ಬೆಂಗಳೂರು: ನಕಲಿ ದಾಖಲಾತಿ ಸೃಷ್ಟಿಸಿ ಸುಮಾರು 224 ವರ್ಷಗಳ ಹಿಂದಿನ ಬ್ರಿಟಿಷ್ ಕಾಲದ ಪಾರಂಪರಿಕ ಕಟ್ಟಡವನ್ನು ಕೆಡವಿ ಜಾಗ ಅತಿಕ್ರಮಿಸಲು ಯತ್ನಿಸಿದ್ದ ಆರೋಪಿಯು ಬಾಗಲೂರು ಠಾಣೆ ಪೊಲೀಸರಿಗೆ ಸಿಕ್ಕಿಬಿದಿದ್ದಾನೆ. ಕೆಂಗೇರಿಯಲ್ಲಿ ವಾಸವಾಗಿರುವ ಗಣೇಶ್ (47) ಬಂಧಿತ ಆರೋಪಿ. ಆತನ ಪೊಲೀಸ್ ಕಸ್ಟಡಿ ಇಂದು ಅಂತ್ಯಗೊಂಡ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಮತ್ತೆ ತಮ್ಮ ವಶಕ್ಕೆ ಪಡೆಯಲು ಪೊಲೀಸರು ಮುಂದಾಗಿದ್ದಾರೆ. ಬಂಧಿತನಿಂದ ನಕಲಿ ದಾಖಲಾತಿ ಪತ್ರಗಳು ಹಾಗೂ ಕಟ್ಟಡ ಕೆಡವಲು ಬಳಸಿದ್ದ ಜೆಸಿಬಿ ವಾಹನವನ್ನು ವಶಕ್ಕೆ ಪಡೆದುಕೊಂಡು ಪ್ರಕರಣದ ತನಿಖೆ ಚುರುಕುಗೊಳಿಸಿದ್ದಾರೆ.
ಕೆಂಗೇರಿಯ ವಲ್ಲಗೆರೆಹಳ್ಳಿಯ ಅಪಾರ್ಟ್ಮೆಂಟ್ವೊಂದರಲ್ಲಿ ಪತ್ನಿ, ಮಕ್ಕಳೊಂದಿಗೆ ವಾಸವಾಗಿರುವ ಗಣೇಶ್, ನಗರದಲ್ಲಿ ಎಲ್ಲೆಲ್ಲಿ ಖಾಲಿ ಜಾಗವಿರುವ ಬಗ್ಗೆ ಆನ್ಲೈನ್ ಮುಖಾಂತರ ತಿಳಿದುಕೊಂಡು ಆ ಜಾಗದ ಮಾಲೀಕರು ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಲು ಆರ್ಟಿಐ ಮೊರೆ ಹೋಗುತ್ತಿದ್ದ. ಕಣ್ಣೂರಿನಲ್ಲಿರುವ ಪಾರಂಪರಿಕ ಸರ್ವೇ ಪಾಯಿಂಟ್ ಕಟ್ಟಡ ಜಾಗದ ಮೇಲೆ ಕಣ್ಣು ಹಾಕಿದ್ದ. ಈ ಜಾಗಕ್ಕೆ ಮಾಲೀಕರು ಇಲ್ಲದಿರುವುದನ್ನ ಖಚಿತಪಡಿಸಿಕೊಂಡಿದ್ದ. ಅಲ್ಲದೇ ಕಣ್ಣೂರಿನಲ್ಲಿ ಪಾರಂಪರಿಕ ಕಟ್ಟಡದ ಮಾಲೀಕತ್ವದ ಬಗ್ಗೆ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಆರ್ಟಿಐ ಮೂಲಕ ಪ್ರಶ್ನಿಸಿದ್ದ. ಇಲಾಖೆಯು ತಮ್ಮ ಅಧೀನದಲ್ಲಿ ಕಣ್ಣೂರಿನಲ್ಲಿ ಕಟ್ಟಡವಿಲ್ಲ ಎಂದು ಉತ್ತರಿಸಿರುವುದಾಗಿ ಆರೋಪಿ ಪೊಲೀಸರು ಮುಂದೆ ಹೇಳಿದ್ದಾನೆ.
