ಮೈಸೂರು: ಜಿಲ್ಲೆಯ ಕುಟುಂಬವೊಂದು ವಿವಿಧ ತಳಿಯ ದೇಸಿ ಹಸುಗಳು ಸಾಕುತ್ತಿದ್ದು, ಕರುಗಳಿಗೆ ಮಕ್ಕಳಂತೆ ತೊಟ್ಟಿಲು ಶಾಸ್ತ್ರವನ್ನೂ ಮಾಡಿದ್ದಾರೆ. ಮೈಸೂರಿನ ಕೃಷ್ಣಮೂರ್ತಿಪುರಂನ ಶಾರದಾ ವಿಲಾಸ ಕಾಲೇಜಿನ ಹಿಂಭಾಗದ ಕೆ.ಆರ್.ವನಂ ಎಂಬಲ್ಲಿ ವಾಸವಾಗಿರುವ ಮಧುಸೂದನ ತಾತಾಚಾರ್ಯ ಮತ್ತು ಕುಟುಂಬಸ್ಥರು ತಲಕಾಡಿನಲ್ಲಿ 10 ವರ್ಷಗಳಿಂದ ಗೋಶಾಲೆ ನಡೆಸಿಕೊಂಡು ಬರುತ್ತಿದ್ದಾರೆ. ತಮ್ಮ ಮನೆಯಲ್ಲಿ ಮೂರು ವರ್ಷಗಳಿಂದ ಪುಂಗನೂರು ಎಂಬ ಆಂಧ್ರ ಪ್ರದೇಶ ಮೂಲದ ದೇಸಿ ಹಸುಗಳನ್ನು ಸಾಕುತ್ತಿದ್ದಾರೆ.
ಮೂರು ಹಸು ಮತ್ತು ಎರಡು ಕರುಗಳನ್ನು ಮನೆಯ ಕಾರ್ ಶೆಡ್ನಲ್ಲಿ ಇಟ್ಟುಕೊಂಡಿದ್ದಾರೆ. ಕಾರ್ ಶೆಡ್ ಕೌ ಶೆಡ್ ಆಗಿ ಪರಿವರ್ತಿಸಿ ಸಿರಿ, ನಿಧಿ, ಸಿಹಿ ಎಂಬ ಹಸುಗಳು ಮತ್ತು ಸಿರಿಯ ಮಗಳಾದ ಭುವಿ ಮತ್ತು ನಿಧಿಯ ಮಗಳಾದ ಸ್ವಾತಿ ಎಂಬ ಕರುಗಳನ್ನು ಸಾಕುತ್ತಿದ್ದಾರೆ. ಇತ್ತೀಚೆಗಷ್ಟೇ ಎರಡೂ ಕರುಗಳಿಗೆ ತೊಟ್ಟಿಲು ಶಾಸ್ತ್ರ ನೆರವೇರಿಸಿದ್ದಾರೆ.
ಬಂಧುಗಳು, ಕುಟುಂಬದವರು, ಹಿತೈಷಿಗಳು, ನೆರೆಹೊರೆಯವರು, ಗೋಭಕ್ತರು, ಸ್ನೇಹಿತರು-ಇವರೆಲ್ಲರ ಸಹಕಾರ ಮತ್ತು ಪ್ರೋತ್ಸಾಹಗಳೊಂದಿಗೆ ತಲಕಾಡಿನ ಹೊಸಬೀದಿಯಲ್ಲಿ ಹರಿ ಬ್ರಹ್ಮ ಗೋ ಸೇವಾ ಟ್ರಸ್ಟ್ ಎಂಬ ಗೋಶಾಲೆಯನ್ನು ತಮ್ಮ ಪೂರ್ವಿಕರ ಮನೆಯಲ್ಲಿ ಹತ್ತು ವರ್ಷಗಳಿಂದ ಗೋಶಾಲೆ ನಡೆಸಿಕೊಂಡು ಬರಲಾಗುತ್ತಿದೆ.
"ಮಕ್ಕಳಂತೆ, ಮನೆಯ ಸದಸ್ಯರಂತೆ ಹಸುಗಳನ್ನು ಸಾಕುವ ವಿಶಿಷ್ಟ ಸಂಸ್ಕೃತಿಯು ನಮ್ಮ ದೇಶದಲ್ಲಿದೆ. ಅದರಂತೆ ನಾವು ಮನೆಯ ಮಕ್ಕಳಂತೆ ಹಸುಗಳನ್ನು ನೋಡಿಕೊಳ್ಳುತ್ತಾ, ಮಾತೃ ಸ್ವರೂಪವಾದ, ಮುಕ್ಕೋಟಿ ದೇವತೆಗಳು ವಾಸಸ್ಥಾನವಾದ ಗೋವುಗಳ ಸೇವೆ ಮಾಡಿಕೊಂಡು ಬಂದಿದ್ದೇವೆ" ಎಂದು ಗೋ ಪೋಷಕರಾದ ಮಧುಸೂದನ್ ತಾತಾಚಾರ್ಯ ಹೇಳಿದರು.
