ಚಿಕ್ಕಮಗಳೂರು: ಅನೈತಿಕ ಸಂಬಂಧದಲ್ಲಿದ್ದ ಗೃಹಿಣಿ ತನ್ನನ್ನು ಬಿಟ್ಟು ಆಕೆಯ ಪತಿ ಬಳಿ ಮರಳಿದ್ದಕ್ಕೆ ಆರೋಪಿ ಆಕೆಯ ಮಕ್ಕಳೆದುರೇ ಚೂರಿಯಿಂದ ಇರಿದು ಸಾಯದಿದ್ದಾಗ, ಕೆರೆಗೆ ಎಸೆದು ಹತ್ಯೆಗೈಯ್ದಿರುವ ಘಟನೆ ಜಿಲ್ಲೆಯ ಬಾಳೆಹೊನ್ನೂರು ಸಮೀಪದ ಕಿಚ್ಚಬ್ಬಿ ಗ್ರಾಮದಲ್ಲಿ ನಡೆದಿದೆ.
ತೃಪ್ತಿ ಮೃತ ಮಹಿಳೆಯಾಗಿದ್ದು, ಈಕೆಯ ಪತಿ ರಾಜೇಶ್ ನೀಡಿರುವ ದೂರು ಆಧರಿಸಿ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಚಿರಂಜೀವಿ ಕೃತ್ಯದ ಬಳಿಕ ಪರಾರಿಯಾಗಿದ್ದ. ಸದ್ಯ ಆತನನ್ನು ಜಿಲ್ಲಾ ಪೊಲೀಸ್ ಇಲಾಖೆ ವಿಶೇಷ ತಂಡ ರಚನೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಪೊಲೀಸರು ಮೃತ ದೇಹವನ್ನು ಬಾಳೆಹೊನ್ನೂರು ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
ಪ್ರಕರಣದ ಹಿನ್ನೆಲೆ: "ಸಾಮಾಜಿಕ ಜಾಲತಾಣದ ಮೂಲಕ ಮೃತ ಮಹಿಳೆ ತೃಪ್ತಿಗೆ ಆರೋಪಿ ಚಿರಂಜೀವಿಯ ಪರಿಚಯವಾಗಿತ್ತು. ಇಬ್ಬರ ಮಧ್ಯೆ ಸ್ನೇಹ ಬೆಳೆದು ಮತ್ತೆ ಇಬ್ಬರೂ ರಿಲೇಶನ್ಶಿಪ್ನಲ್ಲಿ ಇರುತ್ತಾರೆ. ಇತ್ತೀಚೆಗೆ 2 ತಿಂಗಳ ಹಿಂದೆ ತೃಪ್ತಿ ಆರೋಪಿ ಜತೆ ಹೋಗಿದ್ದರು. ಈ ಮಾಹಿತಿ ಗೊತ್ತಾಗಿ ತೃಪ್ತಿ ಪತ್ತೆಯಾಗುತ್ತಾರೆ. ಬಳಿಕ ತನ್ನ ಪತಿ ಮಕ್ಕಳೊಂದಿಗೆ 2 ತಿಂಗಳಿಂದ ಅವರ ಸಾಂಸಾರಿಕ ಜೀವನವನ್ನು ನಡೆಸುತ್ತಿರುತ್ತಾರೆ. ಈ ಮಧ್ಯದಲ್ಲಿ ಆರೋಪಿ ಚಿರಂಜೀವಿ ಮನೆಗೆ ಬಂದು ನನ್ನ ಜೊತೆ ಮಾತನಾಡುತ್ತಿಲ್ಲವೆಂದು ಗಲಾಟೆ ಮಾಡಿ ಚಾಕುವಿನಿಂದ ಇರಿದಿದ್ದಾನೆ. ಆಗ ಆಕೆ ಅರೆಬರೆ ಜೀವದಲ್ಲಿದ್ದಾಗ ಕೆರೆಗೆ ಮಹಿಳೆಯನ್ನು ಎಸೆದಿದ್ದಾನೆ'' ಎಂದು ಎಸ್ಪಿ ವಿಕ್ರಂ ಆಮಟೆ ಮಾಹಿತಿ ನೀಡಿದ್ದಾರೆ..
ಪ್ರಕರಣಕ್ಕೆ ಸಂಬಂಧಿಸಿ ಮುಂದಿನ ಬೆಳವಣಿಗೆ ಕುರಿತು ತಿಳಿಸಲಾಗುವುದು ಎಂದು ಎಸ್ಪಿ ವಿವರಿಸಿದರು.
ಇದನ್ನೂ ಓದಿ: ಧಾರವಾಡದ ರಿಯಲ್ ಎಸ್ಟೇಟ್ ಉದ್ಯಮಿ ಕೊಲೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