ಮಂಗಳೂರು: ಮೊಬೈಲ್ ತೆಗೆದುಕೊಂಡು ಹೋಗಿ ವಾಪಸ್ ನೀಡದಿರುವುದಕ್ಕೆ ಕೋಪಗೊಂಡು ಸ್ನೇಹಿತನ ಕೊಲೆಗೈದ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ನಗರದ ತೋಟಬೆಂಗ್ರೆಯ ನಿವಾಸಿ ಧರ್ಮರಾಜ್ ಸುವರ್ಣ (50) ಬಂಧಿತ ಆರೋಪಿ.
ಪ್ರಕರಣದ ಹಿನ್ನೆಲೆ: ಸೆಪ್ಟಂಬರ್ 21ರಂದು ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ತೋಟಾಬೆಂಗ್ರೆಯ ಬೊಬ್ಬರ್ಯ ದೈವಸ್ಥಾನದ ಹಿಂಬದಿಯ ಸಮುದ್ರ ಕಿನಾರೆಯ ಬಳಿ ಬಾಗಲಕೋಟೆ ಮೂಲದ 39 ವರ್ಷದ ಮುತ್ತು ಬಸವರಾಜ ವಡ್ಡರ್ ಯಾನೆ ಮುದುಕಪ್ಪ ಎಂಬವರ ಕೊಲೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹನುಮಂತ ದುರುಗಪ್ಪ ವಡ್ಡರ್ ಎಂಬವರು ನೀಡಿದ ದೂರಿನಂತೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಆರೋಪಿ ಧರ್ಮರಾಜ್ ಸುವರ್ಣ ಎಂಬಾತನನ್ನು ಸೆ.26ರಂದು ಕೇರಳದ ಕೋಝಿಕ್ಕೋಡ್ ಜಿಲ್ಲೆಯ ಚೊಂಪಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂಧಿಸಿದ್ದಾರೆ. ಆರೋಪಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದು, ತೋಟಾ ಬೆಂಗ್ರೆಯಲ್ಲಿ ವಾಸವಾಗಿದ್ದನು.
ಹೊಸ ಮೊಬೈಲ್ ವಾಪಸ್ ಕೊಡದಿರುವುದಕ್ಕೆ ಜಗಳ, ಕೊಲೆ: ಧರ್ಮರಾಜ್ ಸುವರ್ಣ ಮತ್ತು ಮುತ್ತು ಬಸವರಾಜ ವಡ್ಡರ್ ಕಳೆದ ಕೆಲವು ಸಮಯದಿಂದ ಒಬ್ಬರಿಗೊಬ್ಬರು ಪರಿಚಯವಾಗಿದ್ದರು. ಇತ್ತೀಚೆಗೆ ಧರ್ಮರಾಜ್ ಸುವರ್ಣ ಹೊಸ ಮೊಬೈಲ್ ಖರೀದಿಸಿದ್ದು, ಆ ಮೊಬೈಲನ್ನು ಮುತ್ತು ಬಸವರಾಜ್ ತೆಗೆದುಕೊಂಡು ವಾಪಸ್ ನೀಡದೆ ಹಾಳು ಮಾಡಿದ್ದ. ಈ ವಿಚಾರವಾಗಿ ಇಬ್ಬರ ನಡುವೆ ಗಲಾಟೆಯಾಗಿತ್ತು. ಈ ವೇಳೆ ಆರೋಪಿಯು ಮುತ್ತು ಬಸವರಾಜನನ್ನು ಮರದ ದಿನ್ನೆಯಿಂದ ಹೊಡೆದು ಕೊಲೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪಣಂಬೂರು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮೊಹಮ್ಮದ್ ಸಲೀಂ ಅಬ್ಬಾಸ್, ಪಣಂಬೂರು ಪೊಲೀಸ್ ಠಾಣಾ ಕಾನೂನು ಸುವ್ಯವಸ್ಥೆ ವಿಭಾಗದ ಉಪ ನಿರೀಕ್ಷಕರಾದ ಶ್ರೀಕಲಾ ಕೆ.ಟಿ, ಜ್ಞಾನಶೇಖರ ಹಾಗೂ ಎಎಸ್ಐ ಕೃಷ್ಣ, ಬಿ.ಕೆ.ನಯನಾ ಹಾಗೂ ಸಿಬ್ಬಂದಿಗಳಾದ ಸತೀಶ್ ಎಂ.ಆರ್, ಸಯ್ಯದ್ ಇಂತಿಯಾಜ್, ಪ್ರೇಮಾನಂದ, ನವೀನ್ ಚಂದ್ರ, ಜೇಮ್ಸ್, ಪಿ.ಜೆ, ಶಶಿಕುಮಾರ್, ರಾಕೇಶ್, ಮಾಣಿಕ್, ಸೋಮ್ಲಾ ನಾಯ್ಕ ಹಾಗೂ ಅಂಬಣ್ಣ ಅವರು ಆರೋಪಿ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ: ಮೈಸೂರು: ದೈಹಿಕ ಸಂಪರ್ಕಕ್ಕೆ ಒಪ್ಪದ ಪತ್ನಿ ಕೊಂದ ಪತಿಗೆ ಜೀವಾವಧಿ ಶಿಕ್ಷೆ - Life Imprisonment