ಬೆಂಗಳೂರು: ಚಲಿಸುತ್ತಿದ್ದ ಆಟೋ ರಿಕ್ಷಾದ ಮೇಲೆ ಮರದ ಕೊಂಬೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಆಟೋ ಚಾಲಕ ಖಲೀಲ್ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಈ ಕುರಿತು ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಯನಗರದ 4 ಟಿ ಬ್ಲಾಕ್‌ನ 16ನೇ ಮುಖ್ಯರಸ್ತೆಯಲ್ಲಿ ಚಲಿಸುತ್ತಿರುವ ಆಟೋ ಮೇಲೆ ಮರದ ಬೃಹತ್ ಕೊಂಬೆ ಮುರಿದು ಬಿದ್ದಿತ್ತು. ಆಟೋದಲ್ಲಿ ಚಾಲಕ ಹಾಗೂ ಇಬ್ಬರು ಪ್ರಯಾಣಿಕರಿದ್ದರು. ಕೊಂಬೆ ಬಿದ್ದ ಪರಿಣಾಮ ಚಾಲಕ ಗಂಭೀರವಾಗಿ ಗಾಯಗೊಂಡಿದ್ದರು. ಹಿಂಬದಿ ಕುಳಿತಿದ್ದ ಓರ್ವ ಪ್ರಯಾಣಿಕನಿಗೂ ಗಾಯವಾಗಿತ್ತು. ತೀವ್ರ ರಕ್ತಸ್ರಾವವಾಗಿದ್ದ ಚಾಲಕನನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಸಾರ್ವಜನಿಕರು ಆಟೋದ ಮೇಲೆ ಬಿದ್ದ ಮರದ ಕೊಂಬೆ ತೆರವು ಮಾಡಲು ಹರಸಾಹಸಪಟ್ಟಿದ್ದರು. ಬಳಿಕ ಬಿಬಿಎಂಪಿ ಅರಣ್ಯ ಘಟಕದ ಸಹಯೋಗದೊಂದಿಗೆ ಕೊಂಬೆಯನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಇದನ್ನೂ ಓದಿ: ರಾಜ್ಯದೆಲ್ಲೆಡೆ ಮತ್ತೆ 4 ದಿನಗಳ ಕಾಲ ಮಳೆ: 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ - karnataka rain alert