ಕಾರವಾರ: ಪ್ರಪಂಚದಾದ್ಯಂತ ತ್ಯಾಗ ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬ ಆಚರಣೆಗೆ ಮುಸ್ಲಿಂ ಬಾಂಧವರು ಸಜ್ಜಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಕಳೆದ ಕೆಲ ದಿನಗಳಿಂದ ನಡೆಯುತ್ತಿದ್ದ ವಿವಿಧ ತಳಿಯ ಕುರಿ ಹಾಗೂ ಮೇಕೆಗಳ ವ್ಯಾಪಾರ ಭಾನುವಾರವೂ ಜೋರಾಗಿ ನಡೆಯಿತು.
ಸೋಮವಾರ ಹಬ್ಬ ಇರುವ ಹಿನ್ನೆಲೆಯಲ್ಲಿ ಭಾನುವಾರವೂ ನಗರದ ಕಾಜುಭಾಗ, ಸದಾಶಿವಗಡ ಸೇರಿದಂತೆ ಇತರ ಕಡೆ ಮುಸ್ಲಿಮರು ಕುರಿ/ಮೇಕೆಗಳ ವ್ಯಾಪಾರದಲ್ಲಿ ತೊಡಗಿದ್ದರು. ಕಳೆದ ಒಂದು ವಾರದಿಂದ ದೇವದುರ್ಗ, ಅಮೀನಗಡದಿಂದ ತಂದಿರುವ ಮೇಕೆಗಳನ್ನು ತೂಕದ ಆಧಾರದ ಮೇಲೆ 25 ಸಾವಿರ ದಿಂದ 60 ಸಾವಿರದ ರೂ.ಗೆ ಮಾರಾಟ ಮಾಡುತ್ತಿರುವುದಾಗಿ ವ್ಯಾಪಾರಸ್ಥರು ತಿಳಿಸಿದ್ದಾರೆ.
ಮತ್ತೊಂದೆಡೆ, ಇಬ್ರಾಹಿಂ ಶೇಖ್ ಎಂಬುವರು ಮುಂಬೈನಿಂದ ಲಕ್ಷಾಂತರ ರೂ. ಮೌಲ್ಯದ ಕುರಿಗಳನ್ನು ಖರೀದಿಸಿ ಕಾರವಾರಕ್ಕೆ ತಂದಿದ್ದಾರೆ. ಈ ಪೈಕಿ ಮೂರು ಲಕ್ಷ ರೂ. ನ ಆಫ್ರಿಕನ್ ಬೋಯರ್ ಜಾತಿಯ ಶ್ವೇತ ವರ್ಣದ ಮೇಕೆ ಗಮನ ಸೆಳೆಯುತ್ತಿದೆ. ಇದು ಒಂದೂವರೆ ಕ್ವಿಂಟಲ್ ತೂಕವಿದೆ. ಇದರ ಮರಿಗಳನ್ನು 80 ಸಾವಿರ ದಿಂದ 1 ಲಕ್ಷ ಕೊಟ್ಟು ಖರೀದಿಸಿ ತಂದಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಇಬ್ರಾಹಿಂ ಶೇಖ್, ನಾವು ಪ್ರತಿ ವರ್ಷವೂ ಬಕ್ರೀದ್ ಸಂದರ್ಭದಲ್ಲಿ ಈ ರೀತಿಯ ಮೇಕೆಗಳನ್ನು ತಂದು ಹಬ್ಬ ಆಚರಣೆ ಮಾಡುತ್ತೇವೆ ಎಂದು ಹೇಳಿದರು.
"ತ್ಯಾಗ ಹಾಗೂ ಬಲಿದಾನದ ಪ್ರತೀಕವಾಗಿ ಹಬ್ಬವನ್ನು ಆಚರಿಸುತ್ತಾರೆ. ಈ ವೇಳೆ ತ್ಯಾಗದ ನೆನಪಿಗಾಗಿ ಮೇಕೆ ಇಲ್ಲವೇ ಕುರಿಗಳನ್ನು ಬಲಿದಾನ ನೀಡಿ ಅದರ ಮಾಂಸವನ್ನು ಮೂರು ಭಾಗವನ್ನಾಗಿ ಮಾಡಿ, ಒಂದು ಭಾಗವನ್ನು ಬಡವರಿಗೆ, ಇನ್ನೊಂದು ಕುಟುಂಬದವರಿಗೆ ಹಾಗೂ ಮತ್ತೊಂದು ಭಾಗವನ್ನು ಸಂಬಂಧಿಕರಿಗೆ ಇಲ್ಲವೇ ಸ್ನೇಹಿತರಿಗೆ ನೀಡುವ ಪದ್ಧತಿ ಇದೆ" ಎನ್ನುತ್ತಾರೆ ಕಾಜುಭಾಗದ ಮುನ್ನಾ.
ಇದನ್ನೂ ಓದಿ: ದಾವಣಗೆರೆ: ಜಮೀನಿಗೆ ಹೋದ ರೈತನ ಮೇಲೆ ಕರಡಿ ಹಿಂಡು ದಾಳಿ; ಶ್ವಾನಗಳಿಂದ ಉಳಿತು ರೈತನ ಪ್ರಾಣ - DOGS SAVED A FARMER