ಪಾರಂಪರಿಕ ಕಟ್ಟಡವಿರುವುದನ್ನ ಅರಿತು 2021ರಲ್ಲಿ ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್ ಸಂಸ್ಥೆಯು ಈ ಕಟ್ಟಡ ನಿರ್ವಹಿಸಿತ್ತು. ತದನಂತರ ಸೂಕ್ತ ನಿರ್ವಹಣೆ ಕೊರತೆಯಿಂದಾಗಿ ಪಾಳುಬಿದ್ದ ಜಾಗದಂತಾಗಿತ್ತು. ಇದನ್ನ ಅರಿತ ಆರೋಪಿಯು ಕಟ್ಟಡದ ಸುತ್ತಮುತ್ತಲಿನ 7 ಗುಂಟೆ ಜಾಗವನ್ನ ತಮ್ಮ ವಶಕ್ಕೆ ಪಡೆಯಲು ವ್ಯೂಹ ರಚಿಸಿದ್ದ. ಇದಕ್ಕೆ ಪೂರಕವಾಗಿ ನಕಲಿ ದಾಖಲಾತಿಗಳನ್ನ ಸೃಷ್ಟಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
1981ರಲ್ಲಿ ಆರೋಪಿಯು ತನ್ನ ತಂದೆ ನಾಗರಾಜ್ಗೆ ಧರ್ಮರಾಜ್ ಎಂಬುವರಿಂದ 7 ಗುಂಟೆ ಜಾಗವನ್ನು ಖರೀದಿಸಿರುವ ಹಾಗೆ ಸೆಲ್ ಡೀಡ್ ಸೃಷ್ಟಿಸಿದ್ದ. ತದನಂತರ ತಂದೆಯಿಂದ ತನಗೆ ಬಂದಿರುವ ರೀತಿ ನಕಲಿ ಗಿಫ್ಟ್ ಡೀಡ್ ಪತ್ರವನ್ನ ಹುಟ್ಟುಹಾಕಿದ್ದ. ಇದೇ ದಾಖಲಾತಿ ಆಧರಿಸಿ ಕಳೆದ ಜೂನ್ 5ರಂದು ಸ್ಥಳಕ್ಕೆ ಹೋಗಿ ಜೆಸಿಬಿ ಮೂಲಕ ಕಟ್ಟಡ ಕೆಡವಿಸಿದ್ದ. ಸ್ಥಳೀಯರು ಪ್ರಶ್ನಿಸಿದ್ದಕ್ಕೆ ತಾನು ವಕೀಲನಾಗಿದ್ದು, ಈ ಜಾಗದ ಅಸಲಿ ಮಾಲೀಕ ತಾನು ಎಂದು ಹೇಳಿಕೊಂಡಿದ್ದ.
ಈ ಬಗ್ಗೆ ಅನುಮಾನಗೊಂಡು ಬೆಂಗಳೂರು ನಗರ ಪೂರ್ವ ಕೆ.ಆರ್.ಪುರಂ ತಹಶೀಲ್ದಾರ್ಗೆ ಸ್ಥಳೀಯ ವ್ಯಕ್ತಿಯೊಬ್ಬರು ದೂರು ನೀಡಿದ್ದರು. ದೂರು ಆಧರಿಸಿ ಸ್ಥಳಕ್ಕೆ ಭೇಟಿ ನೀಡಿದ ಪರಿಶೀಲಿಸಿದಾಗ ಆರೋಪಿ ಹೆಸರಿನಲ್ಲಿ ಇಲ್ಲದಿರುವುದು ಗೊತ್ತಾಗಿತ್ತು. ಈ ಸಂಬಂಧ ನೀಡಿದ ದೂರಿನನ್ವಯ ಬಾಗಲೂರು ಠಾಣೆ ಇನ್ಸ್ಪೆಕ್ಟರ್ ಶಬರೀಶ್ ನೇತೃತ್ವದ ತಂಡ ಬಂಧಿಸಿದೆ.
ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆರ್ಟಿಐ ಮೂಲಕ ಮಾಲೀಕತ್ವವಿಲ್ಲದ ಅಥವಾ ವಾರಸುದಾರರಿಲ್ಲದ ಪಾಳುಬಿದ್ದ ಕಟ್ಟಡ ಹಾಗೂ ಜಾಗವನ್ನ ಗುರುತಿಸಿಕೊಂಡು ನಕಲಿ ದಾಖಲೆ ಸೃಷ್ಟಿಸಲು ಯತ್ನಿಸುತ್ತಿದ್ದ. ಧರಾಶಾಯಿಯಾಗಿರುವ ಪಾರಂಪರಿಕ ಕಟ್ಟಡವನ್ನ ತಮ್ಮ ವಶಕ್ಕೆ ಪಡೆಯಲು ಇದೇ ತಂತ್ರ ಅನುಸರಿಸಿದ್ದ. ಸರ್ವೇ ಇಲಾಖೆಯ ದಿಶಾಂಕ್ ಆ್ಯಪ್ ಬಳಸಿಕೊಂಡು ಕಟ್ಟಡ ಪಕ್ಕದಲ್ಲಿರುವ ಸರ್ವೇ ನಂಬರ್ ಮಾಲೀಕರೊಬ್ಬರಾದ ಧರ್ಮರಾಜ್ ಎಂಬುವರಿಂದ ಸೆಲ್ ಡೀಡ್ ಮಾಡಿರುವ ದಾಖಲಾತಿ ಸೃಷ್ಟಿಸಿದ್ದ ಎಂದು ಹೇಳಿದ್ದಾನೆ. ಈ ಬಗ್ಗೆ ಪರಿಶೀಲಿಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆರೋಪಿ ವಿರುದ್ಧ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ಪ್ರತಿಬಂಧಕ ಕಾಯ್ದೆ-1984 ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಪಾರಂಪರಿಕ ಕಟ್ಟಡದ ಇತಿಹಾಸವೇನು?: ಲೆಫ್ಟಿನೆಂಟ್ ಕರ್ನಲ್ ವಿಲಿಯಂ ರಾಂಟನ್ ಬ್ರಿಟಿಷ್ ಕಾಲದ ಸರ್ವೇ ಅಧಿಕಾರಿಯಾಗಿದ್ದು, ಭಾರತವನ್ನ ಅಳತೆ ಮಾಡಿದ ವ್ಯಕ್ತಿಗಳಲ್ಲಿ ಈತ ಮುಂಚೂಣಿಯಾಗಿದ್ದ. 1800ರಲ್ಲಿ ತ್ರಿಕೋನ ಸ್ಥಳ ಆಧರಿಸಿ ವೀಕ್ಷಣಾಲಯ ಕಟ್ಟಡದ(Great Trigonometry Survey Observatory building) ಸರ್ವೇ ಪಾಯಿಂಟ್ ಅನ್ನು ಕಣ್ಣೂರಿನಲ್ಲಿ ಮಾಡಿದ್ದ. ಮೇಖ್ರಿಸರ್ಕಲ್ ಹಾಗೂ ಮತ್ತೊಂದು ಪ್ರದೇಶ ಸೇರಿ ತ್ರಿಕೋನಾ ಆಕಾರದ ಪಾಯಿಂಟ್ ಆಧಾರದ ಮೇರೆಗೆ ಅಳತೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್‌ನಿಂದ ಎರಡು ಬಾರಿ ₹2.32 ಕೋಟಿ ಸಾಲ: ಐವರ ವಿರುದ್ಧ ಎಫ್ಐಆರ್ - Fake Document Case