ಬೆಂಗಳೂರು: ಮಹಿಳೆಯೊಬ್ಬರಿಗೆ ಬೆದರಿಸಿ ಪೂಜೆ ನೆಪದಲ್ಲಿ 4 ಗ್ರಾಂ ಚಿನ್ನದ ಕಿವಿಯೋಲೆ ಎಗರಿಸಿರುವ ಘಟನೆ ಭಾನುವಾರ ಬೆಳಗ್ಗೆ ಕೊತ್ತನೂರಿನ ಜನತಾ ಕಾಲೋನಿಯಲ್ಲಿ ನಡೆದಿದೆ. ಶಕುಂತಲಾ ಎಂಬ ಗೃಹಿಣಿಯ ಮನೆಗೆ ಬುಡುಬುಡಿಕೆಯವನ ಸೋಗಿನಲ್ಲಿ ಬಂದಿದ್ದವನು ಚಿನ್ನದ ಕಿವಿಯೋಲೆ ಕದ್ದು ಪರಾರಿಯಾಗಿದ್ದಾನೆ.
ಭಾನುವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಶಕುಂತಲಾ ಅವರ ಮನೆಗೆ ಬುಡುಬುಡಿಕೆಯವನ ಸೋಗಿನಲ್ಲಿ ಬಂದಿದ್ದ ಆರೋಪಿ, 'ನಿನ್ನ ಗಂಡನಿಗೆ ಗಂಡಾಂತರವಿದೆ, ಪೂಜೆ ಮಾಡದಿದ್ದರೆ ಇನ್ನು 9 ದಿನಗಳಲ್ಲಿ ಮರಣ ಹೊಂದುತ್ತಾನೆ' ಎಂದು ಹೆದರಿಸಿದ್ದ. ಬಳಿಕ ಪೂಜೆ ಮಾಡುವುದಾಗಿ ಹೇಳಿ ಒಂದು ಸಣ್ಣ ಮಡಿಕೆ ಕೊಟ್ಟು, ಅದಕ್ಕೆ ಅರಿಶಿನ - ಕುಂಕುಮ, ಅಕ್ಕಿ ಹಾಕಿ ಕಿವಿಯೋಲೆ ಬಿಚ್ಚಿಡುವಂತೆ ತಿಳಿಸಿದ್ದ. ನಂತರ ಮಡಿಕೆ ಸುತ್ತಲೂ ದಾರ ಕಟ್ಟಿ 'ಪೂಜೆ ಮುಗಿದಿದೆ ನಿನ್ನ ಗಂಡ ಮನೆಗೆ ಬಂದ ಬಳಿಕ ತೆಗೆದು ನೋಡು' ಅಂತಾ ಹೇಳಿದ್ದ.
ಸಂಜೆ 4 ಗಂಟೆ ಸುಮಾರಿಗೆ ಗಂಡ ಬಂದ ನಂತರ ಮಡಿಕೆ ತೆರೆದು ನೋಡಿದಾಗ ಚಿನ್ನದ ಕಿವಿಯೋಲೆಗಳು ಇಲ್ಲದಿರುವುದು ತಿಳಿದಿದೆ. ಘಟನೆಗೆ ಸಂಬಂಧಿಸಿದಂತೆ ಕೊತ್ತನೂರು ಠಾಣೆಗೆ ಶಕುಂತಲಾ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಇತ್ತೀಚಿನ ಪ್ರಕರಣ, ಹಣ ವರ್ಗಾವಣೆ ಸೋಗಿನಲ್ಲಿ ಯಾಮಾರಿಸುತ್ತಿದ್ದವನ ಬಂಧನ: ಎಟಿಎಂ ಡೆಪಾಸಿಟ್ ಇಡಲು ಬರುವ ಸಾರ್ವಜನಿಕರನ್ನು ನಂಬಿಸಿ ಹಣ ಪಡೆದು ವಂಚನೆ ಮಾಡಿದ ಆರೋಪಿಯನ್ನು ಮಾಗಡಿ ರೋಡ್ ಠಾಣೆ ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಆರ್. ಟಿ. ನಗರದ ನಿವಾಸಿ ಸಾಯಿಲ್ ಬಂಧಿತ ಆರೋಪಿ. ಅವಿವಾಹಿತನಾಗಿರುವ 24 ವರ್ಷದ ಸಾಯಿಲ್, ಕಡಿಮೆ ಸಮಯದಲ್ಲಿ ಹೆಚ್ಚು ಹಣ ಸಂಪಾದಿಸಲು ವಾಮ ಮಾರ್ಗದ ಮೂಲಕ ವಂಚಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದನು. ನಗರದಲ್ಲಿರುವ ಎಟಿಎಂ ಕೇಂದ್ರಗಳ ಮುಂದೆ ನಿಂತು ಹಣ ಡೆಪಾಸಿಟ್ ಮಾಡಲು ಬರುವ ಅಮಾಯಕರನ್ನು ಟಾರ್ಗೆಟ್ ಮಾಡಿಕೊಂಡು ವಂಚನೆ ಮಾಡುತ್ತಿದ್ದನು. ಮಾಗಡಿ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯ ಎರಡು ಕಡೆಗಳಲ್ಲಿ ವಂಚನೆ ಎಸಗಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದರು.
ಇದನ್ನೂ ಓದಿ: ಶಿವಮೊಗ್ಗ: ಆಟವಾಡುತ್ತಿದ್ದಾಗ ಜಿಂಕೆ ಪ್ರತಿಮೆ ಬಿದ್ದು ಬಾಲಕಿ ಸಾವು