"ದೇಸಿ ತಳಿಗಳಾದ ಒಂಗೋಲ್, ಥಾರ್‌ಪಾರ್ಕರ್, ಗೀರ್, ಬರಗೂರು, ಸಾಹಿವಾಲ್ ತಳಿಗಳನ್ನು ಇಲ್ಲಿ ಉಳಿಸಿ ಬೆಳೆಸಲಾಗುತ್ತಿದೆ. ಉತ್ಕೃಷ್ಟ ಗುಣಮಟ್ಟದ ಹಾಲು ಕೊಡುವಂತಹ, ಆರೋಗ್ಯಕರ ವಾತಾವರಣ ನಿರ್ಮಿಸುವ, ಸ್ನೇಹಮಯ ಜೀವಿಗಳಾದ, ಸಾಕಿದವರ ಮನೆಯಲ್ಲಿ ನೆಮ್ಮದಿಯನ್ನುಂಟು ಮಾಡುವ, ಮಕ್ಕಳಂತೆ ಆಡುವ, ತಾಯಿಯಂತೆ ಕಾಯುವ, ವಿಶೇಷ ಲಕ್ಷಣಗಳಿಂದ ಕೂಡಿದ ಸುಂದರ ರೂಪವುಳ್ಳ ನಮ್ಮ ಭಾರತೀಯ ಗೋ ತಳಿಗಳು ಮನುಕುಲದ ನಿರ್ಲಕ್ಷ್ಯದ ಕಾರಣ ಇಂದು ಅಳಿವಿನ ಅಂಚಿಗೆ ಬಂದಿದೆ".
"ಕೇವಲ ಹಾಲು ಉತ್ಪಾದನೆ ಮತ್ತು ಹಣ ಸಂಪಾದನೆ ಗುರಿಯಾಗಿ ಇಟ್ಟುಕೊಳ್ಳದೇ ದೇಸಿ ಗೋವುಗಳನ್ನು ಸ್ವತ: ಬೆಳೆಸುವುದು ಅಥವಾ ಅವುಗಳನ್ನು ಬೆಳೆಸುವ ಗೋಶಾಲೆಗಳಿಗೆ ಎಲ್ಲ ರೀತಿಯ ಸಹಕಾರ ನೀಡುವುದು ಸಮಾಜವು ಒಗ್ಗಟ್ಟಿನಿಂದ ಮಾಡಬೇಕಾದ ಜವಾಬ್ದಾರಿಯುತ ಕೆಲಸವಾಗಿದೆ. ನಮ್ಮ ದೇಶದ ಗೋವು ಎಂಬ ಸಂಪತ್ತನ್ನು ಉಳಿಸಿ, ಬೆಳೆಸಿ, ಆರೋಗ್ಯಕರ ಸಮಾಜ ನಿರ್ಮಿಸುವ ಹಾದಿಯಲ್ಲಿ ನಾವೆಲ್ಲರೂ ಸಾಗೋಣ. ನಾವು ಮನೆಯ ಮಕ್ಕಳಂತೆ ಹಸುಗಳನ್ನು ನೋಡಿಕೊಳ್ಳುತ್ತಾ, ಮಾತೃ ಸ್ವರೂಪ, ಮುಕ್ಕೋಟಿ ದೇವತೆಗಳು ವಾಸಸ್ಥಾನವಾದ ಗೋವುಗಳ ಸೇವೆಯನ್ನು ಮಾಡಿಕೊಂಡು ಬಂದಿದ್ದೇವೆ" ಎನ್ನುತ್ತಾರೆ ಮಧುಸೂದನ್ ತಾತಾಚಾರ್ಯ.
ಇದನ್ನೂ ಓದಿ: ಮೈಸೂರು ಪ್ರವಾಸೋದ್ಯಮ ಅಭಿವೃದ್ದಿಗೆ ವಿಮಾನಯಾನ ಸಂಸ್ಥೆಗಳ ಜತೆ ಮಾತುಕತೆ: ಸಂಸದ ಯದುವೀರ್ ಒಡೆಯರ್