ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲಾದ್ಯಂತ ಮಳೆ ಅಬ್ಬರ ಮುಂದುವರೆದಿದೆ. ಬಿರುಗಾಳಿ ಮಳೆಗೆ ಬೃಹತ್ ಮರವೊಂದು ಮನೆಯ ಮೇಲೆ ಮುರಿದು ಬಿದ್ದ ಪರಿಣಾಮ ಮನೆಯಲ್ಲಿದ್ದ ವೃದ್ಧೆಯೊಬ್ಬರು ಗಾಯಗೊಂಡಿರುವ ಘಟನೆ ಕಳಸ ತಾಲೂಕಿನ ಕಾರ್ಲೆ ಗ್ರಾಮದಲ್ಲಿ ನಡೆದಿದೆ. ಸರಿಯಾದ ರಸ್ತೆ ಮಾರ್ಗವಿಲ್ಲದ ಕಾರಣ ವೃದ್ಧೆ ಬೆಲ್ಲಮ್ಮನನ್ನು ಗ್ರಾಮಸ್ಥರು ಸೇರಿಕೊಂಡು ಜೋಳಿಗೆ ಮೂಲಕ ಕಳಸ ಆಸ್ಪತ್ರೆಗೆ ಸಾಗಿಸಿದ್ದಾರೆ.
ಹಲವು ವರ್ಷದಿಂದ ರಸ್ತೆ ಇಲ್ಲದೇ ಕಾರ್ಲೆ ಗ್ರಾಮಸ್ಥರು ಪರದಾಡುತ್ತಿದ್ದಾರೆ. ಈ ಸಂಬಂಧ ಗ್ರಾಮಸ್ಥರು ಹಲವು ಬಾರಿ ತಾಲೂಕು ಆಡಳಿತ, ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಈವರೆಗೂ ಈ ಗ್ರಾಮಕ್ಕೆ ಹೋಗಲು ಸರಿಯಾದ ರಸ್ತೆ ಹಾಗೂ ಮಾರ್ಗವೇ ಇಲ್ಲ. ಗುಡ್ಡಗಾಡು ಅರಣ್ಯ ಪ್ರದೇಶದ ಮೂಲಕವೇ ಜನರು ಪ್ರಯಾಣ ಮಾಡಿ ತಮ್ಮ ಜೀವನ ನಡೆಸುವಂತಾಗಿದೆ. ಸದ್ಯ ಮಳೆಗಾಲ ಇರುವುದರಿಂದ ಈ ಭಾಗದ ಜನರಿಗೆ ಹಲವು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಯಾವುದೇ ರೀತಿಯ ಸಮಸ್ಯೆ ಬಂದರೂ ನಗರಕ್ಕೆ ಹೋಗುವುದಕ್ಕೆ ಕಷ್ಟಕರವಾಗಿದೆ. ಕೂಡಲೇ ಇಲ್ಲಿನ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳು ಗಮನಹರಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಹಾಸನದಲ್ಲಿ ಮಳೆ ಆರ್ಭಟ; ಜವೇನಹಳ್ಳಿ ಮಠದ ಮೇಲೆ ಉರುಳಿದ ಬೃಹತ್ ಮರ - tree fell on Mutt