ಹಾವೇರಿ: ಪ್ರಮುಖ ಸಾಂಬಾರು ಪದಾರ್ಥಗಳಲ್ಲಿ ಒಂದಾದ ಕಾಳುಮೆಣಸನ್ನು ವಿಶೇಷವಾಗಿ ಉತ್ತರಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚು ಬೆಳೆಯುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ, ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಚಿನ್ನಮುಳಗುಂದ ಗ್ರಾಮದ ರೈತರೊಬ್ಬರು ತಮ್ಮ ಅಡಕೆ ತೋಟದಲ್ಲಿ ಕಾಳುಮೆಣಸು ಬೆಳೆದು ಅಚ್ಚರಿ ಮೂಡಿಸಿದ್ದಾರೆ.
ಗ್ರಾಮದ ಸಂಜೀವಯ್ಯ ಚೆನ್ನಬಸವಯ್ಯ ಕಬ್ಬಿಣಕಂತಿಮಠ ಯುವ ರೈತ ಕಾಳುಮೆಣಸು ಬೆಳೆದಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ಸಂಜೀವಯ್ಯ ಈ ಬಗ್ಗೆ ಪ್ರಗತಿಪರ ರೈತರಲ್ಲಿ ಒಬ್ಬರಾದ ಮಾಲತೇಶ ಪೂಜಾರ್ ಬಳಿ ಚರ್ಚಿಸಿದ್ದರು. ಇಬ್ಬರು ಕಾಳುಮೆಣಸು ಬೆಳೆಯಲು ಮುಂದಾದಗ ಬಹಳಷ್ಟು ಜನ ನಷ್ಟ ಅನುಭವಿಸುತ್ತೀರಿ ಎಂದು ಸಲಹೆ ನೀಡಿದ್ದರು. ಆದರೂ ಯಾಕೆ ಪ್ರಯೋಗ ಮಾಡಬಾರದು ಎಂದು ಸಂಜೀವಯ್ಯ ಶಿರಸಿಗೆ ತೆರಳಿ ಅಲ್ಲಿ 12 ರೂಪಾಯಿಗೆ ಒಂದರಂತೆ ಕಾಳುಮೆಣಸು ಸಸಿ ತಂದು ತಮ್ಮ ಮೂರು ಎಕರೆ ಅಡಕೆ ತೋಟದಲ್ಲಿ ನಾಟಿ ಮಾಡಿದ್ದಾರೆ.
ಬರೋಬ್ಬರಿ 1200 ಸಸಿ ತಂದು ಅಡಕೆ ತೋಟದಲ್ಲಿ ನೆಟ್ಟಿದ್ದಾರೆ. ಇದೀಗ ಈ ಸಸಿಗಳಿಗೆ ಎರಡು ವರ್ಷವಾಗಿದ್ದು, ಕಾಳುಮೆಣಸು ಫಸಲು ನೀಡಲಾರಂಭಿಸಿದೆ. ಪ್ರತಿಯೊಂದು ಸಸಿಯಿಂದ ವರ್ಷಕ್ಕೆ ಒಂದು ಕೆಜಿಯಿಂದ ಐದು ಕೆಜಿಯವರೆಗೆ ಫಸಲು ಬರುವ ನಿರೀಕ್ಷೆಯಲ್ಲಿ ಸಂಜೀವಯ್ಯ ಕಬ್ಬಿಣಕಂತಿಮಠ ಇದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರತಿ ಎಕರೆಗೆ ಮೂರರಿಂದ ನಾಲ್ಕು ಲಕ್ಷ ರೂಪಾಯಿ ಆದಾಯ ಬರುತ್ತದೆ. ಆದರೆ, ನಮ್ಮಲ್ಲಿ ವರ್ಷಕ್ಕೆ ಒಂದು ಎಕರೆಗೆ ಮೂರು ಲಕ್ಷ ಆದಾಯ ಬಂದರೆ ಸಾಕು ಎನ್ನುತ್ತಿದ್ದಾರೆ ಸಂಜೀವಯ್ಯ. ಸಸಿ ನೆಟ್ಟು ಆರು ಅಡಿ ಆಗುವವರೆಗೆ ಸ್ವಲ್ಪ ಜೋಪಾನ ಮಾಡಬೇಕು. ಆದಾದ ನಂತರ ಬಳ್ಳಿ ಅಡಕೆ ಮರಗಳಿಗೆ ತಾನೇ ಅಂಟಿಕೊಳ್ಳಲಾರಂಭಿಸುತ್ತದೆ. ಐದು ಟಿಸಿಲುಗಳಿಂದ ಹಿಡಿದು 25 ಟಿಸಿಲುಗಳಾಗಿ ಅಡಕೆ ಮರಗಳಿಗೆ ಕಾಳುಮೆಣಸು ಅಂಟಿಕೊಳ್ಳುತ್ತದೆ.
