ಚಾಮರಾಜನಗರ: ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಳ್ವಾಡಿ ಗ್ರಾಮದ ಯೋಧ ಜ್ಞಾನ ಪ್ರಕಾಶ್ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ನೆರವೇರಿಸಲಾಯಿತು.
ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಯೋಧ ಜ್ಞಾನಪ್ರಕಾಶ್ ಕಳೆದ 13 ವರ್ಷಗಳ ಹಿಂದೆ ಭಾರತೀಯ ಸೇನೆಗೆ ಆಯ್ಕೆಯಾಗಿ ಪಂಜಾಬ್ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಳೆದ ಎರಡು ದಿನಗಳ ಹಿಂದೆ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತದಿಂದ ಮೃತಪಟ್ಟಿದ್ದರು.
ಪಂಜಾಂಬ್ನಿಂದ ಯೋಧರ ಪಾರ್ಥಿವ ಶರೀರವನ್ನು ವಿಮಾನದ ಮೂಲಕ ಬೆಂಗಳೂರಿಗೆ ತಂದು, ಅಲ್ಲಿಂದ ಆಂಬ್ಯುಲೆನ್ಸ್ ಮೂಲಕ ಸ್ವಗ್ರಾಮಕ್ಕೆ ತರಲಾಗಿತ್ತು.
ನಂತರ ಕ್ರಿಶ್ಚಿಯನ್ ಸಮಾಜದ ಸಂಪ್ರದಾಯದಂತೆ ಪಾರ್ಥಿವ ಶರೀರವನ್ನು ಸುಳ್ವಾಡಿ ಗ್ರಾಮದ ಚರ್ಚ್ನಲ್ಲಿಟ್ಟು ಫಾ ಟೆನ್ನಿ ಕುರಿಯನ್ ರವರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ನಂತರ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು.
ಸುತ್ತಮುತ್ತಲಿನ ಗ್ರಾಮಗಳ ನಿವೃತ್ತ ಸೈನಿಕರು, ಸಾರ್ವಜನಿಕರು, ವಿದ್ಯಾರ್ಥಿಗಳು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಅಂತಿಮ ದರ್ಶನ ಪಡೆದರು. ಅದಾದ ಬಳಿಕ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಇದನ್ನೂ ಓದಿ : ಪಂಜಾಬ್ ಗಡಿಯಲ್ಲಿ ಹೃದಯಾಘಾತದಿಂದ ಚಾಮರಾಜನಗರದ ಯೋಧ ಸಾವು - SOLDIER DIES OF HEART ATTACK