೇಳಿ ಮಾಡಲ್ಲ: ''ಸಿ.ಟಿ.ರವಿಯನ್ನು ರಾತ್ರಿ ಎಲ್ಲ ಸುತ್ತಾಡಿಸಿರುವುದು ನಮಗೆ ಗೊತ್ತಿಲ್ಲ. ಬಂಧಿಸಿರುವುದು ಗೊತ್ತು. ಪೊಲೀಸರು ಕೆಲವೊಂದನ್ನು ಅವರ ಮಿತಿಯಲ್ಲೇ ಮಾಡುತ್ತಾರೆ. ಪೊಲೀಸರು ಎಲ್ಲವನ್ನೂ ಕೇಳಿ ಮಾಡಲ್ಲ. ಇವತ್ತು ಕೋರ್ಟಿಗೆ ಹಾಜರುಪಡಿಸ್ತಾರೆ. ಆ ಸಂದರ್ಭಕ್ಕೆ ಏನು ಮಾಡಬೇಕೋ ಅದನ್ನು ಪೊಲೀಸರು ಮಾಡುತ್ತಾರೆ. ಸಿ.ಟಿ.ರವಿ ತಲೆಗೆ ಪೆಟ್ಟು ಬಿದ್ದಿರುವುದು ಗೊತ್ತಿಲ್ಲ. ಪೊಲೀಸ್ ಮಾಹಿತಿಗಳು ರಹಸ್ಯ, ಬಯಲು ಮಾಡಲು ಆಗಲ್ಲ. ಕೆಲವು ವಿಚಾರ ನಿಮಗೆ ಹೇಳಲು ಆಗಲ್ಲ'' ಎಂದರು.
''ಬಿಜೆಪಿಯಿಂದ ಪ್ರತಿಭಟನೆ ಆಗುವ ರೀತಿ ನಮ್ಮವರಿಂದಲೂ ಪ್ರತಿಭಟನೆ ಆಗುತ್ತಿದೆ. ನಮ್ಮ ಕಾರ್ಯಕರ್ತರೂ ಇವತ್ತು ಪ್ರತಿಭಟನೆ ಮಾಡುತ್ತಿದ್ದಾರೆ. ನಾವು ಯಾರೂ ಪೊಲೀಸರಿಗೆ ಏನೂ ಸೂಚನೆ ಕೊಟ್ಟಿಲ್ಲ. ಪೊಲೀಸರಿಗೆ ಏನು ಸರಿ ಅನ್ನಿಸಿದೆಯೋ ಅದನ್ನು ಮಾಡಿದ್ದಾರೆ. ಸಿಎಂ, ಗೃಹ ಸಚಿವರು ನಾವು ಎಲ್ಲಾ ಹಿಂಗೆ ಮಾಡಿ ಎಂದು ಪೊಲೀಸರಿಗೆ ಹೇಳಲ್ಲ'' ಎಂದು ತಿಳಿಸಿದರು.
ಕಾನೂನಾತ್ಮಕವಾಗಿಯೇ ಪ್ರಕ್ರಿಯೆ: ಚಿಕ್ಕಮಗಳೂರು ಬಂದ್ಗೆ ಕರೆ ವಿಚಾರವಾಗಿ ಪ್ರತಿಕ್ರಿಯಿಸಿ, ''ಅಂಬೇಡ್ಕರ್ ಕುರಿತು, ಲಕ್ಷ್ಮೀ ವಿರುದ್ದ ಮಾತಾಡಿದ್ದಕ್ಕೂ ಪ್ರತಿಭಟನೆ ಮಾಡಬೇಕು'' ಎಂದರು. ''ಸಿ.ಟಿ.ರವಿ ಅವರ ಪ್ರತಿ ದೂರನ್ನೂ ಪರಿಶೀಲಿಸುತ್ತೇವೆ. ಪೊಲೀಸರು ಪ್ರಕ್ರಿಯೆ ಪ್ರಕಾರ ನೋಡಿಕೊಳ್ಳಲಿದ್ದಾರೆ. ಸಿ.ಟಿ.ರವಿ ಅವರನ್ನು ಬಂಧಿಸಿದಾಗಿನಿಂದ ಇಲ್ಲಿಯವರೆಗೆ ಕಾನೂನಾತ್ಮಕವಾಗಿಯೇ ಪ್ರಕ್ರಿಯೆ ನಡೆಯುತ್ತಿದೆ'' ಎಂದು ಹೇಳಿದರು.
ತಮ್ಮ ಕೊಲೆಗೆ ಸಂಚು, ಪ್ರಾಣಕ್ಕೆ ಅಪಾಯ ಎಂಬ ಸಿ.ಟಿ.ರವಿ ಹೇಳಿಕೆ ವಿಚಾರವಾಗಿ ಮಾತನಾಡಿ, ''ಇದರ ಬಗ್ಗೆ ನಾನು ಕಾಮೆಂಟ್ ಮಾಡಲ್ಲ. ಅವರ ಹೇಳಿಕೆ ನನಗೆ ಗೊತ್ತಿಲ್ಲ'' ಎಂದು ತಿಳಿಸಿದರು.
ಪರಿಸ್ಥಿತಿ ಕೈ ಮೀರಿಲ್ಲ, ಎಲ್ಲವೂ ಹತೋಟಿಯಲ್ಲಿದೆ: ಬೆಳಗಾವಿಯಲ್ಲಿ ಸಿ.ಟಿ.ರವಿ ಮೇಲೆ ಕಾಂಗ್ರೆಸ್ ಕಾರ್ಯಕರ್ತರ ಹಲ್ಲೆ ಪ್ರಯತ್ನ ವಿಚಾರವಾಗಿ ಪ್ರತಿಕ್ರಿಯಿಸಿ, ''ಎಲ್ಲವೂ ಕಂಟ್ರೋಲ್ ಇದೆ. ಸದನ ವೀಕ್ಷಣೆ ಮಾಡಲು ಸ್ಪೀಕರ್ ಅವಕಾಶ ನೀಡಿದ್ದಾರೆ. ಅವರ ಕ್ಷೇತ್ರ ಅಂತ ಜನ ಬಂದಿರಬಹುದು. ಯಾವುದೇ ಪರಿಸ್ಥಿತಿ ಕೈ ಮೀರಿಲ್ಲ. ಎಲ್ಲವೂ ಹತೋಟಿಯಲ್ಲಿದೆ'' ಎಂದು ಸಮರ್ಥಿಸಿಕೊಂಡರು.
''ಸಿ.ಟಿ.ರವಿಯನ್ನು ಬೆಳಗಾವಿಯಲ್ಲಿ ಕೋರ್ಟ್ಗೆ ಹಾಜರುಪಡಿಸುತ್ತಾರೆ. ಅಲ್ಲಿನ ಕೋರ್ಟ್ ಯಾವ ನಿರ್ದೇಶನ ನೀಡಲಿದೆ ಎಂಬುದನ್ನು ನೋಡಬೇಕು. ಕೋರ್ಟ್ ಸೂಚನೆ ಮೇರೆಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು'' ಎಂದರು.
ಇದನ್ನೂ ಓದಿ: ಲಕ್ಷ್ಮೀ ಹೆಬ್ಬಾಳ್ಕರ್ಗೆ ಸಿ.ಟಿ. ರವಿ 12 ಬಾರಿ ಅಶ್ಲೀಲ ಪದ ಬಳಸಿದ್ದಾರೆ, ನನ್ನ ಬಳಿ ದಾಖಲೆ ಇದೆ: ಡಿಕೆಶಿ