ಕಳೆದ ಎರಡು ವರ್ಷಗಳಿಂದ ಯಾವುದೇ ರೋಗರುಜಿನಗಳು ಬಂದಿಲ್ಲ. ಇನ್ನು ವರ್ಷದಲ್ಲಿ ಎರಡು ಬಾರಿ ಕೊಟ್ಟಿಗೆ ಗೊಬ್ಬರ ಹಾಕಿದ್ದು ಮೂರು ತಿಂಗಳಿಗೊಮ್ಮೆ ಬಳ್ಳಿಯ ಬುಡಕ್ಕೆ ಒಂದು ಲೀಟರ್ ಜೀವಾಮೃತ ನೀಡುತ್ತಾ ಬಂದಿರುವುದಾಗಿ ಸಂಜೀವಯ್ಯ ತಿಳಿಸಿದ್ದಾರೆ. ಸರಿಯಾಗಿ ನೀರು ನಿರ್ವಹಣೆ ಮಾಡಿದರೆ ಸಾಕು ಬಳ್ಳಿತುಂಬ ಕಾಳುಮೆಣಸು ಕಟ್ಟಿಕೊಳ್ಳುತ್ತೆ ಎಂದು ತಿಳಿಸಿದ್ದಾರೆ.
ಸಂಜೀವಯ್ಯ ಆಸಕ್ತಿ ಮತ್ತು ಸರಿಯಾದ ನಿರ್ವಹಣೆಯಿಂದ ಕಾಳುಮೆಣಸಿನ ಬಳ್ಳಿಗಳು ನಳನಳಿಸುತ್ತಿವೆ. ಜೊತೆಗೆ ಗೊಂಚಲು ಗೊಂಚಲಾಗಿ ಕಾಳುಮೆಣಸು ಕಚ್ಚಿಕೊಂಡಿವೆ. ಆರಂಭದಲ್ಲಿ ಹಸಿರಾಗಿರುವ ಕಾಳುಮೆಣಸು ನಂತರ ಹಣ್ಣಾಗುತ್ತದೆ ಆದಾದ ನಂತರ ಒಣಗಿ ಕಪ್ಪಾಗುತ್ತದೆ. ಈ ಕಾಳುಮೆಣಸಿಗೆ ಸಾಕಷ್ಟು ಬೇಡಿಕೆ ಇದ್ದು, ಹಲವು ರೈತರು ಇದನ್ನೇ ಬೆಳೆಯುತ್ತಿದ್ದಾರೆ. ಆರಂಭದಲ್ಲಿ ಸಂಜೀವಯ್ಯಗೆ ಹೆದರಿಸಿದ ರೈತರು ಇದೀಗ ಇವರ ತೋಟ ನೋಡಿ ಆಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಸಂಜೀವಯ್ಯ ಶ್ರಮವೇ ಕಾರಣ ಎಂದು ಅಕ್ಕಪಕ್ಕದ ರೈತರು ಹೇಳಿದ್ದಾರೆ. ಸಂಜೀವಯ್ಯ ಅಡಕೆ ತೋಟದಲ್ಲಿ ಕೇವಲ ಅಡಕೆ ಕಾಳುಮೆಣಸು ಮಾತ್ರ ಬೆಳೆದಿಲ್ಲ. ಅದರ ಜೊತೆಗೆ ದಾಲ್ಚಿನ್ನಿ, ಲವಂಗ, ಏಲಕ್ಕಿ ಸೇರಿದಂತೆ ವಿವಿಧ ಬೆಳೆಗಳನ್ನು ಪ್ರಾಯೋಗಿಕವಾಗಿ ಬೆಳೆಯುತ್ತಿದ್ದಾರೆ. ಇವರ ಈ ಆಸಕ್ತಿ ಉಳಿದ ರೈತರಿಗೆ ಮಾದರಿಯಾಗಿದೆ.